ಸಿಎಂ ವಿಜಯ್​ಗೆ ಮುಖಭಂಗ; ಕರೂರ್ ಕಾಲ್ತುಳಿತದ ಸಂತ್ರಸ್ತರಿಗೆ ಉದ್ಯೋಗ ನೀಡುವ ಆದೇಶ ರದ್ದುಗೊಳಿಸಿದ ಹೈಕೋರ್ಟ್​

ತಮಿಳುನಾಡಿನ ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟಿದ್ದವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಸಿಎಂ ವಿಜಯ್ ಆದೇಶ ಹೊರಡಿಸಿದ್ದರು. ಇತ್ತೀಚೆಗಷ್ಟೇ ಕರೂರಿಗೆ ಭೇಟಿ ನೀಡಿದ್ದ ಅವರು ಸಂತ್ರಸ್ತರಿಗೆ ಆದೇಶ ಪತ್ರವನ್ನು ವಿತರಿಸಿದ್ದರು. ಆದರೆ, ಆ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಭಾಷಣವನ್ನು ಕೇಳಲು ಕಿಕ್ಕಿರಿದು ಸೇರಿದ್ದ ಜನರ ನಡುವೆ ನೂಕುನುಗ್ಗಲಾಗಿ 41 ಜನರು ಮೃತಪಟ್ಟಿದ್ದರು. ಅದಕ್ಕೆ ಪ್ರಾಯಶ್ಚಿತ್ತವಾಗಿ ಉದ್ಯೋಗ ನೀಡುವ ಭರವಸೆಯನ್ನು ಸಿಎಂ ಘೋಷಿಸಿದ್ದರು.

ಸಿಎಂ ವಿಜಯ್​ಗೆ ಮುಖಭಂಗ; ಕರೂರ್ ಕಾಲ್ತುಳಿತದ ಸಂತ್ರಸ್ತರಿಗೆ ಉದ್ಯೋಗ ನೀಡುವ ಆದೇಶ ರದ್ದುಗೊಳಿಸಿದ ಹೈಕೋರ್ಟ್​
Cm Vijay In Karur
Image Credit source: TV9

Updated on: Jul 27, 2026 | 6:40 PM

ಚೆನ್ನೈ, ಜುಲೈ 27: ತಮಿಳುನಾಡು ವಿಕ್ಟರಿ ಪಕ್ಷದ ನಾಯಕ ಜೋಸೆಫ್ ವಿಜಯ್ (CM Joseph Vijay) ಕರೂರಿನಲ್ಲಿ (Karur Stampede) ಪ್ರಚಾರ ಚುನಾವಣಾ ಮಾಡುವಾಗ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳ ಒಟ್ಟು 31 ಜನರಿಗೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕೆಲವು ದಿನಗಳ ಹಿಂದೆ ಸರ್ಕಾರಿ ಉದ್ಯೋಗದ ಆದೇಶಗಳನ್ನು ನೀಡಿದ್ದರು. ಈ ಎಲ್ಲಾ ಉದ್ಯೋಗಗಳು TNPSC ಗ್ರೂಪ್ 4 ಮಟ್ಟದ ಉದ್ಯೋಗಗಳಾಗಿದ್ದವು. ಇದರ ವಿರುದ್ಧ, ನಾಮ್ ತಮಿಳರ್ ಪಕ್ಷ ಮತ್ತು ಮಜಲಗವ ಸದಸ್ಯರು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಕರೂರ್ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳ 31 ಜನರಿಗೆ ನೀಡಲಾದ ಸರ್ಕಾರಿ ಉದ್ಯೋಗ ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ ಸಿಎಂ ವಿಜಯ್ ಅವರಿಗೆ ಭಾರೀ ಮುಖಭಂಗವಾದಂತಾಗಿದೆ.

ಕರೂರು ಕಾಲ್ತುಳಿತ ದುರಂತದ ಸಂತ್ರಸ್ತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಲು ಹೊರಡಿಸಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ಸರ್ಕಾರದ ಈ ಕ್ರಮವು ಸಂವಿಧಾನದ ವಿಧಿ 14 ಮತ್ತು 16ರ ಉಲ್ಲಂಘನೆಯಾಗಿದ್ದು, ಇದರಿಂದಾಗಿ ಇತರರೂ ಇದೇ ರೀತಿಯ ಉದ್ಯೋಗಕ್ಕಾಗಿ ಬೇಡಿಕೆ ಇಡಲು ಬಾಗಿಲನ್ನು ತೆರೆದಂತೆ ಆಗುತ್ತದೆ ಎಂದು ಕೋರ್ಟ್ ಹೇಳಿದೆ.


ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?:

ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ಕೆಲವು ಪ್ರಶ್ನೆಗಳನ್ನು ಎತ್ತಿದರು. ಕರೂರ್ ಕಾಲ್ತುಳಿತದ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಕೆಲಸ ನೀಡುತ್ತಿದ್ದರೆ, ಸರ್ಕಾರಿ ಬಸ್ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಕೆಲಸ ನೀಡಬಹುದೇ? ಅದೇ ರೀತಿ, ಶಿವಕಾಶಿಯಲ್ಲಿ ಆಗಾಗ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಅವರ ಕುಟುಂಬಸ್ಥರೂ ಸರ್ಕಾರಿ ಕೆಲಸ ನೀಡುವಂತೆ ಕೇಳಿದರೆ ನಾವು ಏನು ಮಾಡಬೇಕು? ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ‘ಪೊಲೀಸರನ್ನು ನಂಬಿದ್ದೆ, ಕಾಲ್ತುಳಿತದ ತಪ್ಪನ್ನೆಲ್ಲ ನನ್ನ ಮೇಲೆ ಹೊರಿಸಿಬಿಟ್ಟರು’; ಕರೂರ್​​ನಲ್ಲಿ ಸಿಎಂ ವಿಜಯ್ ಬೇಸರ

ತಮಿಳುನಾಡಿನಲ್ಲಿ ಇಂತಹ ವಿವಿಧ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವರೆಲ್ಲರಿಗೂ ಸರ್ಕಾರಿ ಉದ್ಯೋಗಗಳನ್ನು ಒದಗಿಸಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ನ್ಯಾಯಾಧೀಶರು ಕೇಳಿದ್ದಾರೆ. ಹಲವು ಅರ್ಹ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವಾಗ, ಇತರರನ್ನು ನಿರ್ಲಕ್ಷಿಸಿ ಕರೂರು ದುರಂತದ ಸಂತ್ರಸ್ತರ ಕುಟುಂಬಸ್ಥರಿಗೆ ಮಾತ್ರ ಉದ್ಯೋಗ ನೀಡುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಸರ್ಕಾರಕ್ಕೆ ಕೋರ್ಟ್ ಸಲಹೆ:

ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳನ್ನು ನೀಡುವ ಬದಲು, ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುವ ಮೂಲಕ ಅವರಿಗೆ ಸಹಾಯ ಮಾಡಬಹುದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಇದರ ನಂತರ, ನ್ಯಾಯಾಧೀಶರು ಎಲ್ಲಾ ಸರ್ಕಾರಿ ಉದ್ಯೋಗ ಆದೇಶಗಳನ್ನು ರದ್ದುಗೊಳಿಸಲು ಆದೇಶಿಸಿದ್ದಾರೆ.

ಇದನ್ನೂ ಓದಿ: ಯಾರೇ ಲಂಚ ಕೇಳಿದರೂ ಕೊಡೋದಿಲ್ಲ ಹೇಳಿ; ಕರೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗಿದ ಸಿಎಂ ವಿಜಯ್

ಏನಿದು ಘಟನೆ?:

ಕಳೆದ ವರ್ಷ ಸೆಪ್ಟೆಂಬರ್ 27ರಂದು ಟಿವಿಕೆ ಅಧ್ಯಕ್ಷ ವಿಜಯ್ ನಡೆಸಿದ ಬೃಹತ್ ರ‍್ಯಾಲಿಯಲ್ಲಿ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಈ ಬಗ್ಗೆ ಮೊದಲೇ ಸುಳಿವು ಇರದ ಹಿನ್ನೆಲೆಯಲ್ಲಿ ಆ ನೂಕುನುಗ್ಗಲನ್ನು ನಿಭಾಯಿಸಲು ಟಿವಿಕೆ ಕಾರ್ಯಕರ್ತರಿಗಾಗಲಿ, ಪೊಲೀಸರಿಗಾಗಿ ಸಾಧ್ಯವಾಗಿರಲಿಲ್ಲ. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಈ ಘಟನೆ ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ಕಪ್ಪುಚುಕ್ಕೆಯಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಕರೂರಿನಲ್ಲಿಯೂ ಟಿವಿಕೆ ಪಕ್ಷ ಭಾರೀ ಮತಗಳನ್ನು ಪಡೆದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಯಾರೂ ಊಹಿಸದ ರೀತಿಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇತ್ತೀಚೆಗೆ ಮೊದಲ ಬಾರಿ ಕರೂರಿಗೆ ಭೇಟಿ ನೀಡಿದ್ದ ವಿಜಯ್ ಕಾಲ್ತುಳಿತದಲ್ಲಿ ಮೃತಪಟ್ಟವ 31 ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದ ಆದೇಶ ಪತ್ರ ನೀಡಿದ್ದರು. ಅಗಲಿದ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಸರ್ಕಾರದ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಭಾಗವಾಗಿ ಈ ಉದ್ಯೋಗಗಳನ್ನು ನೀಡಲಾಗಿತ್ತು. ಆ ಆದೇಶ ಇದೀಗ ರದ್ದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Mon, 27 July 26

Follow Us