ಬೆಂಗಳೂರಿಗರನ್ನು ಕರೆಯಲು ಬರುತ್ತಿರುವ ಮಾಲ್ಡೀವ್ಸ್​ ಪ್ರವಾಸೋದ್ಯಮ ಸಚಿವ ಇಬ್ರಾಹಿಂ

ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಅವರು ವೆಲ್‌ಕಮ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಪ್ರವಾಸೋದ್ಯಮ ರೋಡ್‌ಶೋಗಳನ್ನು ನಡೆಸಲು ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಅಭಿಯಾನವು ಬೆಂಗಳೂರು ಸೇರಿದಂತೆ ಮೂರು ಪ್ರಮುಖ ನಗರಗಳಲ್ಲಿ ನಡೆಯಲಿದೆ.

ಬೆಂಗಳೂರಿಗರನ್ನು ಕರೆಯಲು ಬರುತ್ತಿರುವ ಮಾಲ್ಡೀವ್ಸ್​ ಪ್ರವಾಸೋದ್ಯಮ ಸಚಿವ ಇಬ್ರಾಹಿಂ
ಇಬ್ರಾಹಿಂ ಫೈಸಲ್
Follow us
ನಯನಾ ರಾಜೀವ್
|

Updated on:Jul 29, 2024 | 9:48 AM

ಭಾರತ ಹಾಗೂ ಮಾಲ್ಡೀವ್ಸ್ ಸಂಬಂಧ ಹಳಸಿದ್ದು ಅದನ್ನು ಸರಿಪಡಿಸಲು ಮಾಲ್ಡೀವ್ಸ್​ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲೂ ರೋಡ್​ ಶೋ ನಡೆಸುತ್ತಿರುವುದು ವಿಶೇಷ. ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಪ್ರಮುಖ ನಗರಗಳಲ್ಲಿ ರೋಡ್​ ಶೋ ನಡೆಸಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಮಾಲ್ಡೀವ್ಸ್​ ಸರ್ಕಾರ ವೆಲ್​ಕಮ್ ಇಂಡಿಯಾ ಅಭಿಯಾನದ ನೀಲನಕ್ಷೆ ಸಿದ್ಧಪಡಿಸಿದ್ದು, ಇದರ ಅಡಿಯಲ್ಲಿ ಭಾರತೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್​ಗೆ ಭೇಟಿ ನೀಡುವಂತೆ ಮನವಿ ಮಾಡಲಾಗುವುದು.

ಈ ಅಭಿಯಾನದ ಅಡಿಯಲ್ಲಿ ಮಾಲ್ಡೀವ್ಸ್​ ಪ್ರವಾಸೋದ್ಯಮ ಸಚಿವರು ಭಾರತದ ಮೂರು ಪ್ರಮುಖ ನಗರಗಳಲ್ಲಿ ರೋಡ್​ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಈ ರೋಡ್​ ಶೋಗಳು ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ.

ಜುಲೈ 30ರಂದು ದೆಹಲಿಯಲ್ಲಿ, ಆಗಸ್ಟ್ 1 ರಂದು ಮುಂಬೈನಲ್ಲಿ, ಆಗಸ್ಟ್ 3ರಂದು ಬೆಂಗಳೂರಿನಲ್ಲಿ ರೋಡ್​ ಶೋಗಳು ನಡೆಯಲಿವೆ. ಭಾರತ ಹಾಗೂ ಮಾಲ್ಡೀವ್ಸ್​ ನಡುವಿನ ಪ್ರವಾಸೋದ್ಯಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ವರ್ಷದ ಮೇ ತಿಂಗಳ ಆರಂಭದಲ್ಲಿ ಮಾಲ್ಡೀವ್ಸ್​ನ ಪ್ರವಾಸೋದ್ಯಮ ಸಚಿವರು ಭಾರತೀಯ ಪ್ರವಾಸಿಗರಿಗೆ ಗರಿಷ್ಠ ಸಂಖ್ಯೆಯಲ್ಲಿ ಮಾಲ್ಡೀವ್ಸ್​ಗೆ ಭೇಟಿ ನೀಡುವಂತೆ ಮನವಿ ಮಾಡಿದ್ದರು.

ಮತ್ತಷ್ಟು ಓದಿ: ಭಾರತವಿಲ್ಲದೆ ನಮ್ಮ ಆರ್ಥಿಕತೆ ನಡೆಯಲು ಸಾಧ್ಯವಿಲ್ಲ, ತಪ್ಪಿನ ಅರಿವಾಗಿದೆ, ಭಾರತಕ್ಕೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ಭೇಟಿ

ಮಾಲ್ಡೀವ್ಸ್​ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜನವರಿ ಮತ್ತು ಏಪ್ರಿಲ್ ನಡುವೆ ಮಾಲ್ಡೀವ್ಸ್​ಗೆ ಬರುವ ಭಾರತೀಯ ಪ್ರವಾಸಿಗರ ಸಂಖ್ಯೆ ಶೇ.42ರಷ್ಟು ಕಡಿಮೆಯಾಗಿದೆ.

ಮಾಲ್ಡೀವ್ಸ್​ ಭಾರತೀಯ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ತಾಣವಾಗಿತ್ತು, ಆದರೆ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾದ ಬಳಿಕ ಮಾಲ್ಡೀವ್ಸ್​ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಪ್ರವಾಸೋದ್ಯಮ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಜನವರಿ ಮತ್ತು ಏಪ್ರಿಲ್ ನಡುವೆ 42,638 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದಾರೆ. ಆದರೆ, ಕಳೆದ ವರ್ಷ ನಾಲ್ಕು ತಿಂಗಳಲ್ಲಿ 73, 785 ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದರು.

ಭಾರತ-ಮಾಲ್ಡೀವ್ಸ್​ ಉದ್ವಿಗ್ನತೆ ಮತ್ತು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿನ ಕುಸಿತಕ್ಕೆ ಮುಯಿಝು ಸರ್ಕಾರವನ್ನು ದೂಷಿಸಲಾಗುತ್ತಿದೆ. ಮುಯಿಝು ಕಳೆದ ವರ್ಷ ನವೆಂಬರ್​ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾದರು, ಆಗಿನಿಂದಲೂ ಉದ್ವಿಗ್ನತೆ ಇದೆ. ಚುನಾವಣಾ ಪ್ರಚಾರದಲ್ಲಿ ಇಂಡಿಯಾ ಔಟ್ ಎನ್ನುವ ಘೋಷಣೆ ನೀಡಿದ್ದರು.

ಉದ್ವಿಗ್ನತೆ ಶುರುವಾಗಿದ್ಹೇಗೆ? ಪ್ರಧಾನಿ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದಾಗ, ಮಾಲ್ಡೀವ್ಸ್​ನ ಮೂರು ಮಂತ್ರಿಗಳು ಮೋದಿಯವರ ಫೋಟೊಗೆ ಕೆಲವು ಆಕ್ಷೇಪಾರ್ಹ ಕಮೆಂಟ್​ಗಳನ್ನು ಮಾಡಿದ್ದರು. ಅಂದಿನಿಂದ ಎರಡು ದೇಶಗಳ ನಡುವೆ ಮುನಿಸು ಶುರುವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:17 am, Mon, 29 July 24