ಮಣಿಪುರದ ಚಾಂದೆಲ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿ 15 ಮಂದಿ ಸಾವು, 180ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಮಣಿಪುರದ ಚಾಂದೆಲ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವನೆಯ ಶಂಕೆಯ ಮೇಲೆ ಕಳೆದ 48 ಗಂಟೆಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 180ಕ್ಕೂ ಹೆಚ್ಚು ಜನರು ಆಸ್ಪತ್ರೆ ಸೇರಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾರ್ವಜನಿಕ ಆರೋಗ್ಯ ಸಲಹೆ ಹೊರಡಿಸಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ. ಕಲಬೆರಕೆ ಮದ್ಯ ಸೇವಿಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಮಣಿಪುರದ ಚಾಂದೆಲ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿ 15 ಮಂದಿ ಸಾವು, 180ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
ಮಣಿಪುರದಲ್ಲಿ 15 ಸಾವು
Image Credit source: Google

Updated on: Nov 21, 2026 | 9:52 AM

ಇಂಫಾಲ, ನ,21: ಮಣಿಪುರ ರಾಜ್ಯದ ಚಾಂದೆಲ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿರುವ ಶಂಕೆಯ ಮೇರೆಗೆ ಕಳೆದ 48 ಗಂಟೆಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 180ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್ 18ರಿಂದ 20ರ ನಡುವೆ ಈ ಸಾವುಗಳು ಸಂಭವಿಸಿದ್ದು, ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಾರ್ವಜನಿಕ ಆರೋಗ್ಯ ಸಲಹೆ ಹೊರಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಚಾಂದೆಲ್ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧಿಕೃತ ಮಾಹಿತಿಯ ಪ್ರಕಾರ ಆರಂಭದಲ್ಲಿ 8 ಸಾವುಗಳು ದೃಢಪಟ್ಟಿದ್ದವು. ಮೃತರನ್ನು ಕಿಶನ್ ಹ್ರಾಂಗ್‌ಬುಂಗ್ ಅನಲ್ (32), ಹ್ರಾಂಗ್‌ಬುಂಗ್ ಬೆರುವಂಗ್ ಅನಲ್ (50), ಹ್ರಾಂಗ್‌ಬುಂಗ್ ಮೋಹ್ರಿಂಗ್ ಅನಲ್ (46), ಆರ್‌ಡಿ ಅಂಗ್ನಹಿರಿಂಗ್ ಅನಲ್ (37), ಕೆಐ ರಾಮ್‌ಟಿಯಾಂಗ್ ಅನಲ್ (44), ಎನ್‌ಎಲ್ ಮೋಥಾಹ್ರಿಂಗ್ ಅನಲ್, ಟಿಎಸ್ ಆಶಿಂಗ್ ಮತ್ತು ಟಿಎಸ್ ಲವ್ಲಿ ಎಂದು ಗುರುತಿಸಲಾಗಿದೆ.

ಕೆಲವರು ತಮ್ಮ ಮನೆಗಳಲ್ಲೇ ಮೃತಪಟ್ಟರೆ, ಮತ್ತೆ ಕೆಲವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಥವಾ ಚಕ್ಪಿಕರಾಂಗ್ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ದಾಖಲಾದ ಬಳಿಕ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಾದವರು ಸೇವಿಸಿದ ಮದ್ಯವನ್ನು ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದಿಂದ ತರಲಾಗಿದೆ ಮತ್ತು ಅದು ಚಾಂದೆಲ್ ಜಿಲ್ಲೆಯಲ್ಲಿ ತಯಾರಿಸಿದ್ದಲ್ಲ ಎಂದು ಚಾಂದೆಲ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವರದಿಯಾದ ಸಾವುಗಳ ಪೈಕಿ ಐದು ಪ್ರಕರಣಗಳು ಸುಗ್ನು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Loading...

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸದ ಮಾಹಿತಿಯನ್ನು ಹರಡಬಾರದು ಅಥವಾ ಅವಸರದ ತೀರ್ಮಾನಕ್ಕೆ ಬರಬಾರದು ಎಂದು ಪೊಲೀಸರು ಸಾರ್ವಜನಿಕರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಸಾವುಗಳಿಗೆ ನಿಖರ ಕಾರಣ ಇನ್ನೂ ವೈದ್ಯಕೀಯ ಮತ್ತು ವೈಜ್ಞಾನಿಕವಾಗಿ ದೃಢಪಡಬೇಕಿದ್ದು, ತನಿಖೆ ಮುಂದುವರಿದಿದೆ ಎಂದು ಚಾಂದೆಲ್ ಜಿಲ್ಲಾಧಿಕಾರಿ ಗುರುವಾರ ಆರೋಗ್ಯ ಸಲಹೆ ಹೊರಡಿಸಿದ್ದಾರೆ.

ಮುಂದಿನ ಸೂಚನೆ ಬರುವವರೆಗೆ ಸ್ಥಳೀಯವಾಗಿ ತಯಾರಿಸಿದ ಮದ್ಯ ಅಥವಾ ಮೂಲದ ಬಗ್ಗೆ ಅನುಮಾನವಿರುವ ಮದ್ಯಪಾನಗಳನ್ನು ವಿಶೇಷವಾಗಿ ಬಾಧಿತ ಪ್ರದೇಶಗಳ ಶಂಕಿತ ಮೂಲಗಳಿಂದ ತಂದ ಮದ್ಯವನ್ನು—ಸೇವಿಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮದ್ಯ ಸೇವಿಸಿದ ಬಳಿಕ ವಾಂತಿ, ಹೊಟ್ಟೆ ನೋವು, ತಲೆನೋವು, ತಲೆತಿರುಗುವಿಕೆ, ದೃಷ್ಟಿ ಮಂದವಾಗುವುದು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಶಂಕಿತ ಮೂಲದ ಮದ್ಯ ಸೇವಿಸಿದವರಿಗೆ ಲಕ್ಷಣಗಳಿಲ್ಲದಿದ್ದರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.

ಶಂಕಿತ ಮದ್ಯವನ್ನು ಸೇವಿಸುವುದು, ಮಾರಾಟ ಮಾಡುವುದು, ಹಂಚುವುದು ಅಥವಾ ವಿಲೇವಾರಿ ಮಾಡುವುದು ಮಾಡಬಾರದು. ಕಲಬೆರಕೆ ಮದ್ಯದ ತಯಾರಿಕೆ, ಸಂಗ್ರಹಣೆ, ಮಾರಾಟ ಅಥವಾ ವಿತರಣೆ ಕಂಡುಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಗ್ರಾಮಾಡಳಿತ, ನಾಗರಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಯುವಕ ಮಂಡಳಿಗಳು ಜಾಗೃತಿ ಮೂಡಿಸಲು ಸಹಕರಿಸುವಂತೆ ಕೋರಲಾಗಿದೆ.

ಇದನ್ನೂ ಓದಿ: ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು ಪ್ರಕರಣ: ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

ಆಸ್ಪತ್ರೆಗಳಿಗೆ ಸಿಎಂ ಭೇಟಿ; ತನಿಖೆಗೆ ಆದೇಶ

ಕಲಬೆರಕೆ ಮದ್ಯ ಸೇವನೆಯಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿತಿ ವಿಚಾರಿಸಲು ಮುಖ್ಯಮಂತ್ರಿ ಯುಮ್ನಾಮ್ ಖೇಮ್‌ಚಂದ್ ಸಿಂಗ್ ಅವರು ಗುರುವಾರ ಇಂಫಾಲ ಪಶ್ಚಿಮದ ಶಿಜಾ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಇಂಫಾಲ ಪೂರ್ವದ ಬಬೀನಾ ಆಸ್ಪತ್ರೆಗೆ ಭೇಟಿ ನೀಡಿದರು. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಚಿಕಿತ್ಸೆಯ ವಿವರ ಪಡೆದ ಮುಖ್ಯಮಂತ್ರಿಗಳು, ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರದಿಂದ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿ ಶೀಘ್ರ ಚೇತರಿಕೆಗೆ ಹಾರೈಸಿದರು. ಈ ಘಟನೆ ದುರದೃಷ್ಟಕರವಾಗಿದ್ದು, ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಹಾಗೂ ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ನಿಭಾಯಿಸಲು ಸಾಮಾನ್ಯ ವೈದ್ಯಕೀಯ ತಜ್ಞರನ್ನೊಳಗೊಂಡ ವೈದ್ಯಕೀಯ ತಂಡ ಮತ್ತು ಅಗತ್ಯ ಔಷಧಗಳನ್ನು ಚಾಂದೆಲ್ ಜಿಲ್ಲೆಗೆ ರವಾನಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಆಸ್ಪತ್ರೆ ಭೇಟಿ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಮುಖ್ಯಮಂತ್ರಿಗಳ ಜೊತೆಗಿದ್ದರು. ಪೊಲೀಸ್ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ತಡೆಗಟ್ಟುವಿಕೆ ಹಾಗೂ ತನಿಖಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 9:51 am, Sat, 21 November 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us