ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಕೇಸ್​​ ಮರು ತನಿಖೆಗೆ ಸುಪ್ರೀಂಕೋರ್ಟ್​ ಅಸ್ತು

2012ರ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಹಳೆಯ ತನಿಖಾಧಿಕಾರಿಗಳನ್ನು ಹೊರಗಿಟ್ಟು 3 ತಿಂಗಳೊಳಗೆ ಹೊಸ ತಂಡದಿಂದ ಸ್ವತಂತ್ರ ವರದಿ ಸಲ್ಲಿಸಲು ಸೂಚಿಸಿದೆ. ಆ ಮೂಲಕ ಈ ಹಿಂದೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣಕ್ಕೆ ಮತ್ತೆ ಮರುಜೀವ ಬಂದಿದೆ.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಕೇಸ್​​ ಮರು ತನಿಖೆಗೆ ಸುಪ್ರೀಂಕೋರ್ಟ್​ ಅಸ್ತು
ಸೌಜನ್ಯ ಪ್ರಕರಣಕ್ಕೆ ಮರುಜೀವ
Image Credit source: PTI

Updated on: Sep 21, 2026 | 1:00 PM

ಮುಖ್ಯಾಂಶಗಳು

  • ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಕೇಸ್​​ ಮರು ತನಿಖೆಗೆ ಸುಪ್ರೀಂಕೋರ್ಟ್​ ಅಸ್ತು
  • 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ
  • ಮರು ತನಿಖೆಗೆ ಸುಪ್ರೀಂ ಕೋರ್ಟ್​​ ಆದೇಶಿಸಿದ್ದು, 3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ

ದೆಹಲಿ/ಮಂಗಳೂರು, ಸೆಪ್ಟೆಂಬರ್​​ 21: 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದ್ದು, ಕೇಸ್​​ ಮರು ತನಿಖೆಗೆ ಸುಪ್ರೀಂಕೋರ್ಟ್​ ಅಸ್ತು ಎಂದಿದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಹೊಸದಾಗಿ ತನಿಖೆಗೆ ಕೋರ್ಟ್​​ ಆದೇಶಿಸಿದ್ದು, 3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಆ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ಈ ಪ್ರಕರಣಕ್ಕೆ ಮತ್ತೆ ಮರುಜೀವ ಬಂದಿದೆ.

ತನಿಖಾ ತಂಡದ ಬಗ್ಗೆ ಸುಪ್ರೀಂಕೋರ್ಟ್​​ ನಿರ್ದೇಶನ

Soujanya Murder Case: Supreme Court Orders Fresh Investigation, Gives 3-Months Deadline

ಸೌಜನ್ಯ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖೆಯಲ್ಲಿ ಸೇರಿಸದಂತೆ ನಿರ್ದೇಶನ ನೀಡಿದ್ದು, ಹೊಸ ತಂಡದಿಂದ ಸ್ವತಂತ್ರವಾಗಿ ಮರು ತನಿಖೆ ನಡೆಸುವಂತೆ ಸೂಚಿಸಿದೆ. ಪ್ರಕರಣದ ತನಿಖೆ ಮತ್ತು ಸಾಕ್ಷ್ಯಗಳ ಕುರಿತು ಈ ಹಿಂದೆ ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಸಂತೋಷ್ ರಾವ್ ನಿರಪರಾಧಿ, ಪ್ರಕರಣವನ್ನು ಬೇರೆ ಯಾರೋ ನಡೆಸಿದ್ದಾರೆ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು. 140–150 ಪುಟಗಳ ಸಾಕ್ಷ್ಯವನ್ನು ತೆಗೆದುಹಾಕಲಾಗಿದೆ ಎಂಬ ಆರೋಪವೂ ವಿಚಾರಣೆಯಲ್ಲಿ ಪ್ರಸ್ತಾಪವಾಗಿತ್ತು.

ಇದನ್ನೂ ಓದಿ: ಉಜಿರೆ ಸೌಜನ್ಯ ಅತ್ಯಾಚಾರ, ಕೊಲೆ ಕೇಸ್: ಸಂತೋಷ್ ರಾವ್ ನಿರ್ದೋಷಿ, 11 ವರ್ಷ ಬಳಿಕ ತೀರ್ಪು ನೀಡಿದ ಸಿಬಿಐ ಕೋರ್ಟ್

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆ

2012 ರ ಅಕ್ಟೋಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ 17 ವರ್ಷದ ಸೌಜನ್ಯಾಳನ್ನು ಅಪಹರಿಸಿ, ಅತ್ಯಾಚಾರ ಎಸಗಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಕೆಲವು ದಿನಗಳ ನಂತರ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಮುಖ್ಯ ಆರೋಪಿಯನ್ನಾಗಿ ಬಂಧಿಸಿದ್ದರು. ಸಾರ್ವಜನಿಕರ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳ ನಂತರ, ಪ್ರಕರಣವನ್ನು ಮೊದಲು ಸಿಐಡಿ (CID) ಮತ್ತು ನಂತರ ಕೇಂದ್ರ ತನಿಖಾ ದಳಕ್ಕೆ (CBI) ವಹಿಸಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆತನನ್ನು ಖುಲಾಸೆಗೊಳಿಸಿತ್ತು.

ಹೈಕೋರ್ಟ್​​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​​ ಕದತಟ್ಟಿದ್ದ ಸೌಜನ್ಯಾ ತಾಯಿ

ಸಿಬಿಐ ತನಿಖೆಯಲ್ಲಿ ಲೋಪದೋಷಗಳಿದ್ದು, ನೈಜ ಆರೋಪಿಗಳನ್ನು ರಕ್ಷಿಸಲಾಗಿದೆ ಎಂದು ಆರೋಪಿಸಿ ಸೌಜನ್ಯಾಳ ತಾಯಿ ಕುಸುಮಾವತಿ ಅವರು ಮರುತನಿಖೆಗೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ತನಿಖಾ ಸಂಸ್ಥೆಯ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಮರುತನಿಖೆ ನಡೆಸುವಂತೆ ಈಗ ಆದೇಶ ಹೊರಡಿಸಿದೆ.

ವರದಿ: ನಟರಾಜ್​​, ಟಿವಿ9 ನವದೆಹಲಿ

ಲೈವ್​ ಅಪ್ಡೇಟ್​ಗೆ ಇಲ್ಲಿ ಕ್ಲಿಕ್​ ಮಾಡಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:06 pm, Mon, 21 September 26

Loading...
Unable to load recommendations.
Follow Us