ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳಪೆ ಆಹಾರ: ಬಾಣಸಿಗನಿಗೆ ಸಚಿವ ಬಚ್ಚು ಕಡು ಕಪಾಳಮೋಕ್ಷ
ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಬಚ್ಚು ಕಡು ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳು ಸೇರಿದಂತೆ ಇತರ ರೋಗಿಗಳಿಗೆ ನೀಡುವ ಆಹಾರವನ್ನು ನೋಡಿ ಸಿಟ್ಟುಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಯ ಬಾಣಸಿಗರನ್ನು ಕರೆದು ವಿವರಣೆ ಕೇಳಿದ್ದಾರೆ.
ಮುಂಬೈ: ಮಹಾರಾಷ್ಟ್ರದ ಅಕೊಲಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂಬ ದೂರು ಸಿಕ್ಕಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಬಚ್ಚು ಕಡು ಆಸ್ಪತ್ರೆಯ ಬಾಣಸಿಗನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸೋಮವಾರ ಸಂಜೆ ಆಸ್ಪತ್ರೆಗೆ ಸಚಿವರು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳು ಸೇರಿದಂತೆ ಇತರ ರೋಗಿಗಳಿಗೆ ನೀಡುವ ಆಹಾರವನ್ನು ನೋಡಿ ಸಿಟ್ಟುಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಯ ಅಡುಗೆಯವನನ್ನು ಕರೆದು ಆತನಲ್ಲಿ ವಿವರಣೆ ಕೇಳಿದ್ದಾರೆ. ಆತನ ಉತ್ತರ ಕೇಳಿ ಮತ್ತಷ್ಟು ಕುಪಿತಗೊಂಡ ಸಚಿವರು ಕಪಾಳಕ್ಕೆ ಬಾರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆಸ್ಪತ್ರೆಗಳಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
काल शासकीय वैद्यकीय महाविद्यालय, अकोला येथे कोविड रुग्णालयात रुग्णांना दिल्या जाणाऱ्या अन्नाची तपासणी केली व रुग्णांच्या भेटी घेऊन विचारपूस करण्यात आली. pic.twitter.com/a7WQqAFX7f
— BACCHU KADU (@RealBacchuKadu) April 6, 2021
ಅಮ್ಮನ ಮೇಲೆ ಆಣೆ ಮಾಡಿ ಹೇಳು ಎಂದ ಸಚಿವರು ಇಲ್ಲಿ ಊಟಕ್ಕೆ ಎಷ್ಟು ಬೇಳೆ ಬಳಸುತ್ತಿದ್ದೀರಿ ಎಂದು ಸಚಿವರು ಬಾಣಸಿಗನಲ್ಲಿ ಕೇಳಿದ್ದಾರೆ. ಸಚಿವರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಬಾಣಸಿಗ ಮೊದಲು 3 ಕೆಜಿ ಎಂದಿದ್ದು, ಆಮೇಲೆ 10 ಕೆಜಿ ಬಳಸುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ. ಅಮ್ಮನ ಮೇಲೆ ಆಣೆ ಮಾಡಿ ಹೇಳು ಎಂದು ಸಚಿವರು ಹೇಳಿದ ನಂತರವೂ ಬಾಣಸಿಗ ಮತ್ತೆ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಸಚಿವರು ಅಲ್ಲಿ ಬಳಕೆಯಾದ ಬೇಳೆ ಕಾಳುಗಳ ಲೆಕ್ಕವನ್ನು ತೋರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ನಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕಡು, ಸರ್ಕಾರಿ ಆಸ್ಪತ್ರೆಯಲ್ಲಿನ ಕಳಪೆ ಆಹಾರ, ಆಹಾರ ವಸ್ತುಗಳ ಪೂರೈಕೆ ಮತ್ತು ಸಂಗ್ರಹದ ಬಗ್ಗೆ ಇರುವ ದಾಖಲೆಗಳ ನಿರ್ವಹಣೆಯಲ್ಲಿ ಲೋಪ ಇದೆಲ್ಲದರ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಉಪ ವಿಭಾಗೀಯ ಅಧಿಕಾರಿಗೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ:25 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ಕೊಡಿ: ಪ್ರಧಾನಿಗೆ ಪತ್ರ ಬರೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
Published On - 11:56 am, Wed, 7 April 21