ಭೋಪಾಲ್, ಆಗಸ್ಟ್ 15: ಮಧ್ಯಪ್ರದೇಶದ (Madhya Pradesh) ಮಹಿಳಾ ಪೊಲೀಸ್ ಪೇದೆಯೊಬ್ಬರು (Police Constable) ಲಿಂಗ ಬದಲಾವಣೆ (Gender Change) ಮಾಡಿಸಿಕೊಂಡು ಪುರುಷನಾಗಲಿದ್ದಾರೆ. ಲಿಂಗ ಬದಲಾವಣೆ ಮಾಡಿಸಿಕೊಳ್ಳಲು ಅವರು ರಾಜ್ಯ ಗೃಹ ಇಲಾಖೆಯಿಂದ ಅನುಮತಿಯನ್ನೂ ಪಡೆದಿದ್ದಾರೆ. ಆದರೆ, ಲಿಂಗ ಬದಲಾವಣೆಯ ನಂತರ ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ಸವಲತ್ತುಗಳು ಅಥವಾ ಪ್ರಯೋಜನ ಆಕೆಗೆ ಸಿಗುವುದಿಲ್ಲ ಎಂಬುದೂ ಸೇರಿದಂತೆ ಕೆಲವು ಷರತ್ತುಗಳನ್ನು ಇಲಾಖೆ ಮುಂದಿಟ್ಟಿದೆ. ಮಹಿಳಾ ಕಾನ್‌ಸ್ಟೆಬಲ್ ಪ್ರಸ್ತುತ ರತ್ಲಾಮ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರ ಹೆಸರು ದೀಪಿಕಾ ಕೊಠಾರಿ ಆಗಿದೆ.
ದೀಪಿಕಾಗೆ ಬಾಲ್ಯದಿಂದಲೂ ಲಿಂಗ ಗುರುತಿಸುವಿಕೆಯ ಸಮಸ್ಯೆ ಇತ್ತು. ಹೆಣ್ಣಾದರೂ ತನ್ನನ್ನು ತಾನು ಪುರುಷನೆಂದು ಪರಿಗಣಿಸುತ್ತಿದ್ದಳು. ಆದರೆ, ದೀಪಿಕಾ ಈ ಬಗ್ಗೆ ಹಲವು ವೈದ್ಯರ ಬಳಿ ಅಭಿಪ್ರಾಯವನ್ನೂ ಪಡೆದುಕೊಂಡಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು ದೆಹಲಿಯ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಚಿಕಿತ್ಸೆ ವೇಳೆ ಡಾ. ರಾಜೀವ್ ಅವರು ಆಕೆಗೆ ಲಿಂಗ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
ದೀಪಿಕಾ ಈ ವರ್ಷದ ಜನವರಿಯಲ್ಲಿ ಲಿಖಿತ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ಅನುಮತಿ ಕೋರಿದ್ದರು. ಆದಾಗ್ಯೂ, ಇದು ಮೊದಲ ಪ್ರಕರಣವಲ್ಲ. ಇದಕ್ಕೂ ಮೊದಲು, ನಿವಾರಿಯಲ್ಲಿ ಪೋಸ್ಟ್ ಮಾಡಲಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಲಿಂಗ ಪರಿವರ್ತನೆ ಮಾಡಿಕೊಂಡಿದ್ದರು.
ಆದಾಗ್ಯೂ, ಲಿಂಗ ಬದಲಾವಣೆಗೆ ಅನುಮತಿ ಪಡೆಯಲು ದೀಪಿಕಾ ಹಲವಾರು ಪ್ರಕ್ರಿಯೆಗಳನ್ನು ಅನುಸರಿಸಬೇಕಾಯಿತು. 2023 ರ ಫೆಬ್ರವರಿ 15 ರಂದು ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ದೀಪಿಕಾ ಅವರನ್ನು ಪರೀಕ್ಷಿಸಲಾಯಿತು. ವೈದ್ಯಕೀಯ ಮಂಡಳಿ ತಂಡ ತನ್ನ ವರದಿಯನ್ನು ಸಿವಿಲ್ ಸರ್ಜನ್‌ಗೆ ಸಲ್ಲಿಸಿತ್ತು.
ಇದನ್ನೂ ಓದಿ: ಸ್ವಾತಂತ್ರ್ಯ ದೊರೆತ ಸಂಭ್ರಮದ ಸಂದರ್ಭದಲ್ಲಿ ಕೋಮು ಸಾಮರಸ್ಯಕ್ಕಾಗಿ ಕೋಲ್ಕತ್ತದಲ್ಲಿದ್ದ ಮಹಾತ್ಮ ಗಾಂಧಿ!
ವೈದ್ಯರ ಪ್ರಕಾರ, ಲಿಂಗ ಗುರುತಿಸುವಿಕೆ ಅಸ್ವಸ್ಥತೆ ಅಥವಾ ಜೆಂಡರ್ ಡಿಸ್ಫೋರಿಯಾ ಹೊಂದಿರುವ ಜನರು ತಮ್ಮ ಲಿಂಗವನ್ನು ಬದಲಾಯಿಸಲು ಬಯಸುತ್ತಾರೆ. ಈ ಕಾಯಿಲೆಯಿಂದ ಬಳಲುತ್ತಿರುವ ಹುಡುಗ ಹುಡುಗಿಯಂತೆ ಜೀವನ ನಡೆಸಲು ಬಯಸುತ್ತಾನೆ. ಆದರೆ, ಹುಡುಗಿ ಹುಡುಗನಾಗಲು ಬಯಸುತ್ತಾಳೆ. ಜೆಂಡರ್ ಡಿಸ್ಫೋರಿಯಾದ ಲಕ್ಷಣಗಳು ಬಾಲ್ಯದಿಂದಲೇ ಪ್ರಾರಂಭವಾಗುವುದಿಲ್ಲವಾದರೂ, 12 ರಿಂದ 16 ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರಲ್ಲಿ ಲಿಂಗ ಡಿಸ್ಫೋರಿಯಾದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಇಂಥ ಸಂದರ್ಭದಲ್ಲಿ ಲಿಂಗ ಪರಿವರ್ತನೆ ಮಾಡುವುದಕ್ಕೂ ಮೊದಲು ಅನೇಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮತ್ತೊಂದೆಡೆ, ಲಿಂಗ ಪರಿವರ್ತನೆಗೆ ಬಯಸುವ ವ್ಯಕ್ತಿಯು ಅನೇಕ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡುವ ಮೊದಲು, ವೈದ್ಯರು ಮೊದಲು ಹುಡುಗ ಅಥವಾ ಹುಡುಗಿ ಮಾನಸಿಕವಾಗಿ ಸಿದ್ಧರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಕೊಳ್ಳುತ್ತಾರೆ. ಇದಕ್ಕಾಗಿ ಮನೋವೈದ್ಯರ ಸಹಾಯವನ್ನೂ ಪಡೆಯಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯು ಯಾವುದೇ ಸಂಕೀರ್ಣ ರೋಗವನ್ನು ಹೊಂದಿಲ್ಲ ಎಂಬುದನ್ನೂ ದೃಢಪಡಿಸಿಕೊಳ್ಳಲಾಗುತ್ತದೆ. ಆ ನಂತರ, ವ್ಯಕ್ತಿಯ ಹಾರ್ಮೋನ್ ಚಿಕಿತ್ಸೆಯು ಪ್ರಾರಂಭವಾಗುತ್ತದೆ. ನಂತರ ಲಿಂಗಪರಿವರ್ತನೆ ಚಿಕಿತ್ಸೆ ನೀಡಲಾಗುತ್ತದೆ.