ಇಲಿ ಪಾಷಾಣ ಬೆರೆತಿದ್ದ ಟೊಮ್ಯಾಟೋ ಇದ್ದ ನೂಡಲ್ಸ್ ತಿಂದು ಯುವತಿ ಸಾವು!
Mumbai News: ಟಿವಿ ನೋಡುತ್ತಾ, ಟೊಮ್ಯಾಟೋ ಹಣ್ಣನ್ನು ಕಟ್ ಮಾಡಿ ಅದನ್ನು ನೂಡಲ್ಸ್ಗೆ ಹಾಕಿದ ಯುವತಿ ಆ ಬಳಿಕ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾಳೆ!
ಮುಂಬೈ: ಸಾವು ಯಾವ ರೀತಿಯಲ್ಲಿ ಬರುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ನಾವು ತಿನ್ನುವ ನೂಡಲ್ಸ್ನಿಂದ ಬೇಕಾದರೂ ಸಾವು ಬರಬಹುದು ಎಂದರೆ ನೀವು ನಂಬುತ್ತೀರಾ? ನಂಬಲು ಸ್ವಲ್ಪ ಕಷ್ಟವಾದರೂ ಇದು ಸತ್ಯವಾದ ಸಂಗತಿ. ಮಹಾರಾಷ್ಟ್ರದ ಮುಂಬೈನಲ್ಲಿ ಇಂಥದ್ದೊಂದು ವಿಚಿತ್ರವಾದ ಘಟನೆ ನಡೆದಿದೆ. ನೂಡಲ್ಸ್ ಮಾಡಿಕೊಳ್ಳಲು ಅಡುಗೆ ಮನೆಗೆ ಹೋದ ಯುವತಿ ತರಕಾರಿಗಳನ್ನು ಹೆಚ್ಚಿಕೊಂಡು ಮಾಡಿಕೊಳ್ಳಲು ತಯಾರಿ ನಡೆಸಿದ್ದಳು. ಅಲ್ಲೇ ಕೆಳಗಿದ್ದ ಒಂದು ಟೊಮ್ಯಾಟೋ ಹಣ್ಣನ್ನು ನೂಡಲ್ಸ್ಗೆ ಬೆರೆಸಿ ಹಾಕಿ, ಬೌಲ್ಗೆ ಹಾಕಿಕೊಂಡು ತಿಂದ ಆಕೆಯ ಸಾವಿಗೆ ಆ ಟೊಮ್ಯಾಟೋ (Tomato) ಹಣ್ಣು ಹಾಕಿದ ನೂಡಲ್ಸ್ ಕಾರಣವಾಗಿದ್ದು ವಿಪರ್ಯಾಸ.
ಟೊಮ್ಯಾಟೋ ಹಣ್ಣು ಹಾಕಿ ಮಾಡಿದ ನೂಡಲ್ಸ್ ತಿಂದರೆ ಸಾಯುತ್ತಾರಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ವಿಷಯ ಬೇರೆಯೇ ಇದೆ. ಆಕೆಯ ಮನೆಯಲ್ಲಿ ಸಿಕ್ಕಾಪಟ್ಟೆ ಇಲಿಗಳ ಕಾಟ ಶುರುವಾಗಿತ್ತು. ಇಲಿಯನ್ನು ಹಿಡಿಯಲು ಟೊಮ್ಯಾಟೋ ಹಣ್ಣಿನೊಳಗೆ ಇಲಿ ಪಾಷಾಣವಿಟ್ಟಿದ್ದ ಆಕೆ ಆಕಸ್ಮಿಕವಾಗಿ ಅದೇ ಟೊಮ್ಯಾಟೋ ಹಣ್ಣು ಹಾಕಿ ನೂಡಲ್ಸ್ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: viral news: ವಿಶ್ವದ ಅಗ್ಗದ ಆಮ್ಲೆಟ್ ನೂಡಲ್ಸ್ ಕಡಿಮೆ ಸಮಯದಲ್ಲಿ ತಯಾರಾಗುತ್ತೆ! ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ
ಮುಂಬೈನ ಮಲಾದ್ನ ಪಾಸ್ಕಲ್ ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ರೀತಿ ಆಕಸ್ಮಿಕವಾಗಿ ಮೃತಪಟ್ಟ ಯುವತಿಯನ್ನು ರೇಖಾ ನಿಶಾದ್ ಎಂದು ಗುರುತಿಸಲಾಗಿದೆ. ಜುಲೈ 21ರಂದು ಆಕೆ ಇಲಿಯನ್ನು ಕೊಲ್ಲಲು ಟೊಮ್ಯಾಟೋ ಹಣ್ಣಿಗೆ ಇಲಿ ಪಾಷಾಣ ಹಾಕಿಟ್ಟಿದ್ದಳು. ಅದರ ಮಾರನೇ ದಿನ ಆಕೆ ಟಿವಿ ನೋಡುತ್ತಾ ನೂಡಲ್ಸ್ ಮಾಡುವಾಗ ತಾನು ಪಾಷಾಣ ಹಾಕಿಟ್ಟಿದ್ದು ನೆನಪಿಲ್ಲದೆ ಅದೇ ಟೊಮ್ಯಾಟೋವನ್ನು ಹೆಚ್ಚಿ, ನೂಡಲ್ಸ್ಗೆ ಹಾಕಿದ್ದಳು.
ವಿಷಕಾರಿಯಾಗಿದ್ದ ಟೊಮ್ಯಾಟೋದಿಂದ ತಯಾರಿಸಿದ ನೂಡಲ್ಸ್ ತಿಂದ ಆಕೆ ಅಸ್ವಸ್ಥಗೊಂಡಿದ್ದಳು. ನೂಡಲ್ಸ್ ತಿಂದ ಬಳಿಕ ವಾಂತಿ ಮಾಡಿಕೊಂಡ ಆಕೆಯನ್ನು ಆಕೆಯ ಗಂಡ ಮತ್ತು ಮೈದುನ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅದಾದ 2 ದಿನಗಳ ಬಳಿಕ ಆಕೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಳು.
Published On - 11:22 am, Sat, 30 July 22