ರಾಷ್ಟ್ರಪತಿ ಚುನಾವಣೆ( Presidential Election)ಸನ್ನಿಹಿತವಾಗುತ್ತಿದ್ದು ಈ ಕುರಿತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಬಿಸಿ ಬಿಸಿ ಚರ್ಚೆ ಇಂದು ನಡೆಯಲಿದೆ. ಆದರೆ ಲಭ್ಯವಾಗಿರುವ ಮಾಹಿತಿ ಪ್ರಕಾರ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ತನ್ನ ಪಕ್ಷದ ಯಾವುದೇ ಪ್ರತಿನಿಧಿಯನ್ನು ಕಳುಹಿಸಿಲ್ಲ.
ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಜುಲೈ 24ಕ್ಕೆ ಅಂತ್ಯಗೊಳ್ಳುತ್ತಿದ್ದು, ಅವರ ಮುಂದಿನ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರ ಸಭೆ ನಡೆಯಲಿದ್ದು 22 ವಿರೋಧ ಪಕ್ಷಗಳನ್ನು ಅವರು ಸಭೆಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಡಿಎಂಕೆಯ ಟಿಆರ್ ಬಾಲು, ಶಿವಸೇನೆಯ ಸುಭಾಷ್ ದೇಸಾಯಿ, ಆರ್‌ಎಲ್‌ಡಿಯ ಜಯಂತ್ ಚೌಧರಿ ಮತ್ತು ಮೆಹಬೂಬಾ ಮುಫ್ತಿ ಅವರು ಭಾಗವಹಿಸಲಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಭಾಗವಹಿಸಲಿದ್ದಾರೆ.
ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳೆಲ್ಲವೂ ಒಟ್ಟಾಗಿ ಯಾವ ಅಭ್ಯರ್ಥಿಯನ್ನು ರಾಷ್ಟ್ರಪತಿ ಕಣಕ್ಕೆ ನಿಲ್ಲಿಸಬಹುದು ಎಂಬ ಚರ್ಚೆ ದಟ್ಟವಾಗಿದೆ.
ಸಭೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಪ್ರಾದೇಶಿಕ ಪಕ್ಷ ಜೆಡಿಸ್ನ ನಾಯಕರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ದೆಹಲಿಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಲವು ಎಡಪಕ್ಷಗಳು ಮಮತಾ ಸಭೆಗೆ ಗೈರಾಗಲಿವೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರು ಉನ್ನತ ನಾಯಕತ್ವ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:14 am, Wed, 15 June 22