
ಕೋಲ್ಕತ್ತಾ, ಜೂನ್ 14: ಭದ್ರತೆ ಹಾಗೂ ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಬಳಿ ಇರುವ 136 ವರ್ಷ ಹಳೆಯ ‘ಬಾಂಕ್ರಾ ಮಸೀದಿ’ಯನ್ನು (ಗೌರಿಪುರ ಜಾಮೆ ಮಸೀದಿ) ಸ್ಥಳಾಂತರಿಸುವ ಮೂರು ದಶಕಗಳ ಹಳೆಯ ಪ್ರಸ್ತಾವನೆಗೆ ಇದೀಗ ಮರುಜೀವ ಬಂದಿದೆ. ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿದ್ದು, ಮಸೀದಿಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲು ಜಂಟಿ ಮಾತುಕತೆಗಳು ಚುರುಕುಗೊಂಡಿವೆ.
ಸುಮಾರು 130 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ಬಾಂಕ್ರಾ ಮಸೀದಿಯು (Bankra Mosque) ವಿಮಾನ ನಿಲ್ದಾಣದ ಎರಡನೇ ರನ್‌ವೇಯಿಂದ ಕೇವಲ 165 ಮೀಟರ್ ದೂರದಲ್ಲಿ ಹಾಗೂ ನಿಲ್ದಾಣದ ಒಳಗಿನ ಪ್ರಮುಖ ಕಾರ್ಯಕಾರಿ ವಲಯದಲ್ಲಿದೆ.
ಅಂತರರಾಷ್ಟ್ರೀಯ ವಿಮಾನಯಾನ ನಿಯಮಗಳ ಪ್ರಕಾರ, ರನ್‌ವೇ ಪಕ್ಕದಲ್ಲಿ ಯಾವುದೇ ಕಟ್ಟಡ ಇರಬೇಕಾದರೆ ಕನಿಷ್ಠ 240 ಮೀಟರ್ ದೂರವಿರಬೇಕು. ಆದರೆ ಈ ಮಸೀದಿ ಕೇವಲ 165 ಮೀಟರ್ ದೂರದಲ್ಲಿದೆ. ಮಸೀದಿಯ ಉಪಸ್ಥಿತಿಯಿಂದಾಗಿ ದೊಡ್ಡ ಗಾತ್ರದ ವಿಮಾನಗಳಾದ ಬೋಯಿಂಗ್ 787 ಮತ್ತು ಏರ್‌ಬಸ್ A330 ನಂತಹ ವಿಮಾನಗಳನ್ನು ಈ ರನ್‌ವೇನಲ್ಲಿ ಇಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಚಳಿಗಾಲದ ದಟ್ಟ ಮಂಜಿನ ಸಮಯದಲ್ಲಿ ಸುಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು (ILS) ಅಳವಡಿಸಲೂ ಇದು ಅಡ್ಡಿಯಾಗಿದೆ.
ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ
ಭದ್ರತಾ ಸವಾಲು: ವಿಮಾನ ನಿಲ್ದಾಣವು ಅತ್ಯಂತ ಸೂಕ್ಷ್ಮ ವಲಯವಾಗಿದ್ದು, ಪ್ರಾರ್ಥನೆಗಾಗಿ ಭಕ್ತರು ನಿಲ್ದಾಣದ ಒಳಗೆ ಹೋಗಿ ಬರಲು ಸಿಐಎಸ್‌ಎಫ್ (CISF) ಪಡೆಗಳು ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕಾಗುತ್ತಿದೆ. ಇದು ಭದ್ರತಾ ಏಜೆನ್ಸಿಗಳಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.
ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 1950 ಮತ್ತು 60ರ ದಶಕದಲ್ಲಿ ಸುತ್ತಮುತ್ತಲಿನ ಹಳ್ಳಿಗಳನ್ನು ಸ್ಥಳಾಂತರಿಸಿದಾಗ ಈ ಮಸೀದಿಯನ್ನು ಮಾತ್ರ ಮುಟ್ಟದೆ ಹಾಗೇ ಬಿಡಲಾಗಿತ್ತು. ತದನಂತರ ಬಂದ ಜ್ಯೋತಿ ಬಸು, ಬುದ್ಧದೇವ್ ಭಟ್ಟಾಚಾರ್ಯ ಹಾಗೂ ಮಮತಾ ಬ್ಯಾನರ್ಜಿ ಅವರ ಸರ್ಕಾರಗಳ ಅವಧಿಯಲ್ಲೂ ಇದನ್ನು ಸ್ಥಳಾಂತರಿಸುವ ಪ್ರಯತ್ನಗಳು ರಾಜಕೀಯ ಸೂಕ್ಷ್ಮತೆಯಿಂದಾಗಿ ಯಶಸ್ವಿಯಾಗಿರಲಿಲ್ಲ. ಆದರೆ ಪ್ರಸ್ತುತ ರಾಜ್ಯ ಸರ್ಕಾರವು ಅಭಿವೃದ್ಧಿ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಕೇಂದ್ರದ ನಿಲುವಿಗೆ ಸಾಥ್ ನೀಡಿದ್ದು, ಹಲವು ದಶಕಗಳ ಜಟಾಪಟಿಗೆ ಸೌಹಾರ್ದಯುತ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ.
ಬಾರಾಸತ್‌ನ ಜಿಲ್ಲಾಧಿಕಾರಿಗಳ (DM) ಕಚೇರಿಯಲ್ಲಿ ಇತ್ತೀಚೆಗೆ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹಾಗೂ ಮಸೀದಿ ಕಮಿಟಿಯ ಪದಾಧಿಕಾರಿಗಳ ನಡುವೆ ಜಂಟಿ ಸಭೆ ನಡೆದಿದೆ. ಮಸೀದಿ ಸಮಿತಿಯು, “ನಾವು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅಡ್ಡಿಪಡಿಸುವುದಿಲ್ಲ, ಆದರೆ ಸ್ಥಳಾಂತರದ ಬಗ್ಗೆ ಅಂತಿಮ ನಿರ್ಧಾರವನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಜಮೀಯತ್ ಉಲೇಮಾ-ಎ-ಹಿಂದ್‌ನಂತಹ ಪ್ರಮುಖ ಧಾರ್ಮಿಕ ಸಂಸ್ಥೆಗಳೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದೆ.
ಇದನ್ನೂ ಓದಿ: ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ
ಸದ್ಯಕ್ಕೆ ಮುಂಬರುವ ಈದ್ ಹಬ್ಬದವರೆಗೆ ಯಾವುದೇ ತರಾತುರಿಯ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳು ನಿರ್ಧರಿಸಿದ್ದು, ಹಬ್ಬದ ನಂತರ ಮಸೀದಿಗೆ ಪರ್ಯಾಯ ಜಾಗ ಹಾಗೂ ಸೂಕ್ತ ಪರಿಹಾರ ನೀಡಿ ಗೌರವಯುತವಾಗಿ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ