ವೈದ್ಯರು ತಪ್ಪು ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಸಾವು; ಕೇರಳದಲ್ಲೊಂದು ಅಮಾನವೀಯ ಘಟನೆ

|

Updated on: Jul 22, 2024 | 10:37 AM

ಚಿಕಿತ್ಸೆಗೆಂದು ತಮ್ಮ ಬಳಿ ಬಂದ ಮಹಿಳಾ ರೋಗಿಗೆ ವೈದ್ಯರೊಬ್ಬರು ತಪ್ಪಾದ ಇಂಜೆಕ್ಷನ್ ನೀಡಿದ್ದಾರೆ. ಇದರಿಂದಾಗಿ ಆ ಮಹಿಳೆ ಕಳೆದ ಐದು ದಿನಗಳಿಂದ ಪ್ರಜ್ಞಾಹೀನರಾಗಿದ್ದರು. ಬಳಿಕ ಇದೀಗ ಆಕೆ ಮೃತಪಟ್ಟಿದ್ದಾರೆ. ಇದಕ್ಕೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

ವೈದ್ಯರು ತಪ್ಪು ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಸಾವು; ಕೇರಳದಲ್ಲೊಂದು ಅಮಾನವೀಯ ಘಟನೆ
ಇಂಜೆಕ್ಷನ್
Follow us on

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ 28 ವರ್ಷದ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರು ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಆಕೆ ಪ್ರಜ್ಞಾಹೀನಳಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಂಜೆಕ್ಷನ್ ನೀಡ 5 ದಿನಗಳಿಂದ ಪ್ರಜ್ಞೆ ಕಳೆದುಕೊಂಡಿದ್ದ ಮಹಿಳೆ ಭಾನುವಾರ ಮೃತಪಟ್ಟಿದ್ದಾರೆ.

ಮಲಯಿಂಕೀಝು ಮೂಲದ 28 ವರ್ಷದ ಮಹಿಳೆ ಭಾನುವಾರ ಬೆಳಗ್ಗೆ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ತಪ್ಪಾದ ಚುಚ್ಚುಮದ್ದನ್ನು ನೀಡಿದ ನಂತರ 5 ದಿನಗಳ ಕಾಲ ಆಕೆ ಪ್ರಜ್ಞಾಹೀನಳಾಗಿದ್ದರು. ಇದಕ್ಕೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ತಪ್ಪಾದ ಇಂಜೆಕ್ಷನ್ ನೀಡಿದ್ದಕ್ಕಾಗಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: World Brain Day 2024: ಆರೋಗ್ಯಕರ ಮೆದುಳಿಗೆ ಈ ಆಹಾರಗಳ ಸೇವನೆ ಹೆಚ್ಚಿರಲಿ

ನೆಯ್ಯಟ್ಟಿಂಕರ ಜನರಲ್ ಆಸ್ಪತ್ರೆಯ ಡಾ. ವಿನು ಅವರು ಕಳೆದ ವಾರ ಕಿಡ್ನಿ ಸ್ಟೋನ್‌ಗೆ ಚಿಕಿತ್ಸೆ ಪಡೆಯಲು ಬಂದ ಮಹಿಳೆಗೆ ತಪ್ಪಾದ ಇಂಜೆಕ್ಷನ್ ನೀಡಿದ್ದರು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಪ್ರಜ್ಞೆ ತಪ್ಪಿ ಆಕೆಯ ಆರೋಗ್ಯ ಹದಗೆಟ್ಟ ನಂತರ ಆಕೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಆಕೆಯ ಪತಿ ಶರತ್ ನೀಡಿದ ದೂರಿನ ಮೇರೆಗೆ ನೆಯ್ಯಟ್ಟಿಂಕರ ಪೊಲೀಸರು ಡಾ. ವಿನು ವಿರುದ್ಧ ಜುಲೈ 19ರಂದು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನ ಪ್ರಕಾರ, ಈಗಾಗಲೇ ಕೆಲವು ಅಲರ್ಜಿ ಸಮಸ್ಯೆಗಳಿದ್ದ ಮೃತ ಮಹಿಳೆಗೆ ಕಿಡ್ನಿಯಲ್ಲಿ ಕಲ್ಲು ಉಂಟಾಗಿದ್ದರಿಂದ ಡಾಕ್ಟರ್ ವಿನು ಅವರಿಂದ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಮತ್ತು ಯಾವುದೇ ಅಲರ್ಜಿ ಪರೀಕ್ಷೆಯನ್ನು ನಡೆಸದೆ ರೋಗಿಗೆ ಕೆಲವು ಇಂಜೆಕ್ಷನ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಡೆಂಗ್ಯೂ, ಚಿಕುನ್ ಗುನ್ಯಾ ಜತೆ ಬೆಂಗಳೂರನ್ನು ಕಾಡುತ್ತಿದೆ ಇಲಿ ಜ್ವರದ ಆತಂಕ: ವೈದ್ಯರು ನೀಡಿದ ಮುನ್ನೆಚ್ಚರಿಕೆ ಸಲಹೆಗಳು ಇಲ್ಲಿವೆ

ಆದರೆ, ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ಕೆಜಿಎಂಒಎ) ಡಾ.ವಿನು ವಿರುದ್ಧ ಕುಟುಂಬದ ಆರೋಪಗಳನ್ನು ತಳ್ಳಿಹಾಕಿದೆ. ವೈದ್ಯರು ನೀಡಿದ ಚುಚ್ಚುಮದ್ದನ್ನು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವುದು ಬಹಳ ಸಾಮಾನ್ಯ ಎಂದು ಸಂಘವು ಹೇಳಿಕೊಂಡಿದೆ.

ಮಹಿಳೆಯ ಸ್ಥಿತಿಯು ಅನಾಫಿಲ್ಯಾಕ್ಸಿಸ್ ಕಾರಣದಿಂದಾಗಿರಬಹುದು ಎಂದು ಅವರು ಸೂಚಿಸಿದ್ದಾರೆ. ಯಾವುದೇ ಔಷಧಿಗಳೊಂದಿಗೆ ಸಂಭವಿಸಬಹುದಾದ ತೀವ್ರ ಮತ್ತು ತ್ವರಿತ ಅಲರ್ಜಿಯ ಪ್ರತಿಕ್ರಿಯೆ ಇದಾಗಿದೆ. ಇದನ್ನು ಚಿಕಿತ್ಸೆಯ ನಿರ್ಲಕ್ಷ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೆಜಿಎಂಒಎ ಪ್ರತಿಪಾದಿಸಿದೆ.

ತಿರುವನಂತಪುರಂ ಸಂಸದ ಶಶಿ ತರೂರ್ ಮಹಿಳೆಯ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿರುವ ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ