ಗುವಾಹಟಿ: ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿದೆ. ರೆಬೆಲ್ ಶಾಸಕರ ತಂಡದ ನಾಯಕ ಏಕನಾಥ್ ಶಿಂಧೆ (Eknath Shinde) ಶೀಘ್ರದಲ್ಲೇ ಮುಂಬೈಗೆ ಬರುವುದಾಗಿ ನಿನ್ನೆ ಹೇಳಿದ್ದರು. ಇಂದು ಬೆಳಗ್ಗೆ ಅವರು 1 ವಾರದ ಬಳಿಕ ಗುವಾಹಟಿಯ ಹೋಟೆಲ್ನಿಂದ ಹೊರಗೆ ಕಾಣಿಸಿಕೊಂಡಿದ್ದಾರೆ. ಕಳೆದ 1 ವಾರದಿಂದ ಫೈವ್ ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ರೆಬೆಲ್ ಶಾಸಕರು ಏಕನಾಥ್ ಶಿಂಧೆ ಅವರೊಂದಿಗೆ ಗುವಾಹಟಿಯ ಕಾಮಾಕ್ಯ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಒತ್ತಾಯಿಸಿ ಭೇಟಿಯಾದ ಬೆನ್ನಲ್ಲೇ ಬಿಜೆಪಿಯೊಂದಿಗೆ ಸಮಾಲೋಚನೆಗಾಗಿ ಬಂಡಾಯ ಶಾಸಕರು ಇಂದು ಮುಂಬೈ ಅಥವಾ ದೆಹಲಿಗೆ ತೆರಳಬಹುದು ಎಂದು ಮೂಲಗಳು ಹೇಳಿವೆ. ಇನ್ನೊಂದೆಡೆ, ಗುರುವಾರ ಅಂದರೆ ಜೂ. 30ಕ್ಕೆ ವಿಶ್ವಾಸ ಮತ ಯಾಚನೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಸಿಎಂ ಉದ್ಧವ್ ಠಾಕ್ರೆಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಿಎಂ ಉದ್ಧವ್ ಠಾಕ್ರೆ ನೇೃತ್ವತ್ವದ ಮೈತ್ರಿ ಸರ್ಕಾರದ ಭವಿಷ್ಯ ಗುರುವಾಗ ಬೆಳಗ್ಗೆ 11 ಗಂಟೆಗೆ ನಿರ್ಧಾರವಾಗಲಿದೆ.
ರೆಬೆಲ್ ಶಾಸಕರಿಗೆ ಸಿಎಂ ಪತ್ರ:
ರಾಜ್ಯಪಾಲರು ನಾಳೆ ವಿಶ್ವಾಸ ಮತಯಾಚನೆಗೆ ಸೂಚನೆ ನೀಡಿರುವುದರಿಂದ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಬಹುಮತ ಸಾಬೀತುಪಡಿಸಲು ಬೇಕಾದಷ್ಟು ಬೆಂಬಲ ಇಲ್ಲದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಪತನವಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಈ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರೆಬೆಲ್ ಶಾಸಕರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗುವಾಹಟಿ ಹೋಟೆಲ್ನಲ್ಲಿರುವ ರೆಬೆಲ್ ಶಾಸಕರಿಗೆ ಭಾವನಾತ್ಮಕ ಪತ್ರ ಬರೆದಿರುವ ಉದ್ಧವ್ ಠಾಕ್ರೆ ಶಿವಸೇನೆಯ ಬಂಡಾಯ ಶಾಸಕರಿಗೆ ‘ಮನೆಗೆ ಹಿಂತಿರುಗಿ’ ಎಂದು ಮನವಿ ಮಾಡಿದ್ದಾರೆ. ನಾನು ನಿಮ್ಮೊಂದಿಗೆ ಮಾತನಾಡಲು ಸಿದ್ಧ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಿಎಂ ಉದ್ಧವ್ ಠಾಕ್ರೆಗೆ ಬಹುಮತ ಸಾಬೀತುಪಡಿಸಲು ಮುಹೂರ್ತ ಫಿಕ್ಸ್
ಕೆಲವು ಶಾಸಕರನ್ನು ಬಲವಂತವಾಗಿ ಹೋಟೆಲ್ನಲ್ಲಿ ಇರಿಸಲಾಗಿತ್ತು. ಅವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ನಾನು ನಿಮ್ಮ ಪಕ್ಷದ ಅಧ್ಯಕ್ಷ ಮತ್ತು ಶಿವಸೇನೆ ಕುಟುಂಬದ ಮುಖ್ಯಸ್ಥ. ಹಾಗಾಗಿ, ನಿಮ್ಮ ಅಹವಾಲು ಆಲಿಸಲು ಸಿದ್ಧನಿದ್ದೇನೆ. ದಯವಿಟ್ಟು ವಾಪಾಸ್ ಬಂದು ನನ್ನನ್ನು ವೈಯಕ್ತಿಕವಾಗಿ ಭೇಟಿ ಮಾಡಿ. ನೀವು ಇಲ್ಲಿಗೆ ಬಂದರೆ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇನೆ. ನಿಮ್ಮ ಕುಟುಂಬಸ್ಥರು ನಿಮ್ಮ ಬಗ್ಗೆ ಚಿಂತಿತರಾಗಿದ್ದಾರೆ. ದಯವಿಟ್ಟು ತಪ್ಪು ಜನರ ಬಲೆಗೆ ಬೀಳಬೇಡಿ. ಶಿವಸೇನೆ ನೀಡಿದ ಗೌರವವನ್ನು ಯಾರೂ ನಿಮಗೆ ನೀಡುವುದಿಲ್ಲ ಎಂದು ಪತ್ರ ಬರೆದಿದ್ದಾರೆ.
ಹಾಗೇ, ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ನಮ್ಮ ಬಳಿ 50 ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ. ಇಲ್ಲಿರುವ ಯಾವುದೇ ಶಾಸಕರನ್ನು ನಿಮಗೆ ಹತ್ತಿಕ್ಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ, 50 ಶಾಸಕರು ನಮ್ಮೊಂದಿಗಿದ್ದಾರೆ ಅಂತ ಉದ್ಧವ್ ಠಾಕ್ರೆ ಬಣಕ್ಕೆ ತಿರುಗೇಟು ನೀಡಿದ್ದಾರೆ. ನಾವು ಶಿವಸೇನೆಯಲ್ಲಿ ಇದ್ದೇವೆ, ಶಿವಸೇನೆಯನ್ನು ನಾವೇ ಮುನ್ನಡೆಸುತ್ತೇವೆ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.