Lok Sabha Elections 2024: ಲಕ್ಷದ್ವೀಪ: ನಿರಂತರವಾಗಿ 10 ಬಾರಿ ಸಂಸದರಾಗಿದ್ದವರು ಕೇವಲ 71 ಮತಗಳಿಂದ ಸೋತ ಕಥೆ
ಲಕ್ಷದ್ವೀಪದ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಪ್ರವಾಸಿ ಸ್ಥಳವು ಪ್ರಧಾನಿ ಮೋದಿಯವರ ಪೋಸ್ಟ್ ನಂತರ ಈಗ ಭಾರಿ ಸುದ್ದಿಯಲ್ಲಿದೆ. ಆದರೆ ಈ ಕ್ಷೇತ್ರವು ದೇಶದ ರಾಜಕೀಯ ಇತಿಹಾಸದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ 10 ಬಾರಿ ಸಂಸದರಾಗಿದ್ದ ಪಿಎಂ ಸಯೀದ್ ಅವರ ಸೋಲು, ಗೆಲುವಿನ ಕುರಿತ ವಿಚಾರ ಇಲ್ಲಿದೆ.
ದೇಶದಲ್ಲಿ ಮೊದಲ ಬಾರಿಗೆ 1951-52ರಲ್ಲಿ ಲೋಕಸಭಾ ಚುನಾವಣೆ(Lok Sabha Election) ನಡೆದರೆ ಲಕ್ಷದ್ವೀಪ(Lakshadweep) ದಲ್ಲಿ ಮಾತ್ರ 16 ವರ್ಷಗಳೇ ಹಿಡಿಯಿತು, ಅಂತೂ 1967ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ನಡೆಯಿತು. ಅಲ್ಲಿನ ಜನರಿಗೆ ಅಲ್ಲಿನ ಸಂಸದರನ್ನು ಆಯ್ಕೆ ಮಾಡುವ ಹಕ್ಕೇನೋ ಸಿಕ್ಕಿತ್ತು ಆದರೆ ಮೊದಲ ಚುನಾವಣೆಯಲ್ಲಿ ಯಾವ ಪಕ್ಷವೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ ಎಂಬುದು ಕುತೂಹಲಕಾರಿ ಸಂಗತಿ. ನಿಂತಿದ್ದ ಎಲ್ಲರೂ ಸ್ವತಂತ್ರ ಅಭ್ಯರ್ಥಿಯಾಗಿದ್ದರು ಅದರಲ್ಲಿ ಪಿಎಂ ಸಯೀದ್(PM Sayeed) ಕೂಡ ಒಬ್ಬರು.
ಇದು ಮೊದಲ ಚುನಾವಣೆಯಾದ್ದರಿಂದ ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು. ಒಟ್ಟು 11,897 ಮತಗಳು ಚಲಾವಣೆಯಾಗಿದ್ದವು ಅದರಲ್ಲಿ ಪಿಎಂ ಸಯೀದ್ಗೆ 4,151 ಹಾಗೂ ಎಟಿ ಅರ್ನಕಾಡಿಗೆ 3765 ಮತಗಳು ಬಂದಿದ್ದವು. 386 ಮತಗಳಿಂದ ಪಿಎಂ ಸಯೀದ್ ಗೆಲುವು ಸಾಧಿಸಿದ್ದರು. ಕೇವಲ 26ನೇ ವಯಸ್ಸಿಗೆ ಸಂಸದರಾಗಿ ಅತ್ಯಂತ ಕಿರಿಯ ಸಂಸದ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು.
ಪ್ರಧಾನಿಗಳು ಬದಲಾದರು, ಸರ್ಕಾರಗಳು ಬದಲಾಯಿತು ಆದರೆ ಪಿಎಂ ಸಯೀದ್ ಮಾತ್ರ ಸಂಸದರಾಗಿಯೇ ಉಳಿದಿದ್ದರು. ಸತತ 10 ವರ್ಷಗಳ ಕಾಲ ಅವರು ಸಂಸದರಾಗಿದ್ದರು. ಹಾಗೆಯೇ ಸಿಪಿಐನ ಇಂದ್ರಜಿತ್ ಗುಪ್ತಾ ಕೂಡ 11 ಬಾರಿ ಸಂಸದರಾಗಿ ದಾಖಲೆ ಬರೆದಿದ್ದಾರೆ.
ಮತ್ತಷ್ಟು ಓದಿ: Lakshadweep search: ಮೇಕ್ ಮೈ ಟ್ರಿಪ್ನಿಂದ ಬೀಚಸ್ ಆಫ್ ಇಂಡಿಯಾ ಅಭಿಯಾನ; ಮೋದಿಯ ಲಕ್ಷದ್ವೀಪ ಭೇಟಿ ಪರಿಣಾಮ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಯಾವ ದಾಖಲೆಗಳನ್ನು ಮಾಡಿದ್ದಾರೆಯೋ, ಅದೇ ಇತಿಹಾಸವನ್ನು ಈ ಕ್ಷೇತ್ರದ ಸಂಸದ ಪಿ.ಎಂ. ಸಯೀದ್ ಕೂಡ ಮಾಡಿದ್ದರು. ಗೆದ್ದರೆ ಗೆಲ್ಲುತ್ತಲೇ ಇರುತ್ತಾರೆ
ಚುನಾವಣೆಗಳು ಹಾಗೆಯೇ ಮುಂದುವರೆದಿತ್ತು, ಸಯೀದ್ ಅವರು 1971ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರು. ಅವರು 1967 ರಿಂದ 1999 ರವರೆಗೆ ಪ್ರತಿ ಬಾರಿ ಗೆದ್ದರು. ಸತತ 10 ಬಾರಿ ಸಂಸದರಾಗಿ ಆಯ್ಕೆಯಾದರು.
ಸೋಲುವ ದಿನ ಬಂದೇ ಬಿಟ್ಟಿತ್ತು ಮತ್ತೆ ಗೆಲ್ಲುವ ಹುರುಪಿನಲ್ಲಿ ಚುನಾವಣೆಗೆ ನಿಂತಿದ್ದರು, ಚುನಾವಣೆಯ ಮತಎಣಿಕೆ ದಿನ ಬಂದೇ ಬಿಟ್ಟಿತ್ತು. ಈ ಬಾರಿಯೂ ಏನೂ ಬದಲಾವಣೆಯಾಗುವುದಿಲ್ಲ ಎಂಬ ಭರವಸೆ ಕಾಂಗ್ರೆಸ್ ಸೇರಿದಂತೆ ಎಲ್ಲರಲ್ಲೂ ಇತ್ತು. ಆದರೆ ಈ ಬಾರಿ ವಿಧಿ ಇನ್ನೇನೋ ಕಾದಿತ್ತು. ಅದೃಷ್ಟ ಈ ಬಾರಿ ಮೋಸ ಮಾಡಿದೆ. 1967ರಲ್ಲಿ ಆರಂಭವಾದ ರಾಜಕೀಯ ಪಯಣ 2004ರಲ್ಲಿ ಅಂತ್ಯಗೊಂಡಿತು. ಅದೂ ಕೇವಲ 71 ಮತಗಳಿಂದ ಪರಾಭವಗೊಂಡಿದ್ದರು.
ಜೆಡಿಯು ಅಭ್ಯರ್ಥಿ ಪಿ.ಪುಖುನಿ ಕೋಯಾ ಅವರನ್ನು ಕೇವಲ 71 ಮತಗಳಿಂದ ಸೋಲಿಸಿದ್ದರು. ಅವರು 15,597 ಮತಗಳನ್ನು ಪಡೆದರೆ, ಸಯೀದ್ 15,526 ಮತಗಳನ್ನು ಪಡೆದಿದ್ದರು. 18 ಡಿಸೆಂಬರ್ 2005 ರಂದು ತಮ್ಮ 65 ನೇ ವಯಸ್ಸಿನಲ್ಲಿ ನಿಧನರಾದರು. ಮುಂದಿನ ಚುನಾವಣೆಯಲ್ಲಿ ಅವರ ಪುತ್ರ ಮೊಹಮ್ಮದ್ ಹಮ್ದುಲ್ಲಾ ಸಯೀದ್ ಸಾರ್ವಜನಿಕರ ಪ್ರೀತಿಗೆ ಪಾತ್ರರಾದರು. ಆದರೆ 2014 ಮತ್ತು 2019ರಲ್ಲಿ ಈ ಸ್ಥಾನ ಕಾಂಗ್ರೆಸ್ ಕೈ ತಪ್ಪಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ