ನವದೆಹಲಿ, ಜೂನ್ 30: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ನೀಡಿದರು. ಫೆಬ್ರುವರಿ ಕೊನೆಯ ವಾರದಲ್ಲಿ 110ನೇ ಮನ್ ಕೀ ಬಾತ್ ನೀಡಿದ್ದರು. ನಾಲ್ಕು ತಿಂಗಳ ಬಳಿಕ 111ನೇ ಎಪಿಸೋಡ್ ಇಂದು ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿಗಳು ದೇಶದ ವಿವಿಧೆಡೆಯ ಕೆಲ ವಿಶೇಷ ಘಟನೆ, ವ್ಯಕ್ತಿಗಳನ್ನು ಗುರುತಿಸುವ ಕೆಲಸ ಮುಂದುವರಿಸಿದರು. ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕರೆ ನೀಡಿದರು. ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಅಪ್ಪಿದ ಜಾರ್ಖಂಡ್ನ ಸಿಧು, ಕಾನ್ಹು ಅವರನ್ನು ಸ್ಮರಿಸಿದ್ದಾರೆ. ಕೇರಳದಲ್ಲಿ ಬುಡಕಟ್ಟು ಸಮುದಾಯದವರು ತಯಾರಿಸುವ ಛತ್ರಿ, ಆಂಧ್ರದಲ್ಲಿ ಬುಡಕಟ್ಟು ಸಮುದಾಯದವರು ಬೆಳೆಯುವ ಅರಾಕು ಕಾಫಿ, ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ನಲ್ಲಿ ವಾರಾಂತ್ಯದಲ್ಲಿ ನಡೆಯುವ ಸಂಸ್ಕೃತ ಸಂವಾದ ಕಾರ್ಯಕ್ರಮ ಇವೇ ಮುಂತಾದವರನ್ನು ನರೇಂದ್ರ ಮೋದಿ ತಮ್ಮ 111ನೇ ಎಪಿಸೋಡ್ನ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.
ಪ್ರತಿಯೊಬ್ಬರಿಗೂ ಅಮ್ಮನ ಪ್ರೀತಿ ಬಹಳ ಮುಖ್ಯ. ಅಮ್ಮನ ಈ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವ ಪರಿಸರ ದಿನಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ್ದೇವೆ. ಏಕ್ ಪೇಡ್, ಮಾ ಕೆ ನಾಮ್ (ಅಮ್ಮನ ಹೆಸರಲ್ಲಿ ಒಂದು ಮರ) ಕೆಂಪೇನ್ ಇದು ಎಂದು ಮೋದಿ ಹೇಳಿದರು. #Plant4Mother ಹ್ಯಾಷ್ ಟ್ಯಾಗ್ ಉಪಯೋಗಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಂತೆಯೂ ಕರೆ ನೀಡಿದರು.
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಒಳ್ಳೆಯ ಫ್ಲೇವರ್ ಮತ್ತು ಅರೋಮಾಗೆ ಖ್ಯಾತವಾಗಿದೆ. ಇಲ್ಲಿಯ ಬುಡಕಟ್ಟು ಜನರ ಜೀವನಕ್ಕೆ ಇದು ಆಧಾರವಾಗಿದೆ. ಇಲ್ಲಿನ ಸಹಕಾರಿ ಸಂಘಗಳು ಅರಾಕು ಕಾಫಿಗೆ ಮಾರುಕಟ್ಟೆ ಒದಗಿಸಲು ಶ್ರಮಿಸುತ್ತದೆ. ನಾನು ವಿಜಯವಾಡಗೆ ಹೋದಾಗ ಈ ಕಾಫಿಯ ಸ್ವಾದ ಸವಿದಿದ್ದೆ. ಬಹಳ ಅದ್ಭುತವಾಗಿದೆ ಎಂದು ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಸ್ಮರಿಸಿದರು.
ಇದನ್ನೂ ಓದಿ: ವರ್ಲ್ಡ್ಕಪ್ ಜೊತೆಗೆ ಕೋಟಿಕೋಟಿ ಜನರ ಹೃದಯ ಗೆದ್ದಿದ್ದೀರಿ: ಟೀಮ್ ಇಂಡಿಯಾಗೆ ಪ್ರಧಾನಿ ಅಭಿನಂದನೆ
ಆಲ್ ಇಂಡಿಯಾ ರೇಡಿಯೋದಲ್ಲಿ ಸಂಸ್ಕೃತ ವಾರ್ತೆ ಶುರುವಾಗಿ 50 ವರ್ಷ ಆಗಿರುವುದನ್ನು ಸ್ಮರಿಸಿದ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ನಡೆಯುವ ಸಂಸ್ಕೃತ ವೀಕೆಂಡ್ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು. ಪ್ರತೀ ಭಾನುವಾರ ಸಂಸ್ಕೃತದಲ್ಲಿ ಜನರು ಸಂವಾದ, ಚರ್ಚೆ ನಡೆಸುವುದು ಈ ಕಾರ್ಯಕ್ರಮದ ವಿಶೇಷತೆ ಎನಿಸಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಾಪಡಿಯ ಕಾರ್ತುಂಬಿಯಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯರು ಸೇರಿ ಛತ್ರಿ ತಯಾರಿಸುತ್ತಿರುವ ವಿಚಾರವನ್ನು ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದರು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯರು ಇನ್ನೂ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ ಅವರು, ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. #cheer4bharat ಹ್ಯಾಸ್ ಟ್ಯಾಗ್ ಉಪಯೋಗಿಸಿ ದೇಶದ ಕ್ರೀಡಾಪಟುಗಳನ್ನು ಉತ್ತೇಜಿಸುವಂತೆ ಜನರಿಗೆ ಅವರು ಕರೆ ನೀಡಿದರು.
ಕುವೇತ್ನ ನ್ಯಾಷನಲ್ ರೇಡಿಯೋದಲ್ಲಿ ಪ್ರತೀ ಭಾನುವಾರ ಅರ್ಧಗಂಟೆ ಹಿಂದಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯ ಸ್ಥಳೀಯ ಜನರೂ ಕೂಡ ಈ ಕಾರ್ಯಕ್ರಮ ಇಷ್ಟಪಡುತ್ತಿದ್ದಾರೆ. ಇದಕ್ಕಾಗಿ ಕುವೇತ್ ಸರ್ಕಾರಕ್ಕೆ ಅಭಿನಂದನೆ ಹೇಳುತ್ತೇನೆ ಎಂದು ಮೋದಿ ಹೇಳಿದರು.
ತುರ್ಕ್ಮೆನಿಸ್ತಾನ್ನಲ್ಲಿ ವಿಶ್ವದ 24 ಕವಿಗಳ ಪ್ರತಿಮೆ ನಿರ್ಮಿಸಲಾಗಿದೆ. ಇದರಲ್ಲಿ ಭಾರತದ ಗುರು ರಬೀಂದ್ರನಾಥ್ ಠಾಗೂರ್ ಅವರ ಪ್ರತಿಮೆ ಇದೆ. ಸುರಿನಾಮ್ ಮತ್ತು ಸೆಂಟ್ ವಿನ್ಸೆಂಟ್ಮತ್ತು ಗ್ರಿನಾಡೆಸ್ನಲ್ಲಿ ಭಾರತೀಯ ಪರಂಪರೆಯನ್ನು ಆಚರಿಸಲಾಗುತ್ತದೆ ಎಂದೂ ಮೋದಿ ಪ್ರಸ್ತಾಪಿಸಿದರು.
ಈ ತಿಂಗಳು 10ನೇ ಯೋಗದಿನವನ್ನು ಉತ್ಸಾಹದಿಂದ ಆಚರಿಸಲಾಯಿತು. ಕಾಶ್ಮೀರದಲ್ಲಿ ನಾನು ಪಾಲ್ಗೊಂಡಿದ್ದೆ. ಅಲ್ಲಿನ ಯುವಕರು, ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸೌದಿ ಅರೇಬಿಯಾದಲ್ಲಿ ಒಬ್ಬ ಮಹಿಳೆ ಯೋಗ ಸೆಷನ್ ಮುನ್ನಡೆಸಿದರು. ಇಂಥದ್ದು ಅಲ್ಲಿ ಇದೇ ಮೊದಲು. ಈಜಿಪ್ಟ್ನಲ್ಲಿ ನೈಲ್ ನದಿ ತೀರದಲ್ಲಿ, ಪಿರಾಮಿಡ್ ಸಮೀಪದಲ್ಲಿ ಯೋಗ ಪ್ರದರ್ಶನ ಮಾಡಲಾಯಿತು ಎಂದು ಅವರು ತಿಳಿಸಿದರು.
ಬಹರೇನ್, ಶ್ರೀಲಂಕಾ, ಅಮೆರಿಕ, ಮಾರ್ಷಲ್ ಐಲೆಂಡ್ಸ್, ಭೂತಾನ್ ಮೊದಲಾದ ದೇಶಗಳಲ್ಲಿ ಯೋಗ ದಿನ ಆಚರಣೆ ನಡೆದಿರುವುದನ್ನು ಪ್ರಸ್ತಾಪಿಸಿದ ಅವರು, ಒಂದು ದಿನ ಯೋಗ ಮಾಡುವುದಲ್ಲ, ಅದು ನಿಮ್ಮ ಜೀವನದ ನಿತ್ಯ ಭಾಗವಾಗಿರಲಿ ಎಂದು ಕರೆ ನೀಡಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಸಿದ್ದರಾಮಯ್ಯ: ಮಹದಾಯಿ, ಬೆಂಗಳೂರು ಅಭಿವೃದ್ಧಿ ಸೇರಿ ಹಲವು ಯೋಜನೆಗಳ ಪ್ರಸ್ತಾವನೆ ಸಲ್ಲಿಕೆ
ಇಂದು ಜೂನ್ 30 ಜಾರ್ಖಂಡ್ನ ಸಿಧು ಮತ್ತು ಕಾನ್ಹು ಬಲಿದಾನಗೊಂಡ ದಿನ. ಇವರನ್ನು ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಸ್ಮರಿಸಿದರು. 1855ರಲ್ಲಿ ಬ್ರಿಟಿಷರ ವಿರುದ್ಧ ಇವರು ಶಸ್ತ್ರಾಸ್ತ್ರ ಹೋರಾಟ ನಡೆಸಿದ್ದರು ಎಂಬುದನ್ನು ಮೋದಿ ಹೇಳಿದರು. ಸಂತಾಲಿ ಭಾಷೆಯಲ್ಲಿ ಅವರಿಬ್ಬರ ಬಗ್ಗೆ ಒಂದು ಹಾಡಿನ ತುಣುಕು ಕೂಡ ಪ್ರಸಾರವಾಯಿತು.
ನರೇಂದ್ರ ಮೋದಿ ತಮ್ಮ ಈ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಶ್ಮೀರದ ಹಿಮ ಬಟಾಣಿ ವಿವಿಧೆಡೆ ಜನಪ್ರಿಯವಾಗುತ್ತಿರುವುದನ್ನು ತಿಳಿಸಿದ್ದಾರೆ. ಜಗನ್ನಾಥ ಯಾತ್ರೆ, ಅಮರಾನಾಥ ಯಾತ್ರೆ, ಪಂಡರಾಪುರ ಜಾತ್ರೆ ನಡೆಯಲಿರುವುದನ್ನೂ ಉಲ್ಲೇಖಿಸಿದ ಅವರು ಭಕ್ತಾದಿಗಳಿಗೆ ಶುಭ ಕೋರಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Sun, 30 June 24