ಈಗಾಗಲೇ ತರಕಾರಿ, ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಿಲಿಂಡರ್ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇದರ ನಡುವೆ ಇನ್ನೂ ಹಲವು ಪದಾರ್ಥಗಳ ಬೆಲೆಯೇರಿಕೆ ಮುಂದುವರೆದಿದೆ. ನೀವು ಮ್ಯಾಗಿ (Maggi), ಕಿಟ್‌ಕ್ಯಾಟ್ (KitKat) ಪ್ರಿಯರಾಗಿದ್ದರೆ ನಿಮ್ಮ ಜೇಬಿಗೆ ಮತ್ತೆ ಕತ್ತರಿ ಬೀಳುವುದು ಖಂಡಿತ. ನೆಸ್ಲೆ ( Nestle) ಕಂಪನಿಯು ತನ್ನ ಜನಪ್ರಿಯ ಬ್ರ್ಯಾಂಡ್‌ಗಳಾದ ಮ್ಯಾಗಿ, ಕಿಟ್‌ಕ್ಯಾಟ್ ಮತ್ತು ನೆಸ್ಕೆಫೆ ಕಾಫಿಯ ಬೆಲೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಮ್ಯಾಗಿ, ಕಿಟ್ಕ್ಯಾಟ್ನಲ್ಲಿ ಬಳಸುವ ಕಚ್ಚಾ ವಸ್ತುಗಳು ಹಾಗೂ ಪ್ಯಾಕೇಜಿಂಗ್ ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದೆ. ಹೀಗಾಗಿ, ಮ್ಯಾಗಿ ಬೆಲೆಯನ್ನು ಶೇ. 9ರಿಂದ 16ರಷ್ಟು ಹೆಚ್ಚಿಸಲಾಗಿದೆ. ನೆಸ್ಕೆಫೆ ಹಾಲಿನ ಪುಡಿ ಮತ್ತು ಕಾಫಿ ಪುಡಿಯ ಬೆಲೆ ಕೂಡ ಹೆಚ್ಚಾಗಿದೆ.
ಹಿಂದಿನ ತ್ರೈಮಾಸಿಕಗಳಲ್ಲಿ ತಿಳಿಸಿದಂತೆ ಪ್ರಮುಖ ಕಚ್ಚಾ ಮತ್ತು ಪ್ಯಾಕೇಜಿಂಗ್ ವಸ್ತುಗಳ ವೆಚ್ಚವು ಕಳೆದ 10 ವರ್ಷದಲ್ಲೇ ಅತಿ ಹೆಚ್ಚಾಗಿದೆ. ಈ ತ್ರೈಮಾಸಿಕದಲ್ಲಿ ವೆಚ್ಚಗಳು ಏರಿಕೆಯಾಗುತ್ತಲೇ ಇವೆ. ಇದು ಕಾರ್ಯಾಚರಣೆಗಳಿಂದ ಲಾಭದ ಮೇಲೆ ಪರಿಣಾಮ ಬೀರಿದೆ. ಮುಂದುವರಿದ ಹಣದುಬ್ಬರವು ಅಲ್ಪಾವಧಿಯಿಂದ ಮಧ್ಯಮ ಅವಧಿಯವರೆಗೆ ಪ್ರಮುಖ ಅಂಶವಾಗಿದೆ ಎಂದು ನೆಸ್ಲೆ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಕಿಟ್‌ಕಾಟ್ ಮತ್ತು ನೆಸ್ಲೆ ಮಂಚ್ ತ್ರೈಮಾಸಿಕದಲ್ಲಿ ತಲಾ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿವೆ. ಪಾನೀಯಗಳಲ್ಲಿ, ನೆಸ್ಕೆಫ್ ಕ್ಲಾಸಿಕ್ ಮತ್ತು ಸನ್‌ರೈಸ್ ಎರಡಂಕಿಯ ಬೆಳವಣಿಗೆಯನ್ನು ತಲುಪಿಸಿದೆ ಎಂದು ಕಂಪನಿ ಹೇಳಿದೆ. ನೆಸ್ಲೆ ಇಂದು ತ್ರೈಮಾಸಿಕದಲ್ಲಿ 595 ಕೋಟಿ ರೂ. ನಿವ್ವಳ ಲಾಭವನ್ನು ಪಡೆದಿರುವುದಾಗಿ ತಿಳಿಸಿದೆ. ಇದರ ಒಟ್ಟು ಮಾರಾಟ 3,951 ಕೋಟಿ ರೂ. ಕಂಪನಿಯ ಒಟ್ಟು ಮಾರಾಟದ ಬೆಳವಣಿಗೆ ಮತ್ತು ದೇಶೀಯ ಮಾರಾಟದ ಬೆಳವಣಿಗೆಯು ಶೇ.9.7 ಮತ್ತು ಶೇ.10.2 ರಷ್ಟಿದೆ. ಕಾರ್ಯಾಚರಣೆಯ ಲಾಭವು ಮಾರಾಟದ ಶೇ. 21ರಷ್ಟಿತ್ತು.
ಕಳೆದ ತಿಂಗಳು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಮತ್ತು ನೆಸ್ಲೆ ಚಹಾ, ಕಾಫಿ, ಹಾಲು ಮತ್ತು ನೂಡಲ್ಸ್‌ನಂತಹ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲಾಗಿತ್ತು. HUL ಬ್ರೂ ಕಾಫಿ ಪುಡಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಹೆಚ್ಚಿಸಲಾಗಿತ್ತು. ಬ್ರೂ ಗೋಲ್ಡ್ ಕಾಫಿ ಜಾರ್‌ಗಳನ್ನು ಶೇ. 3ರಿಂದ 4ರಷ್ಟು ದುಬಾರಿಯಾಗಿ ಮಾಡಲಾಗಿತ್ತು. ಬ್ರೂ ಇನ್‌ಸ್ಟಂಟ್ ಕಾಫಿ ಪೌಚ್‌ಗಳ ಬೆಲೆ ಶೇ. 3ರಿಂದ 6.66ರಷ್ಟು ಹೆಚ್ಚಾಗಿತ್ತು. ಅದೇ ಸಮಯದಲ್ಲಿ, ತಾಜ್ ಮಹಲ್ ಚಹಾದ ಬೆಲೆ ಕೂಡ ಶೇ. 3.7ರಿಂದ 5.8ರಷ್ಟು ಜಿಗಿದಿತ್ತು.
ಇದನ್ನೂ ಓದಿ: Maggi ಇನ್ನು ದುಬಾರಿ; HUL, ನೆಸ್ಲೆಯಿಂದ ಮ್ಯಾಗಿ, ಕಾಫಿ, ಟೀ ಬೆಲೆ ಹೆಚ್ಚಳ