
ಭೋಪಾಲ್, ಜುಲೈ 07: ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನ ಜಾವ ರಸ್ತೆ ಅಪಘಾತ(Accident)ವೊಂದು ಸಂಭವಿಸಿದೆ. ಚಲಿಸುತ್ತಿದ್ದ ಟ್ರಕ್‌ಗೆ ಎಸ್‌ಯುವಿ (SUV) ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಅಪಘಾತ ನಡೆದಿದ್ದು ಹೇಗೆ?
ಮೈಹಾರ್ ಜಿಲ್ಲೆಯ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-30 ರ ರಿಗ್ರಾ ಗ್ರಾಮದ ಬಳಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಮೃತರಾದವರೆಲ್ಲರೂ ಅಮರಪಟನ್‌ನಲ್ಲಿ ನಡೆದ ಸೋದರ ಸಂಬಂಧಿ ಮನೋಜ್ ಪಟೇಲ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮೈಹಾರ್‌ಗೆ ಹಿಂತಿರುಗುತ್ತಿದ್ದರು.
ಅತಿ ವೇಗವಾಗಿ ಬಂದ ಕಾರು ಮುಂಭಾಗದಲ್ಲಿದ್ದ ಟ್ರಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗಿದ್ದ ಆರೂ ಜನರು ಟ್ರಕ್‌ನ ಹಿಂಭಾಗದಲ್ಲಿ ಸಿಲುಕಿಕೊಂಡಿದ್ದರು.
ಸ್ಥಳದಲ್ಲೇ ಐವರ ಸಾವು
ಮಾಹಿತಿ ತಿಳಿದ ತಕ್ಷಣ ಹೆದ್ದಾರಿ ಗಸ್ತು ತಂಡ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಭಾರಿ ಹರಸಾಹಸದ ನಂತರ ಕಾರಿನಲ್ಲಿದ್ದವರನ್ನು ಹೊರತೆಗೆಯಲಾಯಿತಾದರೂ, ಅಷ್ಟರಲ್ಲೇ ಐವರು ಯುವಕರು ಪ್ರಾಣ ಬಿಟ್ಟಿದ್ದರು.
ಮತ್ತಷ್ಟು ಓದಿ: ತುಮಕೂರು: SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತ; ಇಬ್ಬರು ಮಹಿಳಾ ಸಿಬ್ಬಂದಿ ಪೈಕಿ ಓರ್ವರ ಸ್ಥಿತಿ ಗಂಭೀರ
ಮೃತರ ವಿವರ
ಮೃತರನ್ನು ಅಂಕುರ್ ಪಟೇಲ್ (40), ಮೃದುಲ್ ಪಟೇಲ್ (32), ವಿಜಯ್ ಪಟೇಲ್ (30), ಹರಿಶಂಕರ್ ಪಟೇಲ್ (25) ಮತ್ತು ಶಿವ ಪಟೇಲ್ (23) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ಥಳೀಯ ಕಾಂಗ್ರೆಸ್ ನಾಯಕ ಮನೀಶ್ ಪಟೇಲ್ ಅವರ ಸಹೋದರರು ಎಂದು ತಿಳಿದುಬಂದಿದೆ.
ಒಬ್ಬರ ಸ್ಥಿತಿ ಗಂಭೀರ
ಅಪಘಾತದಲ್ಲಿ ಬದುಕುಳಿದಿರುವ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅಮರ್‌ಪಟಾನ್ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸತ್ನಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೈಹಾರ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದ್ದು, ಇಡೀ ಗ್ರಾಮದಲ್ಲಿ ಸದ್ಯ ಶೋಕದ ಅಲೆ ಆವರಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ