
ಶ್ರೀನಗರ, ನವೆಂಬರ್ 18: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಎ ವರ್ಗದ ಉಗ್ರ ಲತೀಫ್ ಭಟ್ ಹತನಾಗಿದ್ದಾನೆ. ದಕ್ಷಿಣ ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಸ್ಥಳೀಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಭದ್ರತಾ ಪಡೆಗಳು ಬಹಳ ಸಮಯದಿಂದ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದವು. ವಿಶೇಷವೆಂದರೆ, ಲತೀಫ್ ಭಟ್ ಉಗ್ರ ಸಂಘಟನೆ ಸೇರಿದ ದಿನದಿಂದ ಸರಿಯಾಗಿ ಒಂದು ವರ್ಷದ ಬಳಿಕ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.
ಮಸೀದಿಯಲ್ಲಿ ಅಡಗಿದ್ದ ಉಗ್ರನಿಗೆ ಶರಣಾಗಲು ಅವಕಾಶ
ಪೊಲೀಸರ ಮಾಹಿತಿ ಪ್ರಕಾರ, ಕುಲ್ಗಾಮ್ನ ಮಸೀದಿಯೊಂದರಲ್ಲಿ ಲತೀಫ್ ಭಟ್ ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಲಾಯಿತು. ಉಗ್ರನನ್ನು ಜೀವಂತವಾಗಿ ಸೆರೆಹಿಡಿಯುವ ಉದ್ದೇಶದಿಂದ ಶರಣಾಗುವಂತೆ ಸೂಚಿಸಲಾಯಿತು. ವಿಡಿಯೋ ಕರೆ ಮೂಲಕವೂ ಶರಣಾಗುವಂತೆ ಮನವಿ ಮಾಡಲಾಗಿತ್ತು. ಆದರೆ ಆತ ಅದಕ್ಕೆ ಒಪ್ಪಲಿಲ್ಲ.
ಬೆಳಗಿನ ಜಾವ ಸುಮಾರು 2.45ಕ್ಕೆ ಲತೀಫ್ ಭಟ್ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಆತ ಹತನಾಗಿದ್ದಾನೆ. ಕಾರ್ಯಾಚರಣೆಯ ವೇಳೆ ಮಸೀದಿಗೆ ಯಾವುದೇ ಹಾನಿಯಾಗದಂತೆ ಪಡೆಗಳು ಎಚ್ಚರಿಕೆ ವಹಿಸಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ಯಾರು ಈ ಲತೀಫ್ ಭಟ್?
ಲತೀಫ್ ಭಟ್ಗೆ 23 ವರ್ಷ ವಯಸ್ಸಾಗಿತ್ತು. ಈತ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿವಾಸಿ. ಭಯೋತ್ಪಾದಕ ಸಂಘಟನೆ ಸೇರುವ ಮೊದಲು ಬಡಗಿಯಾಗಿ ಕೆಲಸ ಮಾಡುತ್ತಿದ್ದ. ಸ್ಥಳೀಯ ಶಾಲೆಯಲ್ಲಿ 8ನೇ ತರಗತಿ ಹಾಗೂ ಮತ್ತೊಂದು ಶಾಲೆಯಲ್ಲಿ 12ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದ. ಬಳಿಕ ಕುಲ್ಗಾಮ್ನ ಸರ್ಕಾರಿ ಪದವಿ ಕಾಲೇಜಿಗೆ ಸೇರಿದ್ದರೂ ಪದವಿಯನ್ನು ಪೂರ್ಣಗೊಳಿಸಿರಲಿಲ್ಲ.
ಇದನ್ನೂ ಓದಿ: ಕುಲ್ಗಾಮ್ನಲ್ಲಿ ಮತ್ತೆ ಗುಂಡಿನ ಚಕಮಕಿ: ಎಲ್ಇಟಿ ಕಮಾಂಡರ್ ಲತೀಫ್ ಭಟ್ಗಾಗಿ ಶೋಧ
ನಂತರ ಬಡಗಿ ಕೆಲಸ ಮಾಡುತ್ತಿದ್ದ ಈತ 2025ರ ನವೆಂಬರ್ 18ರಂದು ಮನೆಯಿಂದ ನಾಪತ್ತೆಯಾಗಿದ್ದ. ಅದೇ ದಿನ ಲಷ್ಕರ್-ಎ-ತೊಯ್ಬಾ ಸಂಘಟನೆ ಸೇರಿದ್ದ ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ. ಇದೀಗ 2026ರ ನವೆಂಬರ್ 18ರಂದು ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.
ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಆರೋಪ
ಲತೀಫ್ ಭಟ್ ದಕ್ಷಿಣ ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಸ್ಥಳೀಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತನಿಗೆ ಲಷ್ಕರ್ನ ಅಂಗಸಂಸ್ಥೆ ಎಂದು ಹೇಳಲಾಗುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಮತ್ತು ಕಾಶ್ಮೀರ ರೆವಲ್ಯೂಷನರಿ ಆರ್ಮಿ (KRA) ಜೊತೆ ಸಂಪರ್ಕವಿತ್ತು ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ.
2026ರ ಜುಲೈ 22ರಂದು ಅನಂತ್ನಾಗ್ನಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಈತನ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿತ್ತು. ಆಗಸ್ಟ್ 1ರಂದು ಕುಲ್ಗಾಮ್ನಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದವು.
ಸಿಆರ್ಪಿಎಫ್ ಸಿಬ್ಬಂದಿ ಮೇಲಿನ ದಾಳಿಯಲ್ಲೂ ಹೆಸರು
ನವೆಂಬರ್ 11ರಂದು ಕುಲ್ಗಾಮ್ನಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಚೆಕ್ಪೋಸ್ಟ್ ಮೇಲೆ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಗೂ ಮುನ್ನ ಲತೀಫ್ ಭಟ್ ಮತ್ತು ಆತನ ಸಹಾಯಕ ಉಮರ್ ನಿಸಾರ್ ದಾರ್ ಸ್ಥಳದ ಮೇಲೆ ನಿಗಾ ಇಟ್ಟಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ದಾಳಿಗೂ ಮುನ್ನ ಹಾಗೂ ನಂತರದ ಚಲನವಲನಗಳನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಹಾಯಕ ಉಮರ್ ನಿಸಾರ್ ದಾರ್ ಕೂಡ ಎನ್ಕೌಂಟರ್ನಲ್ಲಿ ಸಾವು
ಲತೀಫ್ ಭಟ್ಗೆ ಸ್ಥಳೀಯವಾಗಿ ನೆರವು ನೀಡುತ್ತಿದ್ದ ಉಮರ್ ನಿಸಾರ್ ದಾರ್ ಕೂಡ ಈ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ. ಪೊಲೀಸರ ಪ್ರಕಾರ, ಕಳೆದ ಐದರಿಂದ ಆರು ತಿಂಗಳಿನಿಂದ ಆತ ಲತೀಫ್ಗೆ ಆಶ್ರಯ ಮತ್ತು ಸಾರಿಗೆ ವ್ಯವಸ್ಥೆ ಒದಗಿಸುತ್ತಿದ್ದ.
ನವೆಂಬರ್ 16ರಂದು ಕುಲ್ಗಾಮ್ನಲ್ಲಿ ಭದ್ರತಾ ಪಡೆಗಳು ನಡೆಸಿದ ಮತ್ತೊಂದು ಎನ್ಕೌಂಟರ್ನಲ್ಲಿ ಉಮರ್ ನಿಸಾರ್ ದಾರ್ ಹತನಾಗಿದ್ದ. ಆದರೆ ಆ ಸಂದರ್ಭದಲ್ಲಿ ಲತೀಫ್ ಭಟ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಇದಾದ ಬಳಿಕ ಆತನಿಗಾಗಿ ಭದ್ರತಾ ಪಡೆಗಳು ಹುಡುಕಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದವು.
ಉಗ್ರರ ಜಾಲದ ಬಗ್ಗೆ ತನಿಖೆ
ಲತೀಫ್ ಭಟ್ ಹತ್ಯೆಯೊಂದಿಗೆ ದಕ್ಷಿಣ ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಗೆ ಹೊಡೆತ ಬಿದ್ದಿದೆ ಎಂದು ಭದ್ರತಾ ಸಂಸ್ಥೆಗಳು ಅಂದಾಜಿಸಿವೆ. ಈತನಿಗೆ ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಯ ಸಂಪರ್ಕಗಳು ಹೇಗಿದ್ದವು? ಶಸ್ತ್ರಾಸ್ತ್ರಗಳನ್ನು ಯಾರು ಪೂರೈಸುತ್ತಿದ್ದರು? ಆತನಿಗೆ ಆಶ್ರಯ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದ್ದವರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Wed, 18 November 26