PESB Chairperson: ಮಲ್ಲಿಕಾ ಶ್ರೀನಿವಾಸನ್, ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ ಸ್ಥಾನ ಅಲಂಕರಿಸಿದ ಮೊದಲ ಮಹಿಳೆ
ಸಾರ್ವಜನಿಕ ಉದ್ಯಮ ಮಂಡಳಿಗೆ ಇದೇ ಮೊದಲ ಬಾರಿಗೆ, ಓರ್ವ ಖಾಸಗೀ ಕೈಗಾರಿಕೋದ್ಯಮಿ ಮಲ್ಲಿಕಾ ಶ್ರೀನಿವಾಸನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನು ಕ್ರಾಂತಿಕಾರಿ ಎಂದು ಬಣ್ಣಿಸಲಾಗುತ್ತಿದೆ.
ಟ್ರಾಕ್ಟರ್ ಆ್ಯಂಡ್ ಫಾರ್ಮ್ ಈಕ್ವಿಪ್ಮೆಂಟ್ (Tractor and Farm Equipment) ಕಂಪೆನಿಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಶ್ರೀನಿವಾಸನ್ ಅವರನ್ನು ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿಯ (Public Enterpises Selection Board) ಅಧ್ಯಕ್ಷರನ್ನಾಗಿ ಕೇಂದ್ರ ಸರಕಾರ ನೇಮಿಸಿದೆ. ಈ ಕುರಿತು ಇಂದು ಬೆಳಿಗ್ಗೆ ಸರಕಾರದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗೀ ವ್ಯಾಪಾರೋದ್ಯಮದಲ್ಲಿ ತುಂಬಾ ಅನುಭವ ಹೊಂದಿರುವ ವ್ಯಕ್ತಿಯೊಬ್ಬರನ್ನು ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ. ಪ್ರಧಾನಿಗಳ ನೇತೃತ್ವದಲ್ಲಿ ಇರುವ ಸಂಪುಟ ಆಯ್ಕೆ ಸಮಿತಿಯು ಈ ಆಯ್ಕೆಯನ್ನು ಅಂತಿಮಗೊಳಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿಯಲ್ಲಿ ಮೂರು ಜನ ಸದಸ್ಯರು ಇರುತ್ತಾರೆ. 1985 ರ ಬ್ಯಾಚ್ನ ಐಎಎಸ್ ಅಧಿಕಾರಿ ಶೈಲೇಶ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸದ್ಯಕ್ಕೆ ಅವರು ಸಾರ್ವಜನಿಕ ಉದ್ಯಮ ಖಾತೆಯ ಕಾರ್ಯದರ್ಶಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಮ್.ಕೆ. ಗುಪ್ತಾ ಮತ್ತು ಶೇಖರ್ ಮಿತ್ತಲ್ ಅವರು ಇನ್ನುಳಿದ ಇಬ್ಬರು ಸದಸ್ಯರು.
ಯಾರೀಕೆ ಮಲ್ಲಿಕಾ ಶ್ರೀನಿವಾಸನ್? ನಮಗೆಲ್ಲಾ ಸಾಮಾನ್ಯವಾಗಿ ಗೊತ್ತಿರುವ ಒಂದು ಮಾಹಿತಿಯೊಂದಿಗೆ ಅವರನ್ನು ಗುರುತಿಸಬಹುದು. ಟಿವಿಎಸ್ ಮೋಟರ್ ಸೈಕಲ್ ಗೊತ್ತಲ್ಲ? ಈ ಟಿವಿಎಸ್ ಕಂಪೆನಿಯ ಮಾಲಿಕರಾದ ವೇಣು ಶ್ರೀನಿವಾಸನ್ ಅವರ ಹೆಂಡತಿಯೇ ಮಲ್ಲಿಕಾ ಶ್ರೀನಿವಾಸನ್. ಇವರೇನು ಸಾಮಾನ್ಯರಲ್ಲ. ಚೆನ್ನೈನ ಹೊರವಲಯದಲ್ಲಿ ಇರುವ ಟ್ರಾಕ್ಟರ್ ಆ್ಯಂಡ್ ಫಾರ್ಮ್ ಈಕ್ವಿಪ್ಮೆಂಟ್ (Tractor and Farm Equipment) ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮಲ್ಲಿಕಾ ಕೆಲಸ ನಿರ್ವಹಿಸುತ್ತಿದ್ದಾರೆ. 1960 ರಲ್ಲಿ ಸ್ಥಾಪಿತವಾಗಿರುವ ಈ ಕಂಪೆನಿ 100 ದೇಶಗಳಲ್ಲಿ ತನ್ನ ವ್ಯವಹಾರ ನಡೆಸುತ್ತಿದೆ ಮತ್ತು 93 ಬಿಲಿಯನ್ ರೂಪಾಯಿ ವ್ಯವಹಾರ ನಡೆಸುತ್ತಿದೆ. ಮದ್ರಾಸ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಎಂ.ಎ ಪದವಿ ಗಳಿಸಿದ ಅವರು ಪ್ರಸಿದ್ಧ ವಾರ್ಟ್ನ್ ಸ್ಕೂಲ್ ಆಫ್ ಬಿಸಿನೆಸ್ನಲ್ಲಿ ಮತ್ತೆ ಎಂಬಿಎ ಪದವಿ ಗಳಿಸಿದ್ದಾರೆ.
ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ ಪದವಿ ಮಹತ್ವ ಏನು? ಸಾರ್ವಜನಿಕ ಉದ್ಯಮಗಳಲ್ಲಿ ಎರಡು ಭಾಗ. ಒಂದು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಇನ್ನೊಂದು ಸಾರ್ವಜನಿಕ ಕೈಗಾರಿಕೆಗಳು. ಉದಾಹರಣೆಗೆ ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸೇರಿದಂತೆ ಅನೇಕ ಸಾರ್ವಜನಿಕ ಉದ್ಯಮಗಳಿವೆ. ಇವುಗಳ ಅಧ್ಯಕ್ಷ ಸ್ಥಾನ ಅಥವಾ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಯಾರನ್ನಾದರೂ ನೇಮಿಸಬೇಕೆಂದರೆ, ಈ ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಈಗ ಮಲ್ಲಿಕಾ ಶ್ರೀನಿವಾಸನ್ ಈ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬಂದರೆ ಬಹಳ ಬದಲಾವಣೆ ಬರಬಹುದು ಎಂದು ಕೆಲವರು ಹೇಳಿದ್ದಾರೆ. ಇವರ ನೇಮಕವನ್ನು ಸಾರ್ವಜನಿಕ ವಲಯದಲ್ಲಿ ಬರಲಿರುವ ಬದಲಾವಣೆಯ ಮುನ್ಸೂಚನೆ ಎಂದು ಬಹಳ ಜನ ಬಣ್ಣಿಸಿದ್ದಾರೆ. ಇಷ್ಟು ದಿನ ಈ ಪದವಿಯನ್ನು ನಿವೃತ್ತ ಐಎಎಸ್ ಅಧಿಕಾರಿಗಳು ಅಲಂಕರಿಸುತ್ತಿದ್ದರು. ಭಾರತದ ಸಾರ್ವಜನಿಕ ಉದ್ಯಮದ ಬಗ್ಗೆ ಇರುವ ಆರೋಪ ಏನೆಂದರೆ, ಜಡ್ಡುಗಟ್ಟಿದ ಭಾರತೀಯ ಸಾರ್ವಜನಿಕ ಉದ್ಯಮ ವ್ಯವಸ್ಥೆ ಬದಲಾವಣೆ ತರಲು ಆಗುತ್ತಿಲ್ಲ.
ಮೇಲಿನ ಹಂತದಲ್ಲಿ ಏನಾದರೂ ಬದಲಾವಣೆ ತಂದರೆ, ಕೆಳಗಿನ ಹಂತದಲ್ಲೂ ಬದಲಾವಣೆ ತರಬಹುದು ಎಂಬುದು ಹಲವಾರು ಅರ್ಥಶಾಸ್ತ್ರಜ್ಞರ ವಾದವಾಗಿತ್ತು. ಮಲ್ಲಿಕಾ ಅವರ ನೇಮಕದೊಂದಿಗೆ ಈ ಸಂಪ್ರದಾಯವನ್ನು ಮುರಿದಿದ್ದಷ್ಟೇ ಅಲ್ಲ, ಹೊಸ ದಿಕ್ಕಿನತ್ತ ಸಾರ್ವಜನಿಕ ವಲಯವನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಬಹುದು. ಖಾಸಗೀ ವಲಯದಲ್ಲಿ ಹರಿದುಬರುತ್ತಿರುವ ಹೊಸ ನೀರು ಸಾರ್ವಜನಿಕ ಉದ್ಯಮ ವಲಯಕ್ಕೂ ಬರಬೇಕು ಎಂಬುದು ಒಂದು ಲೆಕ್ಕಾಚಾರವಾದರೆ.. ನಿಧಾನ ಗತಿಯಲ್ಲಿ ಕೆಲಸ ಮಾಡುವ ಪ್ರವೃತ್ತಿ, ಪ್ರಾಮಾಣಿಕತೆ, ಸ್ಪರ್ಧಾತ್ಮಕ ಮನೋಭಾವವನ್ನು ಸಾರ್ವಜನಿಕ ವಲಯದಲ್ಲಿಯೂ ತರಬಹುದು ಎಂದು ಹೇಳಲಾಗುತ್ತಿದೆ.
ಇದು ನಿಜವೇ? ಇದಕ್ಕೆ ತದ್ವಿರುದ್ಧವಾದ ವಾದವೂ ಇದೆ. ಉದಾಹರಣೆಗೆ ಕೊವಿಡ್ ಸಂದರ್ಭದಲ್ಲಿ ಸರಕಾರದ ಕೈ ಖಾಲಿಯಾದಾಗ ಸರಕಾರದ ನೆರವಿಗೆ ಬಂದವರೇ ಕೇಂದ್ರ ಸರಕಾರದ ನವರತ್ನ ಕಂಪೆನಿಗಳು. ಅವು ಸರಕಾರದ ಖಾಲಿ ಖಜಾನೆಗೆ ವೆಂಟಿಲೇಟರ್ ಆಗಿ ಬಂದವು. ಅವೆಲ್ಲ ಚೆನ್ನಾಗಿಯೇ ಕೆಲಸ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಈ ನಿರ್ಧಾರ ಸರಿಯಾದುದಲ್ಲ ಎಂದು ಹೆಸರು ಹೇಳಲಿಚ್ಚಿಸದ ಒಎನ್ಜಿಸಿ ಕಂಪನಿಯ ನಿವೃತ್ತ ಸ್ವತಂತ್ರ ನಿರ್ದೇಶಕ ಟಿವಿ9 ಡಿಜಿಟಲ್ಗೆ ತಿಳಿಸಿದ್ದಾರೆ.
ಸರಕಾರ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ಹಾಗಾಗಿಯೇ ಈ ರೀತಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಇಲ್ಲಿ ರಾಜಕೀಯ ಇರಬಹುದು. ಎರಡು ವರ್ಷದಿಂದ ಖಾಲಿ ಇದ್ದ ಈ ಸ್ಥಾನವನ್ನು ತಮಿಳುನಾಡು ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಮಾಡಬೇಕಿತ್ತು? ಚುನಾವಣೆ ಮುಗಿಯುವವರೆಗೆ ಕಾದಿದ್ದರೆ ಆಗುತ್ತಿತ್ತು ಎಂಬ ಮಾತನ್ನು ಸೇವೆಯಲ್ಲಿರುವ ಓರ್ವ ಐಎಎಸ್ ಅಧಿಕಾರಿ ಹೇಳಿದರು.
ಇದನ್ನೂ ಓದಿ:
ಇಂದು ಮಹಿಳಾ ಉದ್ಯಮಿಗಳಿಂದ ಭರ್ಜರಿ ಶಾಪಿಂಗ್ ಮಾಡಿದ ಪ್ರಧಾನಿ ನರೇಂದ್ರ ಮೋದಿ..
ಮಹಿಳಾ ಸರ್ಕಾರಿ ನೌಕರರಿಗೆ 6 ತಿಂಗಳು ಮಕ್ಕಳ ಆರೈಕೆ ರಜೆ; ಬಜೆಟ್ನಲ್ಲಿ ಮಹಿಳೆಯರಿಗಿದೆ ಹಲವು ಕೊಡುಗೆಗಳು
(Mallika Srinivasan breaks glass ceiling to become chairman of Public Enterprises Selection Board chairman)
Published On - 6:22 pm, Fri, 2 April 21