ಉದ್ಯಮಿ ಕೇತನ್ ಹತ್ಯೆ : ಸೋನಮ್ ರಘುವಂಶಿಯಿಂದ ‘ಕೊಲೆ ಸ್ಕೆಚ್’ ಕಲಿತಿದ್ದ ಸಿಯಾ ಗೋಯಲ್

ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಸಿಯಾ ಗೋಯಲ್ ಪ್ರಮುಖ ಆರೋಪಿ. ಆಕೆ 'ರಾಜಾ ರಘುವಂಶಿ' ಪ್ರಕರಣವನ್ನು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಿ, ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಲೋಹಗಡ್ ಕೋಟೆಯಲ್ಲಿ ಪ್ರಿಯಕರ ಚೇತನ್ ಜೊತೆ ಸೇರಿ ಕೇತನ್‌ನನ್ನು ಕೊಂದಿದ್ದಾಳೆ. ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದೆ. ಆರೋಪಿಗಳು ಪಶ್ಚಾತ್ತಾಪವಿಲ್ಲದೆ ಕಂಡುಬಂದಿದ್ದಾರೆ.

ಉದ್ಯಮಿ ಕೇತನ್ ಹತ್ಯೆ : ಸೋನಮ್ ರಘುವಂಶಿಯಿಂದ ಕೊಲೆ ಸ್ಕೆಚ್ ಕಲಿತಿದ್ದ  ಸಿಯಾ ಗೋಯಲ್
ಕೇತನ್-ಸಿಯಾ

Updated on: Jul 07, 2026 | 8:32 AM

ನವದೆಹಲಿ,ಜುಲೈ 07: ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಅವರ ಭೀಕರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅತ್ಯಂತ ಆಘಾತಕಾರಿ ಮತ್ತು ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಕೊಲೆಯ ಹಿಂದಿನ ಮಾಸ್ಟರ್‌ಮೈಂಡ್ ಆಗಿರುವ ಸಿಯಾ ಗೋಯಲ್, ಈ ಹಿಂದೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದ ‘ರಾಜಾ ರಘುವಂಶಿ’ ಕೊಲೆ ಪ್ರಕರಣವನ್ನು ಇಂಟರ್ನೆಟ್‌ನಲ್ಲಿ ಸಂಪೂರ್ಣವಾಗಿ ಸಂಶೋಧನೆ ನಡೆಸಿ, ಅದರಿಂದಲೇ  ಕೇತನ್ ಕೊಲ್ಲಲು ಸ್ಕೆಚ್ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಆತನ ಪತ್ನಿ ಸೋನಮ್ ರಘುವಂಶಿ ತನ್ನ ಗಂಡನನ್ನು ಬಂಡೆಯಿಂದ ತಳ್ಳಿ ಕೊಂದಿದ್ದಳು. ಆ ಪ್ರಕರಣದಲ್ಲಿ ಸೋನಮ್ ಮಾಡಿದ ತಪ್ಪುಗಳೇನು? ಆಕೆ ಪೊಲೀಸರಿಗೆ ಹೇಗೆ ಸಿಕ್ಕಿಬಿದ್ದಳು? ಎಂಬುದನ್ನು ಸಿಯಾ ಗೋಯಲ್ ಇಂಟರ್ನೆಟ್‌ನಲ್ಲಿ ತೀವ್ರವಾಗಿ ಅಧ್ಯಯನ ಮಾಡಿದ್ದಳು. ಸೋನಮ್ ಮಾಡಿದ ತಪ್ಪುಗಳು ತಾನು ಮಾಡಬಾರದು ಎಂದು ಸಿಯಾ ಮತ್ತಷ್ಟು ಕರಾರುವಾಕ್ಕಾಗಿ, ಪೊಲೀಸರಿಗೆ ಸಿಗದಂತೆ ಹತ್ಯೆಗೆ ಯೋಜನೆ ರೂಪಿಸಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಗೂಗಲ್‌ನಲ್ಲಿ ಸರ್ಚ್ ಮಾಡಿದ್ದೇನು?
ಪೊಲೀಸರು ಸಿಯಾ ಗೋಯಲ್ ಫೋನ್ ವಶಪಡಿಸಿಕೊಂಡು ಅದರ ಬ್ರೌಸಿಂಗ್ ಹಿಸ್ಟರಿ ಪರಿಶೀಲಿಸಿದಾಗ ಆಕೆಯ ಕ್ರಿಮಿನಲ್ ಬುದ್ಧಿ ಕಂಡು ಬೆಚ್ಚಿಬಿದ್ದಿದ್ದಾರೆ: ಆಕೆ ರಾಜಾ ರಘುವಂಶಿ ಕೊಲೆ ಪ್ರಕರಣದ ಪ್ರತಿಯೊಂದು ಸುದ್ದಿ ವರದಿಗಳನ್ನು ಓದಿದ್ದಳು. ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಯರನ್ನು ಥಳಿಸಲಾಗುತ್ತದೆಯೇ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಳು. ಮಹಿಳಾ ಕೈದಿಗಳ ಕಾನೂನು ಹಕ್ಕುಗಳ ಕುರಿತು ಜಾಲಾಡಿದ್ದಳು.

ಮತ್ತಷ್ಟು ಓದಿ: ಕೇತನ್ ಕೊಲೆಗೂ ಮುನ್ನ ಬೆಟ್ಟದಲ್ಲಿ ಸಿಯಾ, ಆಕೆಯ ಪ್ರಿಯಕರ ಚೇತನ್​ ನಡೆಸಿದ್ರಂತೆ ಮರ್ಡರ್ ರಿಹರ್ಸಲ್

ಲೋಹಗಡ್ ಕೋಟೆಯಲ್ಲಿ ನಡೆದಿದ್ದೇನು?
ಕೇತನ್ ಅಗರ್ವಾಲ್‌ನೊಂದಿಗೆ ಮದುವೆಯಾಗುವುದರಿಂದ ತಪ್ಪಿಸಿಕೊಳ್ಳಲು ಕೊಲೆಯೇ ಏಕೈಕ ಮಾರ್ಗ ಎಂದು ಸಿಯಾ ನಂಬಿದ್ದಳು. ಇದಕ್ಕಾಗಿ ಆಕೆ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆಗೂಡಿ ಲೋಹಗಡ್ ಕೋಟೆಗೆ ಚಾರಣದ ನೆಪದಲ್ಲಿ ಕೇತನ್‌ನನ್ನು ಕರೆದೊಯ್ದಿದ್ದಳು. ಸಿಯಾ ಒಬ್ಬಳೇ ತಳ್ಳಿದರೆ ಕೇತನ್ ಬಂಡೆಯಿಂದ ಕೆಳಗೆ ಬೀಳದೆ ಬದುಕಿ ಉಳಿಯಬಹುದು ಎಂಬ ಭಯದಿಂದ, ಸಿಯಾ ಮತ್ತು ಪ್ರಿಯಕರ ಚೇತನ್ ಇಬ್ಬರೂ ಸೇರಿ ಒಟ್ಟಿಗೆ ಕೇತನ್‌ನನ್ನು ಪ್ರಪಾತಕ್ಕೆ ತಳ್ಳಿದ್ದರು.

ಅನುಮಾನ ತಂದ ಆ ಸ್ಥಳ
ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಇಬ್ಬರೂ ಯತ್ನಿಸಿದ್ದರು. ಆದರೆ, ಕೇತನ್ ಬಿದ್ದ ಲೋಹಗಡ್ ಕೋಟೆಯ ಆ ನಿರ್ದಿಷ್ಟ ಜಾಗವು ಅಷ್ಟೇನೂ ಅಪಾಯಕಾರಿಯಾಗಿರಲಿಲ್ಲ. ಆದರೂ ಕೇತನ್ ಅಲ್ಲಿಂದ ಬಿದ್ದಿದ್ದು ಹೇಗೆ ಎಂಬ ಪೊಲೀಸರ ತೀಕ್ಷ್ಣ ತನಿಖೆ ಹಾಗೂ ನಿರಂತರ ವಿಚಾರಣೆಯಿಂದ ಇಬ್ಬರ ಸುಳ್ಳು ಸಾಕ್ಷ್ಯಗಳ ಪದರಗಳು ಕಳಚಿಕೊಂಡು ಅಸಲಿ ಸತ್ಯ ಹೊರಬಂದಿದೆ.

ಪಶ್ಚಾತ್ತಾಪವಿಲ್ಲದ ಹಂತಕರು
ಇಷ್ಟೆಲ್ಲಾ ದಾರುಣ ಕೃತ್ಯ ಎಸಗಿದ್ದರೂ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಗೆ ತಾವು ಮಾಡಿದ ತಪ್ಪಿನ ಬಗ್ಗೆ ಯಾವುದೇ ಪಶ್ಚಾತ್ತಾಪ ಅಥವಾ ವಿಷಾದದ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಿಯಾ ಮನೆಯಿಂದ ವಶಪಡಿಸಿಕೊಂಡಿರುವ ಎರಡನೇ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ (FSL) ಪರೀಕ್ಷೆಗೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us