AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಲ್ಡ್​ಕಪ್ ಜೊತೆಗೆ ಕೋಟಿಕೋಟಿ ಜನರ ಹೃದಯ ಗೆದ್ದಿದ್ದೀರಿ: ಟೀಮ್ ಇಂಡಿಯಾಗೆ ಪ್ರಧಾನಿ ಅಭಿನಂದನೆ

PM Narendra Modi Congratulates Indian Cricket Team: ಎರಡನೇ ಬಾರಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಗೆದ್ದ ಭಾರತ ತಂಡವನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್, ಸೂರ್ಯಕುಮಾರ್ ಯಾದವ್, ಕೋಚ್ ರಾಹುಲ್ ದ್ರಾವಿಡ್ ಅವರನ್ನು ಮೋದಿ ಶ್ಲಾಘಿಸಿದ್ದಾರೆ. ವೆಸ್ಟ್ ಇಂಡೀಸ್​ನ ಬಾರ್ಬಡೋಸ್​ನ ಬ್ರಿಡ್ಜ್​ಟೌನ್​ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೌತ್ ಆಫ್ರಿಕಾವನ್ನು ಭಾರತ 7 ರನ್​ಗಳಿಂದ ಸೋಲಿಸಿತು.

ವರ್ಲ್ಡ್​ಕಪ್ ಜೊತೆಗೆ ಕೋಟಿಕೋಟಿ ಜನರ ಹೃದಯ ಗೆದ್ದಿದ್ದೀರಿ: ಟೀಮ್ ಇಂಡಿಯಾಗೆ ಪ್ರಧಾನಿ ಅಭಿನಂದನೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 30, 2024 | 2:36 PM

Share

ನವದೆಹಲಿ, ಜೂನ್ 30: ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಮಾಡಿದ್ದಾರೆ. ತಂಡಕ್ಕೆ ದೂರವಾಣಿ ಕರೆ ಮಾಡಿ ಮಾತನಾಡಿದ ಅವರು ತಂಡದ ಎಲ್ಲಾ ಸದಸ್ಯರಿಗೂ ವಿಶ್ ಮಾಡಿದ್ದಾರೆ. ಇಡೀ ಟೂರ್ನಿಯಲ್ಲಿ ಕ್ಯಾಪ್ಟನ್ಸಿ ನಿರ್ವಹಿಸಿದ ರೀತಿಗೆ ರೋಹಿತ್ ಶರ್ಮಾ ಅವರನ್ನು ಪ್ರಧಾನಿಗಳು ಶ್ಲಾಘಿಸಿದ್ದಾರೆ. ಫೈನಲ್​ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ಪಂದ್ಯ ಶ್ರೇಷ್ಠ ಎನಿಸಿದ ವಿರಾಟ್ ಕೊಹ್ಲಿ ಹಾಗೂ ಭಾರತೀಯ ಕ್ರಿಕೆಟ್​ಗೆ ಅವರ ಕೊಡುಗೆಯನ್ನು ನರೇಂದ್ರ ಮೋದಿ ಮೆಚ್ಚಿಕೊಂಡಿದ್ದಾರೆ.

ಫೈನಲ್ ಮ್ಯಾಚ್​ನ ಫೈನಲ್ ಓವರ್​ನಲ್ಲಿ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಪಂದ್ಯದ ಪ್ರಮುಖ ಹಂತದಲ್ಲಿ ಬೌಂಡರಿ ಲೈನ್​ನಲ್ಲಿ ಬಹಳ ಅದ್ಭುತ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಅವರನ್ನೂ ಮೋದಿ ಅಭಿನಂದಿಸಿದ್ದಾರೆ. ಸೋಲಿನ ಸುಳಿಯಲ್ಲಿದ್ದಾಗ ತಮ್ಮ ಎರಡನೇ ಸ್ಪೆಲ್​ನಲ್ಲಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ ಫಾಸ್ಟ್ ಬೌಲರ್ ಜಸ್​ಪ್ರೀತ್ ಬುಮ್ರಾ ಅವರನ್ನೂ ಪ್ರಧಾನಿ ಮೆಚ್ಚಿಕೊಂಡಿದ್ದಾರೆ. ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಪಾತ್ರವನ್ನೂ ಅವರು ಗುರುತಿಸಿದ್ದಾರೆ.

ಇದನ್ನೂ ಓದಿ: ಇಡೀ ಪಂದ್ಯದ ಚಿತ್ರಣ ಬದಲಿಸಿದ ಜಸ್​ಪ್ರೀತ್ ಬುಮ್ರಾ

ತಮ್ಮ ಎಕ್ಸ್ ಪೋಸ್ಟ್​ನಲ್ಲಿ ವಿಡಿಯೋ ಸಂದೇಶದ ಮೂಲಕವೂ ಪ್ರಧಾನಿ ನರೇಂದ್ರ ಮೋದಿ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಆಟದ ಮೈದಾನದಲ್ಲಿ ನೀವು ವರ್ಲ್ಡ್ ಕಪ್ ಗೆದ್ದಿರಿ. ಅದಕ್ಕಿಂತ ಹೆಚ್ಚಾಗಿ ಕೋಟಿ ಕೋಟಿ ಜನರ ಹೃದಯ ಗೆದ್ದಿದ್ದೀರಿ. ಇಡೀ ಟೂರ್ನಿಯಲ್ಲಿ ತಂಡ ಒಂದೂ ಪಂದ್ಯ ಸೋಲಲಿಲ್ಲ. ಇದು ಸಾಮಾನ್ಯ ವಿಷಯವಲ್ಲ ಎಂದು ತಮ್ಮ ವಿಡಿಯೋ ಮೆಸೇಜ್​ನಲ್ಲಿ ಅವರು ತಿಳಿಸಿದ್ದಾರೆ.

ಎಲ್ಲಾ ಮಾದರಿ ಕ್ರಿಕೆಟ್​ನಲ್ಲಿ ಮಿಂಚಿದ್ದೀರಿ: ಕೊಹ್ಲಿಗೆ ಅಭಿನಂದಿಸಿದ ಮೋದಿ

ನಿಮ್ಮ ಜೊತೆ ಮಾತನಾಡಿದ್ದು ಖುಷಿಯಾಯಿತು. ಫೈನಲ್​ನಲ್ಲಿ ನಿಮ್ಮ ಆಟ ಇಷ್ಟವಾಯಿತು. ಭಾರತದ ಬ್ಯಾಟಿಂಗ್ ಅನ್ನು ಚೆನ್ನಾಗಿ ಮುನ್ನಡೆಸಿದಿರಿ. ಎಲ್ಲಾ ಮಾದರಿ ಕ್ರಿಕೆಟ್​ನಲ್ಲೂ ಮಿಂಚಿದ್ದೀರಿ. ಟಿ20 ಕ್ರಿಕೆಟ್​ಗೆ ನಿಮ್ಮ ಅನುಪಸ್ಥಿತಿ ಕಾಡಬಹುದು. ಅದರೆ, ಹೊಸ ತಲೆಮಾರಿನ ಆಟಗಾರರಿಗೆ ನೀವು ಪ್ರೇರಣೆಯಾಗಿರುತ್ತೀರಿ ಎಂದು ಮೋದಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ನಿಮ್ಮ ನಾಯಕತ್ವ ಹೊಸ ಆಯಾಮ ಕೊಟ್ಟಿದೆ: ರೋಹಿತ್ ಶರ್ಮಾಗೆ ತಿಳಿಸಿದ ಮೋದಿ

‘ನಿಮ್ಮ ಆಕ್ರಮಣಕಾರಿ ಮನೋಭಾವ, ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿಯು ಭಾರತ ತಂಡಕ್ಕೆ ಹೊಸ ಆಯಾಮ ಕೊಟ್ಟಿದೆ. ನಿಮ್ಮ ಟಿ20 ವೃತ್ತಿಯನ್ನು ಆನಂದದಿಂದ ನೆನಪಿಸಿಕೊಳ್ಳಲಾಗುತ್ತದೆ,’ ಎಂದು ಮೋದಿ ಹೇಳಿದ್ದಾರೆ.

ರಾಹುಲ್ ದ್ರಾವಿಡ್​ಗೆ ಮೋದಿ ಪ್ರಶಂಸೆ

ರಾಹುಲ್ ದ್ರಾವಿಡ್ ಅವರ ಕೋಚ್ ಆಗಿ ಭಾರತೀಯ ಕ್ರಿಕೆಟ್​ನ ಯಶಸ್ಸನ್ನು ರೂಪಿಸಿದ್ದಾರೆ. ಅವರ ಬದ್ಧತೆ, ತಂತ್ರಗಾರಿಕೆ, ಸರಿಯಾದ ಪ್ರತಿಭಾ ಪೋಷಣೆ ಇದು ತಂಡಕ್ಕೆ ಪರಿವರ್ತನೆ ತಂದಿದೆ. ಅವರು ನೀಡಿರುವ ಕೊಡುಗೆಗಳಿಗೆ ಭಾರತ ಆಭಾರಿಯಾಗಿರುತ್ತದೆ. ವಿಶ್ವಕಪ್ ಅನ್ನು ಅವರು ಎತ್ತಿಹಿಡಿಯುವುದನ್ನು ನೋಡಲು ಖುಷಿಯಾಯಿತು ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಏಳು ರನ್​ಗಳ ರೋಚಕ ಜಯ

ಕೆರಿಬಿಯನ್ ನಾಡಿನ ಬಾರ್ಬಡೋಸ್​ನ ಬ್ರಿಡ್ಜ್​ಟೌನ್ ನಗರದ ಕೆನ್ಸಿಂಗ್ಟನ್ ಓವಲ್​ನಲ್ಲಿ ನಿನ್ನೆ ರಾತ್ರಿ ಮುಕ್ತಾಯಗೊಂಡ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ ಸೋಲಿನ ಸುಳಿಯಿಂದ ಹೊರಬಂದು 7 ರನ್​ಗಳಿಂದ ಸೋಲಿಸಿತು. ಹದಿನೇಳು ವರ್ಷದ ಬಳಿಕ ಟಿ20 ವರ್ಲ್ಡ್ ಕಪ್ ಅನ್ನು ಭಾರತ ಗೆದ್ದಿದೆ. ಭಾರತದ 176 ರನ್​ಗಳಿಗೆ ಪ್ರತಿಯಾಗಿ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಒಂದು ಹಂತದಲ್ಲಿ 30 ಎಸೆತಕ್ಕೆ 30 ರನ್ ಗಳಿಸುವ ಗುರಿ ಹೊಂದಿದ್ದ ಆಫ್ರಿಕನ್ನರು ಬಹುತೇಕ ಗೆಲ್ಲುವುದು ಖಚಿತ ಎಂಬಂತಿತ್ತು. ಹೆನ್ರೀಚ್ ಕ್ಲಾಸನ್ ಅಮೋಘ ಫಾರ್ಮ್​ನಲ್ಲಿದ್ದರು.

ಇದನ್ನೂ ಓದಿ: ಅದೆಷ್ಟೋ ವರ್ಷಗಳಿಂದ ಆದಿಮಿಟ್ಟುಕೊಂಡಿದ್ದ ಅಗ್ರೆಸಿವ್ ಫಸ್ಟ್ ಟೈಮ್ ಹೊರಹಾಕಿದ ದ್ರಾವಿಡ್, ವಿಡಿಯೋ ನೋಡಿ

16ನೇ ಓವರ್​ನಲ್ಲಿ ಜಸ್​ಪ್ರೀತ್ ಬುಮ್ರಾ ಮಾಡಿದ ಬೌಲಿಂಗ್ ಪಂದ್ಯದ ಗತಿಯನ್ನು ಕದಲಿಸಿತು. ಅಲ್ಲಿಂದಾಚೆ ಭಾರತದ ವೇಗದ ಬೌಲರ್​ಗಳನ್ನು ಎದುರಿಸಿ ನಿಲ್ಲು ಹರಿಣಗಳ ಪಡೆಗೆ ಸಾಧ್ಯವಾಗಲಿಲ್ಲ. ಮೊತ್ತಮೊದಲ ಬಾರಿಗೆ ಐಸಿಸಿ ಟ್ರೋಫಿ ಎತ್ತಿಹಿಡಿಯುವ ಕನಸು ಸೌತ್ ಆಫ್ರಿಕಾಗೆ ನನಸಾಗಲಿಲ್ಲ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Sun, 30 June 24