ಕೇಂದ್ರ ಸಚಿವ ಸ್ಥಾನಕ್ಕೆ ಎಲ್.ಮುರುಗನ್ ರಾಜೀನಾಮೆ: ಕಾರಣ ಇಲ್ಲಿದೆ ನೋಡಿ

ಕೇಂದ್ರ ಸಚಿವ ಎಲ್. ಮುರುಗನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮಿಳುನಾಡಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಲು ನಿರ್ಧರಿಸಿದ್ದಾರೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಸೇವೆ ಸಲ್ಲಿಸಿದ್ದು ಹೆಮ್ಮೆ ಇದೆ ಎಂದ ಅವರು, 2029ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವುದೇ ಗುರಿ ಎಂದಿದ್ದಾರೆ. ದೀಪಾವಳಿಗೂ ಮುನ್ನ ಕೇಂದ್ರ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳ ನಡುವೆಯೇ ಈ ಬೆಳವಣಿಗೆ ಮಹತ್ವ ಪಡೆದಿದೆ.

ಕೇಂದ್ರ ಸಚಿವ ಸ್ಥಾನಕ್ಕೆ  ಎಲ್.ಮುರುಗನ್ ರಾಜೀನಾಮೆ: ಕಾರಣ ಇಲ್ಲಿದೆ ನೋಡಿ
ಎಲ್. ಮುರುಗನ್ ಹಾಗೂ ನರೇಂದ್ರ ಮೋದಿ
Image Credit source: Google

Updated on: Oct 13, 2026 | 8:51 PM

ದೆಹಲಿ, ಅ.13: ಕೇಂದ್ರ ಸಚಿವ ಸಂಪುಟ ಪುನಾರಚನೆಯ ಮುನ್ಸೂಚನೆಗಳ ನಡುವೆಯೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್. ಮುರುಗನ್ (L. Murugan), ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಮಾತೆಗೆ ಹಾಗೂ ತಮಿಳುನಾಡಿಗೆ ಸೇವೆ ಸಲ್ಲಿಸಿದ್ದು ತಮ್ಮ ಜೀವನದ ಅತ್ಯಂತ ಶ್ರೇಷ್ಠ ಗೌರವ ಎಂದು ಅವರು ಬಣ್ಣಿಸಿದ್ದಾರೆ.

“ದಿನಗೂಲಿ ಕಾರ್ಮಿಕರ ಮಗನಾಗಿ ಬೆಳೆದು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸಚಿವರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಜೀವನದ ಅತಿ ದೊಡ್ಡ ಭಾಗ್ಯ ಮತ್ತು ಗೌರವ” ಎಂದು ಹೇಳಿದ್ದಾರೆ. 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷವನ್ನು (BJP) ತಳಮಟ್ಟದಿಂದ ಬಲಪಡಿಸಲು, ಕಾರ್ಯಕರ್ತರೊಂದಿಗೆ ನಿಂತು ಪೂರ್ಣಾವಧಿಯಾಗಿ ಕೆಲಸ ಮಾಡಲು ಬಯಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಎಲ್. ಮುರುಗನ್ ಅವರ ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಹಾಗೂ ಮುಂಬರುವ ಚುನಾವಣಾ ತಂತ್ರಗಾರಿಕೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಹೊರಹೊಮ್ಮಿದೆ.

ಇಲ್ಲಿದೆ ನೋಡಿ ಎಕ್ಸ್​  ಪೋಸ್ಟ್​​:

ದೀಪಾವಳಿಗೂ ಮುನ್ನ ಕೇಂದ್ರ ಸಚಿವ ಸಂಪುಟ ಪುನಾರಚನೆ ಸಾಧ್ಯತೆ

ದೀಪಾವಳಿ ಹಬ್ಬಕ್ಕೂ ಮುನ್ನ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ನಡೆಯುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ ಅರ್ಧ ಡಜನ್ (6) ಹುದ್ದೆಗಳು ಖಾಲಿಯಾಗುವ ನಿರೀಕ್ಷೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ CNN-News18 ವರದಿ ಮಾಡಿದೆ. ಮೋದಿ ಸರ್ಕಾರದ 3ನೇ ಅವಧಿಯ ಆಡಳಿತವು ಅರ್ಧ ಹಂತವನ್ನು ತಲುಪುತ್ತಿರುವಂತೆಯೇ ಈ ಪ್ರಮುಖ ರಾಜಕೀಯ ಬದಲಾವಣೆ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಕಳೆದ ಕೆಲವು ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಹಲವು ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಇನ್ನು ಕೆಲವರ ನಿರ್ಗಮನ ಸನ್ನಿಹಿತವಾಗಿದೆ. ಈಗಾಗಲೇ ಎಲ್. ಮುರುಗನ್ ನೀಡುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಸಭಾ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರಾವ್‌ನೀತ್ ಸಿಂಗ್ ಬಿಟ್ಟು ಮತ್ತು ಜಾರ್ಜ್ ಕುರಿಯನ್ ಕೇಂದ್ರ ಸಚಿವರು ಈಗಾಗಲೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಹರ್ದೀಪ್ ಸಿಂಗ್ ಪುರಿ ಮತ್ತು ಬಿ.ಎಲ್. ವರ್ಮಾ ಅವರ ರಾಜ್ಯಸಭಾ ಅವಧಿ ಮುಗಿದಿದ್ದರೂ ಬಿಜೆಪಿ ಇವರನ್ನು ಮರುನಾಮಕರಣ ಮಾಡಿಲ್ಲ. ಇನ್ನು ಕೇಂದ್ರ ಸಚಿವರಾಗಿದ್ದ ಹರ್ಷ್ ಮಲ್ಹೋತ್ರಾ ಅವರಿಗೆ ದೆಹಲಿ ಬಿಜೆಪಿ ಅಧ್ಯಕ್ಷರಾಗಿ ಜವಾಬ್ದಾರಿ ನೀಡಲಾಗಿದೆ. ಬಿಜೆಪಿಯ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ನಿಯಮದಂತೆ ಇವರ ನಿರ್ಗಮನವೂ ಖಚಿತವಾಗಿದೆ.

ಇದನ್ನೂ ಓದಿ: ‘ಚುನಾವಣಾ ಆಯುಕ್ತರಿಗೆ ಲಂಚದ ರೂಪದಲ್ಲಿ ಪದ್ಮ ಪ್ರಶಸ್ತಿ, ಸಚಿವ ಸ್ಥಾನ ನೀಡುತ್ತಿತ್ತು’; ಪಿಯೂಷ್ ಗೋಯಲ್ ಗಂಭೀರ ಆರೋಪ

ಕಳೆದ ಎರಡೂವರೆ ವರ್ಷಗಳಿಂದ ನಡೆಯದ ಪುನಾರಚನೆ:

ಮೋದಿ ಸರ್ಕಾರದ 3ನೇ ಅವಧಿ ಆರಂಭವಾದ ನಂತರ ಕಳೆದ ಎರಡೂವರೆ ವರ್ಷಗಳಿಂದ ಸಚಿವ ಸಂಪುಟದಲ್ಲಿ ಯಾವುದೇ ಪುನಾರಚನೆ ಅಥವಾ ವಿಸ್ತರಣೆ ನಡೆದಿರಲಿಲ್ಲ. ಇತ್ತೀಚೆಗೆ ಪ್ರಧಾನಿ ಮೋದಿಯವರು ಕೇಂದ್ರ ಸಚಿವರ ಮಂಡಳಿಯೊಂದಿಗೆ ಸರಣಿ ಸಭೆಗಳನ್ನು ನಡೆಸಿ, ವಿವಿಧ ಇಲಾಖೆಗಳ ಕೆಲಸದ ಪ್ರಗತಿಯನ್ನು ಪರಿಶೀಲಿಸಿದ್ದರು ಹಾಗೂ ಆಡಳಿತವನ್ನು ಮತ್ತಷ್ಟು ಸುಧಾರಿಸುವ ಕುರಿತು ಪ್ರಮುಖ ಸಲಹೆಗಳನ್ನು ನೀಡಿದ್ದರು. ಸಂಸತ್ತಿನ ಬಜೆಟ್ ಅಧಿವೇಶನವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಮುಕ್ತಾಯಗೊಳಿಸದ (Prorogue) ಹಿನ್ನೆಲೆಯಲ್ಲಿ, ಮುಂಬರುವ ಶೀತಲಕಾಲೀನ ಅಧಿವೇಶನಕ್ಕೂ ಮುನ್ನ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯ ಕುರಿತಾಗಿಯೂ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Tue, 13 October 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us