ಪ್ರೇಯಸಿಯನ್ನು ಮದುವೆಯಾಗಲು ಅಪಘಾತದ ನಾಟಕವಾಡಿದ ಯುವಕನ ಪ್ಲಾನ್ ಉಲ್ಟಾ ಆಗಿದ್ದು ಹೇಗೆ?
ಕೇರಳದಲ್ಲಿ ತಾನು ಪ್ರೀತಿಸಿದ ಯುವತಿಯ ಮನೆಯವರನ್ನು ಮೆಚ್ಚಿಸಲು ಯುವಕನೊಬ್ಬ ರಸ್ತೆ ಅಪಘಾತದ ನಾಟಕವಾಡಿದ್ದ. ಆದರೆ, ಆಕೆಯ ಮನೆಯವರೆದುರು ಹೀರೋ ಆಗಬೇಕೆಂದುಕೊಂಡಿದ್ದ ಆತ ಈಗ ವಿಲನ್ ಆಗಿ ಜೈಲು ಸೇರಿದ್ದಾನೆ. ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ನಡೆದ ಈ ಘಟನೆ ಬಹಳ ಕುತೂಹಲಕಾರಿಯಾಗಿದೆ. ಸಿನಿಮೀಯ ಸ್ಟೈಲ್ನಲ್ಲಿ ಹುಡುಗಿಯ ಮನೆಯವರನ್ನು ಮೆಚ್ಚಿಸಲು ಹೋದ ಯುವಕನ ಪ್ಲಾನ್ ಉಲ್ಟಾ ಆಗಿದ್ದು ಹೇಗೆ?

ತಿರುವನಂತಪುರಂ, ಜನವರಿ 8: ಕೇರಳದಲ್ಲಿ ಕೆಲವು ದಿನಗಳ ಹಿಂದೆ ಅಪಘಾತವೊಂದು ನಡೆದಿತ್ತು. ಆರಂಭದಲ್ಲಿ ಇದೊಂದು ಗಂಭೀರ ರಸ್ತೆ ಅಪಘಾತ (Accident) ಎಂದು ಪೊಲೀಸರು ಕೂಡ ನಂಬಿದ್ದರು. ಆದರೆ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಘಟನೆಯನ್ನು ಉದ್ದೇಶಪೂರ್ವಕವಾಗಿ ಪ್ಲಾನ್ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳಾದ ಕೋನ್ನಿ ಬಳಿಯ ಮಮ್ಮೂಡು ಮೂಲದ ರಂಜಿತ್ ರಾಜನ್ (24) ಮತ್ತು ಎರಡನೇ ಆರೋಪಿ ಅಜಾಸ್ (19) ಅವರನ್ನು ವಶಕ್ಕೆ ಪಡೆಯಲಾಯಿತು.
ತನ್ನ ಗೆಳತಿಯನ್ನು ಮೆಚ್ಚಿಸಿ ಅವಳನ್ನು ಮದುವೆಯಾಗಬೇಕೆಂದು ಕನಸು ಕಂಡಿದ್ದ ಪ್ರೇಮಿ ಅದಕ್ಕಾಗಿ ಆಕೆಯ ಮನೆಯವರನ್ನು ಮೆಚ್ಚಿಸಲು ಅಪಘಾತದ ನಾಟಕವನ್ನು ಆಡಿದನು. ಆ ಯುವತಿ ಹೋಗುತ್ತಿದ್ದ ಸ್ಕೂಟಿಗೆ ತಾನೇ ಅಪಘಾತ ಮಾಡಿಸಿದನು. ಬಳಿಕ ತಾನೇ ಆಕೆಯನ್ನು ರಕ್ಷಿಸಿ ಹೀರೋ ಆಗಲು ಪ್ಲಾನ್ ಮಾಡಿದ್ದನು. ಈ ವಿಚಿತ್ರ ಘಟನೆ ಕೇರಳದ ಪಥನಂತಿಟ್ಟದಲ್ಲಿ ನಡೆದಿದೆ.
ಇದನ್ನೂ ಓದಿ: 20 ದಿನ ಸಾವು ಬದುಕಿನ ನಡುವೆ ಹೋರಾಡಿದರೂ ಉಳಿಯಲಿಲ್ಲ ಜೀವ! ಚಿಕಿತ್ಸೆ ಫಲಿಸದೆ ಸಾವು
ಕೇರಳದ ಪಥನಂತಿಟ್ಟದ ರಂಜಿತ್ ರಾಜನ್ ಎಂಬ ಯುವಕ ಒಬ್ಬಳು ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಮನೆಯವರಿಗೆ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದರೆ ಮಾತ್ರ ಅವರು ಆಕೆಯನ್ನು ತನಗೆ ಮದುವೆ ಮಾಡಿಕೊಡುತ್ತಾರೆ ಎಂದು ಅವನು ಭಾವಿಸಿದ್ದ. ಆಕೆಯ ಮನೆಯವರನ್ನು ಹೇಗೆ ಮೆಚ್ಚಿಸಬಹುದು? ಎಂದು ಯೋಚಿಸಿದ ಆತ ತನ್ನ ಸ್ನೇಹಿತರೊಂದಿಗೆ ಕುಳಿತು ತನ್ನ ಗೆಳತಿಯ ಪೋಷಕರ ದೃಷ್ಟಿಯಲ್ಲಿ ತನ್ನನ್ನು ತಾನು ಹೀರೋ ಎಂದು ತೋರಿಸಲು ಅಪಘಾತದ ಪ್ಲಾನ್ ಮಾಡಿದ್ದ. ಆ ಪ್ಲಾನ್ನಂತೆ ತನ್ನ ಸ್ನೇಹಿತ ಅಜೇಶ್ ಮೂಲಕ ಸ್ಕೂಟಿಯಲ್ಲಿ ಬರುತ್ತಿದ್ದ ತನ್ನ ಪ್ರೇಯಸಿಗೆ ಕಾರಿನಿಂದ ಡಿಕ್ಕಿ ಹೊಡೆಸಿದ್ದ. ಆ ವೇಳೆ ಇನ್ನೊಂದು ಕಾರಿನಲ್ಲಿ ಹಾದುಹೋಗುತ್ತಿದ್ದ ರಂಜಿತ್ ತಾನೇ ಅವಳನ್ನು ಉಳಿಸಿ ಆಸ್ಪತ್ರೆಗೆ ಕರೆದೊಯ್ದಂತೆ ನಾಟಕ ಮಾಡಿದ್ದ.
ಆದರೆ, ಈ ಅಪಘಾತದಲ್ಲಿ ಆಕೆಯ ಮೊಣಕೈ ಮತ್ತು ಬೆರಳು ಮುರಿದಿತ್ತು. ಕಳೆದ ವರ್ಷ ಡಿಸೆಂಬರ್ 23ರಂದು ಈ ಘಟನೆ ನಡೆದಿತ್ತು. ರಂಜಿತ್‌ನ ಪ್ರೇಯಸಿ ಕೋಚಿಂಗ್ ಸೆಂಟರ್‌ನಿಂದ ಸ್ಕೂಟಿಯಲ್ಲಿ ಬರುತ್ತಿದ್ದಾಗ ಆತನ ಸ್ನೇಹಿತ ಕಾರಿನಲ್ಲಿ ಆಕೆಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಈ ಅಪಘಾತದಲ್ಲಿ ತಮ್ಮ ಮಗಳನ್ನು ರಕ್ಷಿಸಿದ್ದಕ್ಕಾಗಿ ಆಕೆಯ ಪೋಷಕರು ಮೆಚ್ಚಿ, ಆಕೆಯನ್ನು ತನಗೆ ಮದುವೆ ಮಾಡಿಕೊಡುತ್ತಾರೆ ಎಂದು ರಂಜಿತ್ ಭಾವಿಸಿದ್ದ.
ಇದನ್ನೂ ಓದಿ: ಸಾವನ್ನಪ್ಪಿದ ಭಿಕ್ಷುಕನ ಬ್ಯಾಗ್ನಲ್ಲಿತ್ತು 4.5 ಲಕ್ಷ ರೂ. ವಿದೇಶಿ ಕರೆನ್ಸಿ
ಆದರೆ ಈ ಕಥೆ ಬೇರೆ ತಿರುವು ಪಡೆದುಕೊಂಡಿತು. ರಂಜಿತ್‌ನ ಈ ಪ್ಲಾನ್ ಬಗ್ಗೆ ತಿಳಿದಿಲ್ಲದ ಆ ಯುವತಿ ಪೊಲೀಸರಿಗೆ ದೂರು ನೀಡಿದಳು. ಅವರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಪೊಲೀಸ್ ತನಿಖೆಯ ಸಮಯದಲ್ಲಿ, ಹಿಟ್-ಆ್ಯಂಡ್ ರನ್ ಕೇಸ್ನಲ್ಲಿ ರಂಜಿತ್‌ನ ಗೆಳೆಯ ಅಜೇಶ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ವಿಚಾರಣೆ ವೇಳೆ ರಂಜಿತ್‌ನ ಪ್ಲಾನ್ ಬಯಲಾಯಿತು. ಇದೀಗ ಪೊಲೀಸರು ರಂಜಿತ್ ಮತ್ತು ಅಜೇಶ್ ಇಬ್ಬರ ವಿರುದ್ಧವೂ ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Thu, 8 January 26
