
ನೋಯ್ಡಾ, ಆಗಸ್ಟ್ 06: ಲೋಕಸಭಾ ಸಚಿವಾಲಯದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಸಾಲ ಬಾಧೆ ತಾಳಲಾರದೆ ನೋಯ್ಡಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಡೆದಿದೆ. ಮೃತರನ್ನು ಗೌರವ್ ಗೌತಮ್ (Gaurav Gautam) ಎಂದು ಗುರುತಿಸಲಾಗಿದ್ದು, ನೋಯ್ಡಾದ ಸೆಕ್ಟರ್ 82 ರಲ್ಲಿರುವ ಕೇಂದ್ರೀಯ ವಿಹಾರ್-II ಸೊಸೈಟಿಯ ತಮ್ಮ ಫ್ಲಾಟ್‌ನಲ್ಲಿ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು 15 ಪುಟಗಳ ವಿಸ್ತೃತ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ.
ಪತ್ನಿ ಮನೆಗೆ ಮರಳಿದಾಗ ಸಂಗತಿ ಬಯಲು: ಗೌರವ್ ಅವರ ಪತ್ನಿ ತಮ್ಮ ತವರು ಮನೆಯಿಂದ ಭಾನುವಾರ ವಾಪಸ್ ಬಂದಾಗ, ಫ್ಲಾಟ್ ಒಳಗಿನಿಂದ ಲಾಕ್ ಆಗಿತ್ತು. ಪತಿಗೆ ಪದೇ ಪದೇ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡ ಅವರು, ಸೊಸೈಟಿಯ ಭದ್ರತಾ ಸಿಬ್ಬಂದಿಯ ನೆರವಿನಿಂದ ಬಾಗಿಲು ತೆರೆದು ನೋಡಿದಾಗ ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಕುಟುಂಬಸ್ಥರು ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
15 ಪುಟಗಳ ಡೆತ್ ನೋಟ್: 70 ಲಕ್ಷ ರೂ. ಸಾಲ
ವಶಪಡಿಸಿಕೊಂಡ 15 ಪುಟಗಳ ಡೆತ್ ನೋಟ್‌ನಲ್ಲಿ ಗೌರವ್ ಅವರು ದಿನೇ ದಿನೇ ಹೆಚ್ಚುತ್ತಿದ್ದ ಜೀವನ ವೆಚ್ಚಗಳು ಹಾಗೂ 70 ಲಕ್ಷಕ್ಕೂ ಅಧಿಕ ಸಾಲದ ಸುಳಿಗೆ ಸಿಲುಕಿದ್ದಾಗಿ ಬರೆದುಕೊಂಡಿದ್ದಾರೆ. ಈ ಕಠಿಣ ನಿರ್ಧಾರಕ್ಕೆ ತಾನೇ ಸಂಪೂರ್ಣ ಹೊಣೆ ಎಂದು ಬರೆದಿರುವ ಅವರು, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗಿ ತಿಳಿಸಿದ್ದಾರೆ. ಪತ್ರದಲ್ಲಿ ಅವರು ಯಾವುದೇ ವ್ಯಕ್ತಿಯ ಮೇಲಾಗಲಿ ಅಥವಾ ಕಿರುಕುಳದ ಮೇಲಾಗಲಿ ಆರೋಪ ಮಾಡಿಲ್ಲ ಎಂದು ಫೇಸ್-2 ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ನೊಯ್ಡಾದ ಸೆಕ್ಟರ್ 82 ರಲ್ಲಿರುವ ಕೇಂದ್ರೀಯ ವಿಹಾರ್-II ಸೊಸೈಟಿಯು ಹೆಚ್ಚಾಗಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ವಾಸಿಸುವ ವಸತಿ ಸಮುಚ್ಚಯವಾಗಿದೆ. ಕುಟುಂಬಸ್ಥರು ಯಾರ ವಿರುದ್ಧವೂ ದೂರು ನೀಡಿಲ್ಲವಾದರೂ, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಡೆತ್ ನೋಟ್‌ನಲ್ಲಿ ಉಲ್ಲೇಖವಾಗಿರುವ ಸಾಲ ನೀಡಿದ ಮೂಲಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:34 am, Thu, 6 August 26