ಆಧುನಿಕ ಒಡಿಶಾದ ವಾಸ್ತುಶಿಲ್ಪಿ ಮಧುಬಾಬು; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣನೆ

ಉತ್ಕಲ್ ಗೌರವ್ ಮಧುಸೂದನ್ ದಾಸ್ ಅವರು ಆಧುನಿಕ ಒಡಿಶಾದ ವಾಸ್ತುಶಿಲ್ಪಿ ಮತ್ತು ದೇಶದ ಅಗ್ರಗಣ್ಯ ಆಧುನಿಕ ಚಿಂತಕರಲ್ಲಿ ಒಬ್ಬರು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಆಧುನಿಕ ಒಡಿಶಾದ ವಾಸ್ತುಶಿಲ್ಪಿ ಮಧುಬಾಬು; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣನೆ
ಧರ್ಮೇಂದ್ರ ಪ್ರಧಾನ್
Follow us
Ganapathi Sharma
|

Updated on: Apr 29, 2023 | 1:20 PM

ಕಟಕ್: ಉತ್ಕಲ್ ಗೌರವ್ ಮಧುಸೂದನ್ ದಾಸ್ (Madhu Babu) ಅವರು ಆಧುನಿಕ ಒಡಿಶಾದ ವಾಸ್ತುಶಿಲ್ಪಿ ಮತ್ತು ದೇಶದ ಅಗ್ರಗಣ್ಯ ಆಧುನಿಕ ಚಿಂತಕರಲ್ಲಿ ಒಬ್ಬರು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ. ‘ಉತ್ಕಲ್ ಗೌರವ್ ಮಧುಬಾಬು ಜಯಂತಿ ಸಮಿತಿ’ಯು ಶುಕ್ರವಾರ ಕಟಕ್​​ನಲ್ಲಿ 175ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಒಡಿಶಾ ರಾಜ್ಯ ರಚನೆಯಲ್ಲಿ ಮಧುಬಾಬು ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು (ಮಧು ಬಾಬು) ‘ಉತ್ಕಲ್ ಸಮ್ಮಿಲನಿ’ಯನ್ನು ಸ್ಥಾಪಿಸಿದರು, ಇದು ಒಡಿಶಾದ ಸಾಮಾಜಿಕ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಕ್ರಾಂತಿಯನ್ನು ತಂದಿತು. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಶಿಕ್ಷಣ, ಕೈಗಾರಿಕೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಕಾರ್ಮಿಕ ಸುಧಾರಣೆಗಳಲ್ಲಿ ಅವರು ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ ಎಂದರು.

ಇದಕ್ಕೂ ಮುನ್ನ ಅವರು, ಮಧುಬಾಬು ಸಾಂಪ್ರದಾಯಿಕತೆಯ ಹೆಮ್ಮೆ, ವೈಭವ ಮತ್ತು ಜ್ವಲಂತ ಸಂಕೇತವಾಗಿದ್ದರು. ಒಡಿಯ ಭಾಷಿಕ ಪ್ರದೇಶಗಳ ಏಕೀಕರಣಕ್ಕೆ ಅವರ ಕೊಡುಗೆ ದೊಡ್ಡದಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದರು.

ಈ ಮಧ್ಯೆ, ಕಟಕ್‌ನ ಸಾಮಾಜಿಕ ಸಂಘಟನೆಗಳು ಮಧು ಬಾಬು ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿ ಸಹಿ ಅಭಿಯಾನವನ್ನು ಪ್ರಾರಂಭಿಸಿವೆ. ಸಾಲೇಪುರ ಬ್ಲಾಕ್‌ನ ಸತ್ಯಭಾಮಪುರದಲ್ಲಿರುವ ಮಧುಬಾಬು ಅವರ ಜನ್ಮಸ್ಥಳವನ್ನು ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಿಸುವಂತೆ ಸಂಘಟನೆಗಳು ಒತ್ತಾಯಿಸಿವೆ.

ರಾಜ್ಯಕ್ಕೆ ಹಾಗೂ ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಧುಬಾಬು ಅವರಿಗೆ ಸೂಕ್ತ ಗೌರವ ನೀಡಬೇಕಿದೆ. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ‘ಉತ್ಕಲ್ ಗೌರವ್ ಮಧುಬಾಬು ಜಯಂತಿ ಸಮಿತಿ’ಯ ಪ್ರಕಾಶ್ ಬೆಹ್ರಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಭಿಯಾನದಲ್ಲಿ ಸಂಗ್ರಹಿಸಿದ ಸಹಿಗಳನ್ನು ಪ್ರಧಾನ್ ಅವರ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ