Scam
ನವದೆಹಲಿ, ಡಿಸೆಂಬರ್ 29: ದೆಹಲಿಯಲ್ಲಿ ಬರೋಬ್ಬರಿ 200 ಕೋಟಿ ರೂ. ಮೌಲ್ಯದ ಆಸ್ತಿ ಹಗರಣವೊಂದು (
Property Scam) ಬೆಳಕಿಗೆ ಬಂದಿದೆ. ಗುರುಗ್ರಾಮದ ಡಿಎಲ್‌ಎಫ್ ಕ್ಯಾಮೆಲಿಯಾಸ್‌ನಲ್ಲಿ ಅಸ್ತಿತ್ವದಲ್ಲಿಲ್ಲದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ನಕಲಿ ಬ್ಯಾಂಕ್ ಹರಾಜು ದಾಖಲೆಗಳನ್ನು ಬಳಸಿ 12 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಮೋಸಕ್ಕೊಳಗಾದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಇದೇ ರೀತಿ ಅವರು ಹಲವು ಜನರಿಗೆ ವಂಚಿಸಿದ್ದು, ಈ ವಂಚನೆಯ ಒಟ್ಟು ಮೊತ್ತ 200 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಜೂನ್ 13ರಂದು ವಂಚನೆ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಬಳಿ ಇರುವ ಗುರುಗ್ರಾಮದಲ್ಲಿ ಅತ್ಯಂತ ಪ್ರೀಮಿಯಂ ವಸತಿ ಯೋಜನೆಗಳಲ್ಲಿ ಒಂದಾದ ಡಿಎಲ್‌ಎಫ್ ಕ್ಯಾಮೆಲಿಯಾಸ್‌ನಲ್ಲಿರುವ ಹೈ-ಎಂಡ್ ಅಪಾರ್ಟ್‌ಮೆಂಟ್‌ನ ನಕಲಿ ಹರಾಜು ಪತ್ರಗಳನ್ನು ದೂರುದಾರರಿಗೆ ತೋರಿಸಲಾಗಿದೆ. ಇದನ್ನು ನಂಬಿ ಆತ 12 ಕೋಟಿ ರೂ. ಹಣವನ್ನು ನೀಡಿದ್ದಾರೆ.
ದೂರುದಾರರು ಆ ಅಪಾರ್ಟ್‌ಮೆಂಟ್‌ನ ನಕಲಿ ದಾಖಲೆಗಳು ಮತ್ತು ಭರವಸೆಗಳನ್ನು ನಂಬಿ ಕಳೆದ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ RTGS ಮತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ 12 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ, ಅನುಮಾನಗಳು ಹುಟ್ಟಿಕೊಂಡು ಪರಿಶೀಲನೆಗಾಗಿ ಬ್ಯಾಂಕ್ ಅನ್ನು ಸಂಪರ್ಕಿಸಿದಾಗ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ. ಅಂತಹ ಯಾವುದೇ ಹರಾಜು ನಡೆದಿಲ್ಲ ಎಂದು ಗೊತ್ತಾಗಿದೆ. ಆ ಮಾರಾಟ ಪ್ರಮಾಣಪತ್ರಗಳು, ಕವರಿಂಗ್ ಪತ್ರಗಳು ಮತ್ತು ಹರಾಜು ರಶೀದಿಗಳು ನಕಲಿ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ದೆಹಲಿ ನಿವಾಸಿಯಾದ ಗೋಗಿಯಾ (38) ಅವರನ್ನು ನವೆಂಬರ್ 22 ರಂದು ಮುಂಬೈನಿಂದ ಉತ್ತರಾಖಂಡದ ಕಡೆಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು. ಅವರನ್ನು ರಿಷಿಕೇಶ್-ಡೆಹ್ರಾಡೂನ್ ರಸ್ತೆಯ ದೋಯಿವಾಲಾ ಬಳಿ ಬಂಧಿಸಲಾಯಿತು. ನಂತರ ಇನ್ನೂ 4 ಆರೋಪಿಗಳನ್ನು ಬಂಧಿಸಲಾಯಿತು. ಗೋಗಿಯಾ ವಿರುದ್ಧ ದೆಹಲಿ, ಪಂಜಾಬ್, ಗೋವಾ, ಮಧ್ಯಪ್ರದೇಶ ಮತ್ತು ಚಂಡೀಗಢದಲ್ಲಿ ಕನಿಷ್ಠ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ