
ಕೋಲ್ಕತ್ತಾ, ಅಕ್ಟೋಬರ್ 14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕೋಲ್ಕತ್ತಾದ ಕಾಲಿಘಾಟ್ ನಿವಾಸದ ಹೊರಗೆ ಮಂಗಳವಾರ ಸಂಜೆ ಭದ್ರತಾ ಲೋಪವಾಗಿದೆ. ಮಮತಾ ಬ್ರಾನರ್ಜಿ ಸಂಜೆ 6 ಗಂಟೆ ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದ ವೇಳೆ, ಮಹಿಳೆಯೊಬ್ಬರು ಚಾಕುವಿನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಡೋಲಾ ಸೇನ್ ಹಾಗೂ ವಕ್ತಾರ ಸಾಕೇತ್ ಗೋಖಲೆ ಈ ಘಟನೆಯನ್ನು ಗಂಭೀರ ಭದ್ರತಾ ಲೋಪ ಮತ್ತು ವ್ಯವಸ್ಥಿತ ಸಂಚು ಎಂದು ಕರೆದಿದ್ದಾರೆ.
ಬಂಧಿತ ಮಹಿಳೆಯನ್ನು ಅನುಸುವಾ ಸಹಾ ಎಂದು ಗುರುತಿಸಲಾಗಿದೆ. ಈಕೆ ಪಶ್ಚಿಮ ಬಂಗಾಳ ಪೊಲೀಸರ ಗುತ್ತಿಗೆ ಆಧಾರಿತ ‘ಸಿವಿಕ್ ವಾಲಂಟಿಯರ್’ ಆಗಿದ್ದು, ತಾನು ಮಮತಾ ಬ್ಯಾನರ್ಜಿ ಅವರ ಸೊಸೆ ಎಂದು ಹೇಳಿಕೊಂಡಿದ್ದಾಳೆ. ಮಾದಕ ವ್ಯಸನಿಯಂತೆ ಕಾಣುತ್ತಿದ್ದ ಆ ಮಹಿಳೆ, ಮಮತಾ ಬ್ಯಾನರ್ಜಿ ಅವರು ಹೊರಬರುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕುವಿನಿಂದ ಮಾರಣಾಂತಿಕವಾಗಿ ಸಮೀಪಿಸಲು ಯತ್ನಿಸಿದ್ದಳು ಎಂದು ಡೋಲಾ ಸೇನ್ ದೂರಿನಲ್ಲಿ ತಿಳಿಸಿದ್ದಾರೆ.
ರಾಜಕೀಯ ಪಿತೂರಿಯ ಶಂಕೆ: ಝಡ್-ಪ್ಲಸ್ ಭದ್ರತೆ ಹೊಂದಿರುವ ಮೂರು ಬಾರಿಯ ಮಾಜಿ ಮುಖ್ಯಮಂತ್ರಿಯ ನಿವಾಸದ ಬಳಿ ಹರಿತವಾದ ಆಯುಧದೊಂದಿಗೆ ಯಾರಾದರೂ ಹೇಗೆ ಬರಲು ಸಾಧ್ಯ? ದೆಹಲಿಯಲ್ಲಿ ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತಿರುವ ಮಮತಾರನ್ನು ಮುಗಿಸಲುಸಂಚು ರೂಪಿಸಿದ್ದಾರೆ ಎಂದು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.
ಪೊಲೀಸ್ ಹೇಳಿಕೆ: ಮಾಜಿ ಮುಖ್ಯಮಂತ್ರಿಯವರು ಮನೆಯಿಂದ ಹೊರಬರುವಾಗ ಅನುಸುವಾ ಸಹಾ (38) ಎಂಬ ಮಹಿಳೆ ಅವರ ಬಳಿ ಬಂದು ತೀವ್ರ ವಾಗ್ವಾದಕ್ಕಿಳಿದಿದ್ದಾಳೆ. ಕರ್ತವ್ಯದಲ್ಲಿದ್ದ ಪೊಲೀಸರು ತಕ್ಷಣವೇ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ಆಕೆಯ ಹಿನ್ನೆಲೆ, ಉದ್ದೇಶ ಮತ್ತು ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆಯೇ ಅಥವಾ ಮಾದಕ ವ್ಯಸನಿಯೇ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಓದಿ: ರೆಜಿನಗರ ಅಖಾಡಾದಲ್ಲಿ ಹೈಡ್ರಾಮಾ: ನಾಮಪತ್ರ ಹಿಂಪಡೆಯುವ ನಿರ್ಧಾರ ಬದಲಿಸಿ ಯು-ಟರ್ನ್ ಹೊಡೆದ ಟಿಎಂಸಿ ಅಭ್ಯರ್ಥಿ!
ಸತತ ಮೂರು ಅವಧಿಗಳ ನಂತರ, 2026ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ನಾಯಕರ ಮೇಲಿನ ದಾಳಿಗಳು ಮುನ್ನೆಲೆಗೆ ಬಂದಿವೆ.
ಆಗಸ್ಟ್ 2026: ಕೋಲ್ಕತ್ತಾದ ಶ್ಯಾಂಬಜಾರ್ನಲ್ಲಿ ಮಮತಾ ಬ್ಯಾನರ್ಜಿ ಅವರ ಕಾರಿನ ಮೇಲೆ ಬೃಹತ್ ಕಲ್ಲು ತೂರಾಟ ನಡೆದಿತ್ತು.
ಮೇ 2026: ಚುನಾವಣಾ ಫಲಿತಾಂಶದ ನಂತರ ದಕ್ಷಿಣ 24 ಪರಗಣದಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆಯಲಾಗಿತ್ತು.
ಇತ್ತೀಚಿನ ಘಟನೆ: ಕಳೆದ ಶನಿವಾರ ಬರುಯಿಪುರ್ ಪೂರ್ವ ಕ್ಷೇತ್ರದ ಟಿಎಂಸಿ ಶಾಸಕ ಬಿಭಾಸ್ ಸರ್ದಾರ್ ಅವರ ಕಾರನ್ನು ಗುಂಪೊಂದು ಸುತ್ತುವರೆದು, ಗಾಜುಗಳನ್ನು ಪುಡಿಪುಡಿ ಮಾಡಿ ಜೀವ ಬೆದರಿಕೆ ಹಾಕಿತ್ತು.
ಸಿವಿಕ್ ವಾಲಂಟಿಯರ್ ವಿವಾದ: ಆರ್ಜಿ ಕರ್ ಆಸ್ಪತ್ರೆಯ ಪ್ರಕರಣದ ಬಳಿಕ ಪಶ್ಚಿಮ ಬಂಗಾಳದಲ್ಲಿ ಸಿವಿಕ್ ವಾಲಂಟಿಯರ್ಗಳ ನೇಮಕಾತಿ, ಶಿಸ್ತು ಮತ್ತು ಅವರ ಹಿನ್ನೆಲೆ ಪರಿಶೀಲನೆ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಈಗ ಅದೇ ಪಡೆಯ ಗುತ್ತಿಗೆ ಸಿಬ್ಬಂದಿಯೊಬ್ಬರು ಮಾಜಿ ಸಿಎಂ ನಿವಾಸದ ಬಳಿಯೇ ರಂಪಾಟ ನಡೆಸಿರುವುದು ಭದ್ರತಾ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಆಕೆಯ ವಿರುದ್ಧ ಕಾಲಿಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ