ಅಲಿಗಢ: ಕಳ್ಳನೆಂದು ಭಾವಿಸಿ ಥಳಿಸಿ ವ್ಯಕ್ತಿಯ ಹತ್ಯೆ
ವ್ಯಕ್ತಿಯೊಬ್ಬನನ್ನು ಕಳ್ಳನೆಂದು ಭಾವಿಸಿ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.
ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಗುಂಪೊಂದು ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದೆ. ಇದೀಗ ಆ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಮಂಗಳವಾರ ರಾತ್ರಿ 10.15ರ ಸುಮಾರಿಗೆ ಮಾಮು ಭಂಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಘಾಸ್ ಕಿ ಮಂಡಿ ಪ್ರದೇಶದ ನಿವಾಸಿ ಮೊಹಮ್ಮದ್ ಫರೀದ್ ಅಲಿಯಾಸ್ ಔರಂಗಜೇಬ್ ಎಂದು ಗುರುತಿಸಲಾಗಿದೆ.
ಹಿಂದೂ ಮತ್ತು ಮುಸ್ಲಿಂ ಗುಂಪುಗಳು ಹಳೆಯ ನಗರದ ರೈಲ್ವೆ ನಿಲ್ದಾಣದ ರಸ್ತೆಯ ಕೆಲವು ಸ್ಥಳಗಳಲ್ಲಿ ಜಮಾಯಿಸಿದ್ದು, ಘಟನೆಯನ್ನು ವಿರೋಧಿಸಿ ಕೆಲವು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಯಿತು. ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನಿಷ್ಠ ಆರು ಮಂದಿಯ ಗುಂಪೊಂದು ಫರೀದ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ.
ಆರೋಪಿಗಳು ಕೊಲೆಯಾದ ವ್ಯಕ್ತಿಯ ನೆರೆಹೊರೆಯವರೇ ಆಗಿದ್ದಾರೆ, ಅವರನ್ನು ಮೋಹಿತ್, ರಾಹುಲ್, ಚಿರಾಗ್, ಅಂಕಿತ್, ಕಮಲ್ ಎಂದು ಗುರುತಿಸಲಾಗಿದೆ. ಸ್ಥಳೀಯ ವ್ಯಪಾರಿ ಮುಖೇಶ್ ಚಂದ್ ಮಿತ್ತಲ್ ಎಂಬುವವರ ಮನೆಗೆ ಔರಂಗಜೇಬ್ ನುಗ್ಗಿದ್ದಾನೆಂದು ಆರೋಪಿಸಿ ಆತನನ್ನು ಆ ಮನೆಯವರು ಹಾಗೂ ನೆರೆಹೊರೆಯವರು ಬರ್ಬರವಾಗಿ ಥಳಿಸಿ ಹತ್ಯೆಮಾಡಿದ್ದಾರೆ.
ಮತ್ತಷ್ಟು ಓದಿ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಹಾಡಹಗಲೇ ರೌಡಿಶೀಟರ್ ಭೀಕರ ಹತ್ಯೆ
ಮೃತನ ಸಹೋದರ ಮೊಹಮ್ಮದ್ ನೀಡಿದ ದೂರಿನ ಮೇಲೆ ಪೊಲೀಸರು ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲಿಗಢ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂಜೀವ್ ಸುಮನ್, ಇತರ ಹಿರಿಯ ಅಧಿಕಾರಿಗಳೊಂದಿಗೆ ಮಾಮು ಭಂಜಾ ಪ್ರದೇಶದಲ್ಲಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಮಂಗಳವಾರ ತಡರಾತ್ರಿ ಗಾಂಧಿ ಪಾರ್ಕ್ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತ್ತು, ಸ್ಥಳಕ್ಕಾಗಮಿಸಿದಾಗ, ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳ ಮನೆಗೆ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದ್ದಾನೆ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ನಂತರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮೃತರ ಅಂತಿಮ ವಿಧಿಗಳನ್ನು ನಡೆಸಲಾಯಿತು ಎಂದು ಸುಮನ್ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ