ಮದ್ರಾಸ್ ಹೈಕೋರ್ಟ್​ನ ಟೀಕೆ ಕಟುವಾಗಿರಬಹುದು ಆದರೆ ತೆಗೆದುಹಾಕಲಾಗದು: ಸುಪ್ರೀಂಕೋರ್ಟ್

Supreme Court: ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ನೀಡಿರುವ ಪ್ರತಿಕ್ರಿಯೆ ಕಟುವಾಗಿರಬಹುದು. ಆದರೆ, ಆ ಪ್ರತಿಕ್ರಿಯೆಗಳು ನ್ಯಾಯಾಂಗದ ಆದೇಶದ ಭಾಗವಾಗಿದ್ದು, ಅವುಗಳನ್ನು ಆದೇಶದಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

ಮದ್ರಾಸ್ ಹೈಕೋರ್ಟ್​ನ ಟೀಕೆ ಕಟುವಾಗಿರಬಹುದು ಆದರೆ ತೆಗೆದುಹಾಕಲಾಗದು: ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on:May 06, 2021 | 5:10 PM

ದೆಹಲಿ: ಕೊವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರಗಳು ಯಾವ ರೀತಿ ನಿಭಾಯಿಸುತ್ತವೆ ಎಂಬುದರ ಮೇಲೆ ಕಣ್ಣಿಟ್ಟಿರುವ ಹೈಕೋರ್ಟ್​ಗಳ  ಕಾರ್ಯವನ್ನು ಸುಪ್ರೀಂಕೋರ್ಟ್ ಶ್ಲಾಘಿಸಿದ್ದು, ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗಲು ಚುನಾವಣಾ ಆಯೋಗವೇ ಕಾರಣ ಎಂದು ಹೇಳಿದ್ದ ಮದ್ರಾಸ್ ಹೈಹೋರ್ಟ್ ವಿಮರ್ಶಾತ್ಮಕ ಟೀಕೆಗಳನ್ನು ನ್ಯಾಯಾಂಗದ ಆದೇಶದಿಂದ ತೆಗೆದು ಹಾಕಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅದೇ ವೇಳೆ ಮಾಧ್ಯಮಗಳು ನ್ಯಾಯಾಂಗ ವಿಚಾರಣೆ ಕುರಿತ ಅವಲೋಕನಗಳನ್ನು ವರದಿ ಮಾಡದಂತೆ ನಿರ್ಬಂಧ ಹೇರಬೇಕು ಎಂಬ ಮನವಿಯನ್ನು ಗುರುವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ನೀಡಿರುವ ಪ್ರತಿಕ್ರಿಯೆ ಕಟುವಾಗಿರಬಹುದು. ಆದರೆ, ಆ ಪ್ರತಿಕ್ರಿಯೆಗಳು ನ್ಯಾಯಾಂಗದ ಆದೇಶದ ಭಾಗವಾಗಿದ್ದು, ಅವುಗಳನ್ನು ಆದೇಶದಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿ ಎಂ .ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠವು ನ್ಯಾಯಾಂಗ ವಿಚಾರಣೆಯ ಕುರಿತ ಅವಲೋಕನಗಳನ್ನು ವರದಿಗಳನ್ನು ಮಾಡಬಾರದು ಎಂದು ಮಾಧ್ಯಮಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನ್ಯಾಯಾಲಯಗಳು ಮಾಧ್ಯಮದ ವಿಕಾಸದ ತಂತ್ರಜ್ಞಾನದೊಂದಿಗೆ ಸಕ್ರಿಯವಾಗಿರಬೇಕು. ನ್ಯಾಯಾಂಗ ವಿಚಾರಣೆಯನ್ನು ವರದಿ ಮಾಡುವುದನ್ನು ತಡೆಯುವುದಾದರೆ ಅದು ಒಳ್ಳೆಯದಲ್ಲ ಎಂದು ಹೇಳಿದೆ.

ಕಳೆದ ತಿಂಗಳು ನಾಲ್ಕು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಪ್ರಚಾರದ ಪ್ರಚಾರ ಕಾರ್ಯಕ್ರಮಗಳಲ್ಲಿ ಕೊವಿಡ್ ಮಾರ್ಗಸೂಚಿ ಉಲ್ಲಂಘಿಸದಂತೆ ರಾಜಕೀಯ ಪಕ್ಷಗಳನ್ನು ತಡೆಯದೇ ಇದ್ದುದಕ್ಕೆ ಚುನಾವಣಾ ಆಯೋಗದ ಕಿಡಿಕಾರಿದ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ಮೇಲೆ ಕೊಲೆ ಆರೋಪಗಳನ್ನು ವಿಧಿಸಬೇಕೆಂದು ಹೇಳಿತ್ತು.

ರಾಜಕಾರಣಿಗಳು ಬೃಹತ್ ಮೆರವಣಿಗೆ, ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದನ್ನು ತಡೆಯದೇ ಇರುವುದಕ್ಕೆ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದೆ. ದೇಶ ಈಗ ಎದುರಿಸುತ್ತಿರುವ ಪರಿಸ್ಥಿತಿಗೆ ಏಕೈಕ ಜವಾಬ್ದಾರರು ಚುನಾವಣಾ ಆಯೋಗ. ದೇಶದಲ್ಲಿ ಈ ಪರಿಸ್ಥಿತಿ ಬರುವುದಕ್ಕೆ ಚುನಾವಣಾ ಆಯೋಗವೇ ಏಕೈಕ ಜವಾಬ್ದಾರರು ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು.

ರಾಜಕೀಯ ಪಕ್ಷಗಳು ಕೊವಿಡ್ ನಿರ್ಬಂಧಗಳನ್ನು ಗಾಳಿಗೆ ತೂರುತ್ತಿರುವಾಗ ಚುನಾವಣಾ ಆಯೋಗ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದಿದೆ ಹೈಕೋರ್ಟ್. ಹಾಗಾಗಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ವಿಫಲವಾಗಿರುವುದಕ್ಕೆ ವಿಚಾರಣೆಗೊಳಪಡಿಸಬೇಕು ಎಂದಿತ್ತು.

ಮದ್ರಾಸ್ ಹೈಕೋರ್ಟ್‌ನ ಈ ಹೇಳಿಕೆಯನ್ನು “ಅಪ್ರಸ್ತುತ ಮತ್ತು ಅವಹೇಳನಕಾರಿ” ಎಂದು ಹೇಳಿದ ಚುನಾವಣಾ ಆಯೋಗ ಶನಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯವು   ಮಾಧ್ಯಮವು ಪ್ರಜಾಪ್ರಭುತ್ವದಲ್ಲಿ ಪ್ರಬಲ ಕಾವಲುಗಾರ.  ಉನ್ನತ ನ್ಯಾಯಾಲಯಗಳಲ್ಲಿ ಚರ್ಚೆಗಳನ್ನು ವರದಿ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಮಾಧ್ಯಮಗಳು  ಮೌಖಿಕ ಹೇಳಿಕೆ  ಬಗ್ಗೆ ವರದಿ ಮಾಡಬಾರದು ಎಂಬಂತಹ ಪರಿಹಾರವನ್ನು ಹುಡುಕುವುದು ಕಷ್ಟ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಹೈಕೋರ್ಟ್  ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭಗಳಾಗಿರುವುದರಿಂದ ಅವರನ್ನು ನಿರಾಶೆಗೊಳಿಸಲು ನಾವು ಬಯಸುವುದಿಲ್ಲ ಎಂದು  ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ: ಕೊವಿಡ್ 2ನೇ ಅಲೆಗೆ ಚುನಾವಣಾ ಆಯೋಗವೇ ಹೊಣೆ; ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್

ಮಾಧ್ಯಮಗಳು ಹೈಕೋರ್ಟ್ ಅಭಿಪ್ರಾಯ ವರದಿ ಮಾಡದಂತೆ ನಿರ್ಬಂಧ ವಿಧಿಸಲಾಗುವುದಿಲ್ಲ: ಸುಪ್ರೀಂಕೋರ್ಟ್

(Madras high courts remarks were harsh but can not be expunged says Supreme Court)

Published On - 5:06 pm, Thu, 6 May 21