ಕೇಂದ್ರ ಸಚಿವನಾದ ಮೇಲೆ ದುಡ್ಡೇ ಬರುತ್ತಿಲ್ಲ; ರಾಜೀನಾಮೆಯ ಸುಳಿವು ನೀಡಿದ ಸುರೇಶ್ ಗೋಪಿ

ಕೇರಳದ ಕೇಂದ್ರ ಸಚಿವ ಸುರೇಶ್ ಗೋಪಿ ಅವರಿಗೆ ರಾಜಕೀಯಕ್ಕೆ ಹೋದ ಮೇಲೆ ಹಣವೇ ಸಿಗುತ್ತಿಲ್ಲವಂತೆ. ಕೇಂದ್ರ ಸಚಿವನಾದ ಬಳಿಕ ತಮ್ಮ ಆದಾಯದಲ್ಲಿ ಕುಸಿತವಾಗಿದೆ ಎಂದು ಹೇಳಿರುವ ಸುರೇಶ್ ಗೋಪಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಸಿನಿಮಾರಂಗಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ಬಿಟ್ಟು ಸಿನಿಮಾ ವೃತ್ತಿಜೀವನವನ್ನು ಪುನರಾರಂಭಿಸುವ ಬಗ್ಗೆ ಅವರು ಮಾತನಾಡಿದ್ದಾರೆ.

ಕೇಂದ್ರ ಸಚಿವನಾದ ಮೇಲೆ ದುಡ್ಡೇ ಬರುತ್ತಿಲ್ಲ; ರಾಜೀನಾಮೆಯ ಸುಳಿವು ನೀಡಿದ ಸುರೇಶ್ ಗೋಪಿ
Suresh Gopi

Updated on: Oct 13, 2025 | 10:41 PM

ತಿರುವನಂತಪುರಂ, ಅಕ್ಟೋಬರ್ 13: ಸಚಿವನಾದ ನಂತರ ನನ್ನ ಆದಾಯವೇ ಕಡಿಮೆಯಾಗಿದೆ. ಹೀಗಅಗಿ, ರಾಜಕೀಯ ಬಿಟ್ಟು ಮತ್ತೆ ಸಿನಿಮಾ ಮಾಡುವ ಬಗ್ಗೆಯೂ ಯೋಚಿಸುತ್ತಿದ್ದೇನೆ ಎಂದು ಕೇಂದ್ರ ಸಚಿವ ಹಾಗೂ ನಟ ಸುರೇಶ್ ಗೋಪಿ (Suresh Gopi) ಹೇಳಿದ್ದಾರೆ. ಕೇರಳದಲ್ಲಿ ಮಾತನಾಡಿದ ಅವರು ಚಲನಚಿತ್ರ ಆದಾಯ ಸ್ಥಗಿತಗೊಂಡಿರುವುದನ್ನು ಉಲ್ಲೇಖಿಸಿ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ನನ್ನ ಬದಲು ಕೇಂದ್ರ ಸಚಿವ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ಸಿ. ಸದಾನಂದನ್ ಮಾಸ್ಟರ್ ಅವರನ್ನು ತಮ್ಮ ಬದಲು ನೇಮಕ ಮಾಡಿಕೊಳ್ಳಲು ಶಿಫಾರಸು ಮಾಡುವುದಾಗಿಯೂ ಅವರು ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟನ್ನು ಉಲ್ಲೇಖಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ ರಾಜಕೀಯದಿಂದ ದೂರ ಸರಿದು ತಮ್ಮ ನಟನಾ ವೃತ್ತಿಜೀವನಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ನಟ-ರಾಜಕಾರಣಿ ಕೇರಳದ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸಚಿವ ಸ್ಥಾನವನ್ನು ವಹಿಸಿಕೊಂಡಾಗಿನಿಂದ ನನ್ನ ಆದಾಯ ಗಮನಾರ್ಹವಾಗಿ ಕುಸಿದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Suresh Gopi: ಕೇರಳದಲ್ಲಿ ಅರಳಿದ ಕಮಲ; ಸುರೇಶ್ ಗೋಪಿ ಎಂಬ ನಾಯಕ-ನಟನ ಪರಿಶ್ರಮಕ್ಕೆ ಸಂದ ಗೆಲುವು ಇದು

“ಸಚಿವನಾದ ನಂತರ ನನ್ನ ಆದಾಯ ಕಡಿಮೆಯಾಗಿದೆ. ಹೀಗಾಗಿ, ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಹಣ ಗಳಿಸಬೇಕಾಗಿದೆ. ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ” ಎಂದು ಅವರು ಹೇಳಿದ್ದಾರೆ.


ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಗೋಪಿ, ನನ್ನ ನಟನಾ ವೃತ್ತಿಜೀವನವನ್ನು ಪಣಕ್ಕಿಟ್ಟು ಸಚಿವರಾಗಲು ಎಂದಿಗೂ ಆಶಿಸಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Suresh Gopi: ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ!

“ನನ್ನನ್ನು ತೆಗೆದುಹಾಕಿದ ನಂತರ ಕೇರಳದಲ್ಲಿ ಹೊಸದಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯ ಸದಾನಂದನ್ ಮಾಸ್ಟರ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಬೇಕೆಂದು ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇದು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವಾಗುತ್ತದೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದ್ದಾರೆ.

ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಸುರೇಶ್ ಗೋಪಿ, ಅಕ್ಟೋಬರ್ 2016ರಲ್ಲಿ ಬಿಜೆಪಿ ಸೇರಿದರು. 2024ರಲ್ಲಿ ತ್ರಿಶೂರ್‌ನಿಂದ ಲೋಕಸಭೆಗೆ ಪದಾರ್ಪಣೆ ಮಾಡಿದರು. ಪ್ರಸ್ತುತ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ