Fact Check ಆಕಾಶದಲ್ಲಿಯೇ ಹೊತ್ತಿ ಉರಿಯುತ್ತಿರುವ ಹೆಲಿಕಾಪ್ಟರ್; ಬಿಪಿನ್ ರಾವತ್ ಪ್ರಯಾಣಿಸಿದ್ದ ಹೆಲಿಕಾಪ್ಟರ್ ಪತನದ ವಿಡಿಯೊ ಇದಲ್ಲ
ತಮಿಳುನಾಡಿನಲ್ಲಿ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನದ ವಿಡಿಯೊ ಎಂಬ ಶೀರ್ಷಿಕೆಯೊಂದಿಗೆ ಆಕಾಶದಲ್ಲಿ ಹೊತ್ತಿ ಉರಿಯುತ್ತಿರುವ ಹೆಲಿಕಾಪ್ಟರ್ನ್ನು ತೋರಿಸುವ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊ ಸಿರಿಯಾದ್ದು,ತಮಿಳುನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅಪಘಾತದ್ದು ಅಲ್ಲ.
ಸಿಡಿಎಸ್ ಜನರಲ್ ಬಿಪಿನ್ ರಾವತ್ (Chief of Defence Staff General Bipin Rawat) ಅವರಿದ್ದ IAF Mi-17V5 ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ ಬಳಿ ಅಪಘಾತಕ್ಕೀಡಾಗಿದೆ ಎಂಬ ಆಘಾತಕಾರಿ ಸುದ್ದಿಯನ್ನು ಡಿಸೆಂಬರ್ 8 ರಂದು ಭಾರತೀಯ ವಾಯುಪಡೆ (Indian Air Force)ಟ್ವೀಟ್ ಮಾಡಿತ್ತು. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ. ಈ ಘಟನೆಯಲ್ಲಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 14 ಪ್ರಯಾಣಿಕರಲ್ಲಿ 13 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಈ ಅಪಘಾತದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕಾಶದಲ್ಲಿ ಹೊತ್ತಿ ಉರಿಯುತ್ತಿರುವ ವಿಡಿಯೊವೊಂದನ್ನು ಪೋಸ್ಟ್ ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದ ವಿಡಿಯೊ ಎಂದು ಹೇಳಿದ್ದಾರೆ. ಟ್ವಿಟರ್ ಬಳಕೆದಾರರಾದ @_SirDonBradman_ ಈ ವಿಡಿಯೊವನ್ನು ಪೋಸ್ಟ್ ಮಾಡಿ “ತಮಿಳುನಾಡಿನಲ್ಲಿ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನಗೊಂಡಿರುವ ವಿಡಿಯೊ” ಎಂದು ಬರೆದಿದ್ದರು. ಇದೀಗ ಆ ಟ್ವೀಟ್ ಡಿಲೀಟ್ ಆಗಿದೆ . ಈ ವಿಡಿಯೊವನ್ನು ಸುಮಾರು ಒಂದು ಲಕ್ಷ ಬಾರಿ ವೀಕ್ಷಿಸಲಾಗಿದೆ. ಹಲವಾರು ಮಂದಿ ಇದನ್ನು ರಿಟ್ವೀಟ್ ಮಾಡಿದ್ದಾರೆ. ಇದನ್ನು ಟೈಮ್ಸ್ ಮೀಡಿಯಾ 24 ಮತ್ತು ಅಸ್ಸಾಂ 123 ನ್ಯೂಸ್ ಎಂಬ ಫೇಸ್‌ಬುಕ್ ಪುಟಗಳು ಸಹ ಹಂಚಿಕೊಂಡಿವೆ. ಎರಡೂ ಪುಟಗಳು ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿವೆ.
Bipin Rawat Helicopter Crashed In Tamil Nadu live Video #bipinrawat #helicopter #IndianArmy #BIGBREAKING pic.twitter.com/CgwCqZ0bSr
— Marwadi Club (@MarwadiClub) December 8, 2021
ಫ್ಯಾಕ್ಟ್ ಚೆಕ್ ಸೂಲೂರು ವಾಯುನೆಲೆಯಿಂದ ಟೇಕಾಫ್ ಆದ ಐಎಎಫ್ ಹೆಲಿಕಾಪ್ಟರ್ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳಿತ್ತು. ಹೆಲಿಕಾಪ್ಟರ್ ನೆಲದ ಮೇಲೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ ಆಕಾಶದಲ್ಲಿಯೇ ಹೆಲಿಕಾಪ್ಟರ್ ಹೊತ್ತಿ ಉರಿದಿಲ್ಲ, ವೈರಲ್ ಆಗಿರುವ ವಿಡಿಯೊ ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಪತನ ವಿಡಿಯೊ ಅಲ್ಲ ಎಂಬುದು ಸ್ಪಷ್ಟ.
ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ಮಾಡಿದ ಆಲ್ಟ್ ನ್ಯೂಸ್, ರಿವರ್ಸ್ ಇಮೇಜ್ ಸರ್ಚ್ ಮಾಡಿ ಈ ವಿಡಿಯೊ ಫೆಬ್ರವರಿ 2020 ರದ್ದು ಎಂದು ಕಂಡುಹಿಡಿದಿದೆ. ಇದನ್ನು ಅಥೆನ್ಸ್ ಮೂಲದ ಪತ್ರಕರ್ತ ಬಾಬಕ್ ತಘ್ವೇ ಪೋಸ್ಟ್ ಮಾಡಿದ್ದಾರೆ. ಅವರ ಟ್ವೀಟ್‌ನ ಪ್ರಕಾರ, ಸಿರಿಯಾದ ಅರಬ್ ಏರ್ ಫೋರ್ಸ್‌ನ Mi-17 ಅನ್ನು ಟರ್ಕಿಶ್ ಸೇನೆಯು ಸಿರಿಯಾದ ಅಲ್-ನೈರಾಬ್ ಬಳಿ ಹೊಡೆದುರುಳಿಸಿದೆ ಎಂದು ವಿಡಿಯೊ ತೋರಿಸುತ್ತದೆ.
#BREAKING: #Turkish Army targeted a Mi-17 utility helicopter of #Syria Arab Air Force over Al-Nayrab, #Idlib an hour ago. It can be seen crashing. #AlQaeda affiliated militias of #Turkey claim that they did it, but it was beyond range of their MANPADS! pic.twitter.com/kaZfTcoaN6
— Babak Taghvaee – Μπάπακ Τακβαίε – بابک تقوایی (@BabakTaghvaee) February 11, 2020
ಹಾಗಾಗಿ ವೈರಲ್ ವಿಡಿಯೊ ಕುನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನದ್ದು ಅಲ್ಲ . ಸಂಕ್ಷಿಪ್ತವಾಗಿ ಹೇಳುವುದಾದರೆ, ಹೆಲಿಕಾಪ್ಟರ್ ಕೆಳಗೆ ಬೀಳುತ್ತಿರುವುದನ್ನು ತೋರಿಸುವ ಸಿರಿಯಾದ ಹಳೆಯ ವಿಡಿಯೊವನ್ನು ಡಿಸೆಂಬರ್ 8 ರಂದು ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಂದು ಸಾಮಾಜಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಸುಳ್ಳು.
ಇದನ್ನೂ ಓದಿ: Bipin Rawat: ಬಿಪಿನ್ ರಾವತ್ಗೆ ಚಾಲಕರಾಗಿದ್ದರು ಮೈಸೂರಿನ ಯೋಧ; ಹಳೆಯ ದಿನಗಳನ್ನು ಮೆಲುಕು ಹಾಕಿದ ವೇಣು