ಬಿಜೆಪಿ ಮಣಿಸಲು ದೇಶದ ಅಷ್ಟೂ ವಿಪಕ್ಷಗಳನ್ನು ಒಗ್ಗೂಡಿಸುವ ಹೊಣೆ ಹೊರಲಿದ್ದಾರಾ ದೀದಿ? ಮಮತಾ ಮಾತು ಕೇಳಲಿದೆಯಾ ಕಾಂಗ್ರೆಸ್?​

ಕಳೆದ ತಿಂಗಳು ದೆಹಲಿಯಲ್ಲೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ರಾಷ್ಟ್ರ ಮಂಚ್ ಹೆಸರಿನಲ್ಲಿ ವಿಪಕ್ಷಗಳ ನಾಯಕರ ಸಭೆ ನಡೆಸಿದ್ದರು. ಆ ಸಭೆಗೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿರಲಿಲ್ಲ. ಆದರೆ, ಈಗ ಮಮತಾ ಬ್ಯಾನರ್ಜಿ ಕರೆಯುವ ಸಭೆಗೆ ಯಾವ್ಯಾವ ಪಕ್ಷಗಳ ನಾಯಕರನ್ನು ಆಹ್ವಾನಿಸುತ್ತಾರೆ ಎಂಬ ಕುತೂಹಲವೂ ಇದೆ.

ಬಿಜೆಪಿ ಮಣಿಸಲು ದೇಶದ ಅಷ್ಟೂ ವಿಪಕ್ಷಗಳನ್ನು ಒಗ್ಗೂಡಿಸುವ ಹೊಣೆ ಹೊರಲಿದ್ದಾರಾ ದೀದಿ? ಮಮತಾ ಮಾತು ಕೇಳಲಿದೆಯಾ ಕಾಂಗ್ರೆಸ್?​
ಮಮತಾ ಬ್ಯಾನರ್ಜಿ
Follow us
S Chandramohan
| Updated By: Skanda

Updated on:Jul 27, 2021 | 2:39 PM

ದೆಹಲಿ: 2021ರ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯನ್ನು ಗೆದ್ದ ಹುಮ್ಮಸ್ಸಿನಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ 2024ರ ಲೋಕಸಭಾ ಚುನಾವಣೆಗೆ ವಿಪಕ್ಷಗಳ ಒಗ್ಗಟ್ಟಿನ ಭೂಮಿಕೆ ಸಿದ್ದಪಡಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿನ್ನೆಯಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಮೋದಿ ವಿರುದ್ಧದ ಹೋರಾಟದ ನೇತೃತ್ವವನ್ನು ಮಮತಾ ಬ್ಯಾನರ್ಜಿ ವಹಿಸುತ್ತಾರಾ ಎಂಬ ಕುತೂಹಲ ಮೂಡಿದೆ. ವಿಪಕ್ಷಗಳನ್ನು ಒಗ್ಗೂಡಿಸಲೆಂದೇ ಮಮತಾ ಬ್ಯಾನರ್ಜಿ ದೆಹಲಿಗೆ ಹೋಗಿದ್ದು, ಇಂದು, ನಾಳೆ ದೆಹಲಿಯಲ್ಲಿ ವಿಪಕ್ಷ ನಾಯಕರ ಸಭೆ ಕರೆದು ತಮ್ಮ ಯೋಚನೆಗೆ ರೂಪುರೇಶೆ ಕೊಡುವ ಕೆಲಸವನ್ನು ತ್ವರಿತವಾಗಿ ಆರಂಭಿಸಲಿದ್ದಾರೆ ಎನ್ನಲಾಗಿದೆ.

ಖೇಲೋ ಹೋಬೇ ಎಂದು ಹೇಳುತ್ತಲೇ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯನ್ನು ಗೆದ್ದು ಬೀಗುತ್ತಿರುವ ಸಿಎಂ ಮಮತಾ ಬ್ಯಾನರ್ಜಿ ಕಣ್ಣು 2024ರ ಲೋಕಸಭಾ ಚುನಾವಣೆ ಮೇಲೆ ಬಿದ್ದಾಗಿದೆ. ಸದ್ಯ ದೆಹಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಈಗ ಭೇಟಿ ನೀಡಿದರೆ, ಎಲ್ಲಾ ವಿಪಕ್ಷಗಳ ನಾಯಕರನ್ನು ದೆಹಲಿಯಲ್ಲೇ ಭೇಟಿ ಆಗಬಹುದು ಎನ್ನುವುದು ಮಮತಾ ಬ್ಯಾನರ್ಜಿ ಲೆಕ್ಕಾಚಾರ. ಹೀಗಾಗಿ ನಿನ್ನೆ ಮಧ್ಯಾಹ್ನವೇ ದೆಹಲಿಗೆ ಬಂದಿರುವ ಮಮತಾ ಬ್ಯಾನರ್ಜಿ ಇಂದು, ನಾಳೆ ದೆಹಲಿಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ನಡೆಸಲು ಯೋಚಿಸಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಸಮಯ ಇರುವಾಗಲೇ ರಾಜಕೀಯ, ಚುನಾವಣಾ ರಣತಂತ್ರ ರೂಪಿಸಲು ಸಿಎಂ ಮಮತಾ ಬ್ಯಾನರ್ಜಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಬಿಜೆಪಿಯ ವಿಜಯ ಯಾತ್ರೆಗೆ ಪಶ್ಚಿಮ ಬಂಗಾಳದಲ್ಲಿ ಬ್ರೇಕ್ ಹಾಕಿದಂತೆ, ರಾಷ್ಟ್ರ ಮಟ್ಟದಲ್ಲೂ ಬ್ರೇಕ್ ಹಾಕಬೇಕು ಎನ್ನುವುದು ಸಿಎಂ ಮಮತಾ ಬ್ಯಾನರ್ಜಿ ಬಯಕೆ. ಮುಂದಿನ ಲೋಕಸಭಾ ಚುನಾವಣೆಗೆ ಪ್ಲ್ಯಾನ್ ಮಾಡಲು ಸಮಯ ವ್ಯರ್ಥ ಮಾಡಲ್ಲ ಎಂದು ಕಳೆದ ವಾರ ಹುತಾತ್ಮ ದಿವಸ ಉದ್ದೇಶಿಸಿ ವರ್ಚ್ಯುಯಲ್ ಆಗಿ ಮಾತನಾಡುತ್ತಾ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಮುಂದಿನ ವಾರ ನಾನು ದೆಹಲಿಯಲ್ಲಿರುತ್ತೇನೆ. ಸದ್ಯ ನಡೆಯುತ್ತಿರುವ ಪಾರ್ಲಿಮೆಂಟ್ ಅಧಿವೇಶನದ ಸಮಯದಲ್ಲೇ ವಿರೋಧ ಪಕ್ಷಗಳ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಲು ಬಯಸಿದ್ದೇನೆ. ಜುಲೈ 26ರಿಂದ 28ರವರೆಗೆ ವಿರೋಧ ಪಕ್ಷಗಳ ನಾಯಕರ ಸಭೆ ಕರೆಯಲು ನಾನು ಪ್ರಸ್ತಾಪಿಸುತ್ತಿದ್ದೇನೆ. ಸಭೆಯಲ್ಲಿ ಭಾಗವಹಿಸಲು ನಾವು ಉತ್ಸುಕವಾಗಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಅದರಂತೆ ಈಗ ದೆಹಲಿಗೆ ಭೇಟಿ ನೀಡಿದ್ದಾರೆ.

ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರನ್ನು ಮಮತಾ ಬ್ಯಾನರ್ಜಿ ಭೇಟಿಯಾಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಮಲನಾಥ್, ಆನಂದ್ ಶರ್ಮಾ ಹಾಗೂ ಹಿರಿಯ ವಕೀಲರೂ ಆದ ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಘ್ವಿ ಅವರನ್ನು ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಭೇಟಿಯಾಗುತ್ತಿದ್ದಾರೆ. ಅಭಿಷೇಕ್ ಮನುಸಿಂಘ್ವಿ ಅನೇಕ ಕೋರ್ಟ್ ಕೇಸ್​ಗಳಲ್ಲಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪರವಾಗಿ ವಾದ ಮಂಡಿರುವ ವಕೀಲರೂ ಕೂಡ ಹೌದು. ಬಿಜೆಪಿಯ ವಿರುದ್ಧದ ಹೋರಾಟಕ್ಕೆ ವಿಪಕ್ಷಗಳ ನಡುವೆ ಒಗ್ಗಟ್ಟು, ಸಹಮತ ಮೂಢಿಸುವ ಕೆಲಸಕ್ಕೆ ಕೈ ಹಾಕಿರುವ ಮಮತಾ ನಾಳೆ ಕೂಡ ದೆಹಲಿಯ ಪಶ್ಚಿಮ ಬಂಗಾಳ ಹೌಸ್​ನಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ನಡೆಸಲಿದ್ದಾರೆ.

ಪ್ರಧಾನಿ ಗಾದಿಗೆ ದೀದಿಯೇ ಸೂಕ್ತ 2018ರ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಕುಮಾರಸ್ವಾಮಿ ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಮೂವರು ರಾಷ್ಟ್ರ ನಾಯಕಿಯರು ಒಂದೇ ವೇದಿಕೆಗೆ ಬಂದಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಒಂದೇ ವೇದಿಕೆಗೆ ಬಂದು ಜನರತ್ತ ಕೈ ಬೀಸಿದ್ದರು. ಈಗ ಮೂರು ವರ್ಷದ ಬಳಿಕ ರಾಷ್ಟ್ರ ಮಟ್ಟದಲ್ಲಿ ಅದೇ ಒಗ್ಗಟ್ಟನ್ನು ಈ ನಾಯಕಿಯರು ಹಾಗೂ ಪಕ್ಷಗಳು ತೋರುತ್ತವೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಆದರೆ, ಬಿಎಸ್ಪಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧ ಈಗಾಗಲೇ ಹದಗೆಟ್ಟಿದೆ. ಹೀಗಾಗಿ ಈಗ ಪ್ರಧಾನಿ ಮೋದಿಗೆ ಚಾಲೆಂಜ್ ಆಗುವ ವಿಪಕ್ಷದ ನಾಯಕ ಯಾರು ಎಂಬುದು ವಿಪಕ್ಷದ ಪಾಳಯದಲ್ಲೇ ಚರ್ಚೆಯಾಗುತ್ತಿದೆ. 2024ರಲ್ಲಿ ವಿಪಕ್ಷದ ಪಾಳಯದಿಂದ ಮೋದಿ ಎದುರಾಳಿ ಪ್ರಧಾನಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಕೂಡ ಚರ್ಚೆಯಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಟಿಎಂಸಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಮಮತಾ ಬ್ಯಾನರ್ಜಿ 2024ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ತ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲೇ ಮಮತಾ ಬ್ಯಾನರ್ಜಿ ಈಗಿನಿಂದಲೇ ವಿಪಕ್ಷಗಳ ನಾಯಕರು ಹಾಗೂ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸಕ್ಕೆ ಲೆಕ್ಕಾಚಾರ ಹಾಕಿಯೇ ಕೈ ಹಾಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಮತಾ ಬ್ಯಾನರ್ಜಿಗೆ ರಾಜಕೀಯವಾಗಿ ಆಕ್ರಮಣಕಾರಿ ಗುಣ, ಸ್ವಭಾವ, ಮಹತ್ವಾಕಾಂಕ್ಷೆ ಇದೆ. ಮಮತಾ ಬ್ಯಾನರ್ಜಿಗೆ ಚುನಾವಣೆ ರಣತಂತ್ರ ರೂಪಿಸಿ ಕೊಡುವ ಪ್ರಶಾಂತ್ ಕಿಶೋರ್ ಬೆಂಬಲ ಇದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆರ್‌ಜೆಡಿ, ಎಸ್ಪಿ, ಜೆಡಿಎಸ್​ನಂಥ ಪಕ್ಷಗಳ ಜತೆಗೆ ಒಳ್ಳೆಯ ಭಾಂದವ್ಯ ಕೂಡ ಇದೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರು ಕಾಂಗ್ರೆಸ್​ನ ಹೊರಗಿನವರನ್ನು ಪಿಎಂ ಅಭ್ಯರ್ಥಿಯಾಗಿ ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆಯೂ ಇದೆ. ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಅನೇಕ ರಾಜ್ಯ ಘಟಕಗಳಲ್ಲೇ ಇಬ್ಬರು ಪ್ರಬಲ ನಾಯಕರ ನಡುವಿನ ನಾಯಕತ್ವದ ಬಿಕ್ಕಟ್ಟನ್ನೇ ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. 2024ರ ಲೋಕಸಭಾ ಚುನಾವಣೆಗೆ ವಿಪಕ್ಷಗಳು ಒಗ್ಗೂಡುವ ಮುನ್ನ ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಒಗ್ಗೂಡಲು ಸಾಧ್ಯವಿಲ್ಲ ಎಂದೇ ವಿಶ್ಲೇಷಣೆಗಳು ನಡೆಯುತ್ತಿವೆ. ಏಕೆಂದರೆ, 2017ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್ ಒಗ್ಗೂಡಿದರೂ ಉತ್ತಮ ಫಲಿತಾಂಶ ಬಂದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ, ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿ 62 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿದೆ.

ಕಳೆದ ತಿಂಗಳು ದೆಹಲಿಯಲ್ಲೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ರಾಷ್ಟ್ರ ಮಂಚ್ ಹೆಸರಿನಲ್ಲಿ ವಿಪಕ್ಷಗಳ ನಾಯಕರ ಸಭೆ ನಡೆಸಿದ್ದರು. ಆ ಸಭೆಗೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿರಲಿಲ್ಲ. ಆದರೆ, ಈಗ ಮಮತಾ ಬ್ಯಾನರ್ಜಿ ಕರೆಯುವ ಸಭೆಗೆ ಯಾವ್ಯಾವ ಪಕ್ಷಗಳ ನಾಯಕರನ್ನು ಆಹ್ವಾನಿಸುತ್ತಾರೆ ಎಂಬ ಕುತೂಹಲವೂ ಇದೆ. 2024ರ ಲೋಕಸಭಾ ಚುನಾವಣೆಗೆ ನಿಜಕ್ಕೂ ವಿಪಕ್ಷಗಳು ಒಗ್ಗೂಡಿ ಹೋರಾಟ ನಡೆಸುವುದು ಸಾಧ್ಯವೇ? ವಿಪಕ್ಷಗಳ ಒಗ್ಗಟ್ಟಿನ ಹೋರಾಟದ ಮೂಲಕ ಬಿಜೆಪಿ ಹಾಗೂ ಮೋದಿಯನ್ನು ಸೋಲಿಸಲು ಸಾಧ್ಯವಾಗುತ್ತಾ ಎಂಬುದು ಚರ್ಚೆಯ ವಿಷಯ. 2019ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್‌ ಒಗ್ಗೂಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೂ ಗೆದ್ದಿದ್ದು ಎರಡು ಕ್ಷೇತ್ರಗಳನ್ನು ಮಾತ್ರ.

ಅಷ್ಟೂ ವಿಪಕ್ಷಗಳು ಒಕ್ಕೊರಲಿನಿಂದ ಒಬ್ಬ ಪ್ರಧಾನಿ ಅಭ್ಯರ್ಥಿಯನ್ನು ಆರಿಸಬೇಕಿದೆ ದೇಶದಲ್ಲಿ 1977ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳೆಲ್ಲಾ ಒಗ್ಗೂಡಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದವು. ಇಂದಿರಾಗಾಂಧಿಗೆ ತುರ್ತು ಪರಿಸ್ಥಿತಿ ಮುಗಿದ ಬಳಿಕ ಮತ್ತೆ ಪ್ರಧಾನಿ ಹುದ್ದೆ ಸಿಗದಂತೆ ಮಾಡಿದ್ದವು. ಆ ಇತಿಹಾಸ ಮತ್ತೆ ಪುನಾರಾವರ್ತನೆ ಮಾಡುವುದು ಸಾಧ್ಯವೇ? ದೇಶದಲ್ಲಿ ಸುಮಾರು 400 ಲೋಕಸಭಾ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಏಕೈಕ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂದು ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್ ನೀಡಿರುವ ಸಲಹೆ. ಈ ಸಲಹೆಯನ್ನು 400 ಲೋಕಸಭಾ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳೆಲ್ಲಾ ಒಪ್ಪಿಕೊಂಡು ಪಾಲಿಸುತ್ತವೆಯೇ ಎಂಬುದು ಕೂಡ ಮುಖ್ಯ. ಇನ್ನು ವಿರೋಧ ಪಕ್ಷಗಳ ಮೈತ್ರಿಗೆ ಕಾಂಗ್ರೆಸ್ ಸೇರಲೇಬೇಕು. ಕಾಂಗ್ರೆಸ್ ಹೊರತುಪಡಿಸಿ, ತೃತೀಯ ರಂಗ, ನಾಲ್ಕನೇ ರಂಗ ರಚಿಸಿದರೂ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ಪ್ರಶಾಂತ್ ಕಿಶೋರ್ ಹೇಳಿದ್ದಾರೆ ಎನ್ನುವುದೂ ಗಮನಾರ್ಹ.

ತಮ್ಮ ಖೇಲಾ ಹೋಬೇ ಘೋಷಣೆಗೆ ಟ್ವಿಸ್ಟ್ ನೀಡಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಒಂದು ಗೇಮ್ ಆಗಿದೆ. ಮತ್ತೊಂದು ಗೇಮ್ ಬಾಕಿ ಇದೆ, ಆಗಸ್ಟ್ 16 ಅನ್ನು ಪಶ್ಚಿಮ ಬಂಗಾಳದಲ್ಲಿ ಖೇಲ್ ದಿವಸ ಆಗಿ ಘೋಷಿಸಿದ್ದಾರೆ. ಪೆಗಾಸಸ್ ಹೆಸರಿನಲ್ಲಿ ಅವರು ನಮ್ಮ ಜೀವನದೊಳಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ. ನಾನು ನನ್ನ ಪೋನ್ ಅನ್ನು ಪ್ಲಾಸ್ಟಿಕ್ ನಿಂದ ಸುತ್ತಿಟ್ಟಿದ್ದೇನೆ. ಸರ್ಕಾರಕ್ಕೂ ಪ್ಲಾಸ್ಟಿಕ್ ಸುತ್ತಬೇಕು ಎಂದು ಮಮತಾ ಬ್ಯಾನರ್ಜಿ ಕಳೆದ ವಾರ ವ್ಯಂಗ್ಯವಾಡಿದ್ದರು. ಈಗ ದೆಹಲಿಗೆ ಭೇಟಿ ನೀಡುವ ಮುನ್ನ ಪೆಗಾಸಸ್ ಸ್ಪೈವೇರ್ ಗೂಢಚಾರಿಕೆ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದಲ್ಲಿ ತನಿಖೆಗೆ ಮಮತಾ ಬ್ಯಾನರ್ಜಿ ಆದೇಶ ನೀಡಿದ್ದಾರೆ. ಪೆಗಾಸಸ್ ಸ್ಪೈವೇರ್ ಬಗ್ಗೆ ಸುಪ್ರೀಂಕೋರ್ಟ್ ಗಮನ ಹರಿಸಿ ಸ್ವಪ್ರೇರಣೆಯಿಂದ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಕಳೆದ ವಾರ ಮಮತಾ ಬ್ಯಾನರ್ಜಿ ಹೇಳಿದ್ದರು.

Pegasus Scandal ಪೆಗಾಸಸ್ ತನಿಖೆಗಾಗಿ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದ ಸಮಿತಿ ರಚಿಸಿದ ಪಶ್ಚಿಮ ಬಂಗಾಳ ಸರ್ಕಾರ

ಇಂದು ಸಂಜೆ ಪ್ರಧಾನಿ ಮೋದಿ – ಮಮತಾ ದೀದಿ ಭೇಟಿ ಇದೆಲ್ಲದರ ಮಧ್ಯೆ ಇಂದು ಸಂಜೆ 4 ಗಂಟೆಗೆ ಸಿಎಂ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತಿದ್ದಾರೆ. ಪಶ್ಚಿಮ ಬಂಗಾಳದ ಚಂಡಮಾರುತದ ಹಾನಿ ಬಗ್ಗೆ ಪರಿಶೀಲನೆ ನಡೆಸಲು ಪ್ರಧಾನಿ ಮೋದಿ ಖುದ್ದಾಗಿ ಬಂದಾಗ ಮಮತಾ ಬ್ಯಾನರ್ಜಿ ಸರಿಯಾಗಿ ಭೇಟಿಯಾಗಿ ಮಾತನಾಡುವ ಸೌಜನ್ಯ, ವ್ಯವಧಾನವನ್ನು ತೋರಿರಲಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಪ್ರಧಾನಿ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಈಗ ದೆಹಲಿಗೆ ಬಂದು ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿ, ತಾವೇ ಖುದ್ದಾಗಿ ಹೋಗಿ ಭೇಟಿಯಾಗುತ್ತಿದ್ದಾರೆ ಎನ್ನುವುದು ವಿಪರ್ಯಾಸ.

ಇದನ್ನೂ ಓದಿ: Mamata Banerjee: ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ ದೀದಿ.. 

ಅಧಿವೇಶನ ಜಾರಿಯಿರುವಾಗಲೇ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸೋನಿಯಾ ಮತ್ತು ಇತರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ

Published On - 2:37 pm, Tue, 27 July 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ