Bird flu ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆ
ಅನೇಕ ಹಿನ್ನೀರು ಮತ್ತು ಜಲಮೂಲಗಳಿಂದ ಕೂಡಿದ ಜಿಲ್ಲೆಯಲ್ಲಿ ರೈತರು ಬಾತುಕೋಳಿಗಳನ್ನು ಸಾಕುತ್ತಾರೆ ಇಲ್ಲಿ ಹಕ್ಕಿ ಜ್ವರ ಕಾಣಿಸುಕೊಳ್ಳುವುದೂ ಜಾಸ್ತಿ. ಇತರ ದೇಶಗಳಿಂದ ವಲಸೆ ಬರುವ ಪಕ್ಷಿಗಳು ವೈರಸ್‌ನ ಮುಖ್ಯ ವಾಹಕಗಳಾಗಿವೆ ಎಂದು ವರದಿಯಾಗಿದೆ.
ಆಲಪ್ಪುಳ: ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಕಳುಹಿಸಲಾದ ಕೆಲವು ಮಾದರಿಗಳಲ್ಲಿ ಹಕ್ಕಿ ಜ್ವರವನ್ನು (H5N1 influenza) ರಾಜ್ಯ ಪಶುಸಂಗೋಪನಾ ಇಲಾಖೆ ಗುರುವಾರ ದೃಢಪಡಿಸಿದ ನಂತರ ಕೇರಳದ ಅಲಪ್ಪುಳ (Alappuzha) ಜಿಲ್ಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಕಳೆದ ವಾರ ಜಿಲ್ಲೆಯಲ್ಲಿ ಅನೇಕ ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸಾವಿಗೀಡಾಗಿದ್ದರಿಂದ ಅಧಿಕಾರಿಗಳು ಭೋಪಾಲ್ (Bhopal) ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಬೇಕಾಗಿ ಬಂದಿತ್ತು. ರೋಗ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ರೈತರಿಗೆ ಪರಿಹಾರ ನೀಡಲಾಗುವುದು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಪಶುಸಂಗೋಪನಾ ಸಚಿವೆ ಜೆ ಸಿಂಚು ರಾಣಿ ತಿರುವನಂತಪುರಂನಲ್ಲಿ ತಿಳಿಸಿದ್ದಾರೆ. ಅನೇಕ ಹಿನ್ನೀರು ಮತ್ತು ಜಲಮೂಲಗಳಿಂದ ಕೂಡಿದ ಜಿಲ್ಲೆಯಲ್ಲಿ ರೈತರು ಬಾತುಕೋಳಿಗಳನ್ನು ಸಾಕುತ್ತಾರೆ ಇಲ್ಲಿ ಹಕ್ಕಿ ಜ್ವರ ಕಾಣಿಸುಕೊಳ್ಳುವುದೂ ಜಾಸ್ತಿ. ಇತರ ದೇಶಗಳಿಂದ ವಲಸೆ ಬರುವ ಪಕ್ಷಿಗಳು ವೈರಸ್‌ನ ಮುಖ್ಯ ವಾಹಕಗಳಾಗಿವೆ ಎಂದು ವರದಿಯಾಗಿದೆ.
ಆಲಪ್ಪುಳ ಮತ್ತು ನೆರೆಯ ಜಿಲ್ಲೆಯಾದ ಕೋಟ್ಟಯಂನಲ್ಲಿ ಬಾತುಕೋಳಿ ಸಾಕಣೆಯು ಒಂದು ಪ್ರಮುಖ ವ್ಯವಹಾರವಾಗಿದೆ.ಇಲ್ಲಿ ಬಾತುಕೋಳಿಗಳ ಮೊಟ್ಟೆ ಮತ್ತು ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ, ಸಾಮಾನ್ಯವಾಗಿ ಕೋಳಿಗಿಂತ ಹೆಚ್ಚಿನ ಬೆಲೆಯಿದೆ.
ಏವಿಯನ್ ಫ್ಲೂ ಎಂದೂ ಕರೆಯಲ್ಪಡುವ ಹಕ್ಕಿ ಜ್ವರ ಪಕ್ಷಿಗಳಲ್ಲಿ ಗಾಳಿಯಿಂದ ಹರಡುವ ವೈರಸ್‌ನಿಂದ ಉಂಟಾಗುವ ವಿವಿಧ ರೀತಿಯ ಸೋಂಕು ಜ್ವರವಾಗಿದೆ. ಇದು ಅಪರೂಪವಾಗಿ ಮನುಷ್ಯರಿಗೆ ಹರಡಬಹುದು ಮತ್ತು ಅದು ಸಂಭವಿಸಿದರೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಿಕೆಯನ್ನು ಪ್ರಚೋದಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ವೈರಸ್‌ಗಳಲ್ಲಿ ಹಲವು ವಿಧಗಳಿವೆ ಮತ್ತು ಅವುಗಳಲ್ಲಿ H7N9 ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಏವಿಯನ್ ಇನ್ಫ್ಲುಯೆನ್ಸ ವೈರಸ್ ನ ಅನೇಕ ಉಪವಿಭಾಗಗಳಿವೆ ಮತ್ತು ಅವುಗಳಲ್ಲಿ ಕೆಲವು ಮಾತ್ರ ಮಾನವರಿಗೆ ಅಪಾಯಕಾರಿ.
ಕಳೆದ ವರ್ಷವೂ ಜಿಲ್ಲೆಯಲ್ಲಿ ವೈರಲ್ ಏಕಾಏಕಿ ವರದಿಯಾಗಿದ್ದು ಅದನ್ನು ಸ್ಥಳೀಯವಾಗಿಯೇ ನಿಭಾಯಿಸಲಾಗಿತ್ತು . 2016 ರಲ್ಲಿ ಹಕ್ಕಿ ಜ್ವರ ನಿಯಂತ್ರಿಸಲು ಅಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಕನಿಷ್ಠ 5 ಲಕ್ಷ ಕೋಳಿ ಮತ್ತು ಬಾತುಕೋಳಿಗಳನ್ನು ಕೊಲ್ಲಲಾಯಿತು. ಇದು ಸಾಂಕ್ರಾಮಿಕ ರೋಗವಾಗಿದ್ದು, ರೋಗ ನಿಯಂತ್ರಣಕ್ಕೆ ಇತರ ಪಕ್ಷಿಗಳನ್ನೂ ಕೊಲ್ಲಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಒಮಿಕ್ರಾನ್ ಎಚ್ಚರಿಕೆ: ಜನವರಿ 31ರವರೆಗೆ ಪುನಾರಂಭವಾಗಲ್ಲ ಅಂತರರಾಷ್ಟ್ರೀಯ ವಿಮಾನಗಳು