Unemployed Husband Maintenance: ನಿರುದ್ಯೋಗಿ ಪತಿಗೆ ತಿಂಗಳಿಗೆ ₹5,000 ಜೀವನಾಂಶ ಕೊಡಬೇಕು ಎಂದು ಆದೇಶಿಸಿದ ಇಂದೋರ್ ನ್ಯಾಯಾಲಯ
ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಪತ್ನಿ, ನಿರುದ್ಯೋಗಿಯಾದ ಪತಿ. ಕೌಟುಂಬಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಇಂದೋರ್ ನ್ಯಾಯಾಲಯವು ಪತ್ನಿ ಪತಿಗೆ ಜೀವನಾಂಶವನ್ನು ನೀಡಬೇಕು ಎಂದು ಆದೇಶಿಸಿದೆ. ಪತಿ ಓದಿದ್ದು 12ನೇ ತರಗತಿ, ಪತ್ನಿ ಮತ್ತು ಕುಟುಂಬದವರ ದೌರ್ಜನ್ಯದಿಂದ ಓದು ಮುಂದುವರಿಸಲಾಗಿಲ್ಲ. ಕೆಲಸವಿಲ್ಲದೇ ಇರುವ ಆತ ಜೀವನ ಸಾಗಿಸುವುದು ಹೇಗೆ ಎಂದು ಪತಿಯ ಪರವಾಗಿ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇಂದೋರ್ ಫೆಬ್ರುವರಿ 23: ವೈವಾಹಿಕ ಪ್ರಕರಣವೊಂದರಲ್ಲಿ(matrimonial case) ಇಂದೋರ್ ಕೌಟುಂಬಿಕ ನ್ಯಾಯಾಲಯವು ಬ್ಯೂಟಿ ಪಾರ್ಲರ್ ಹೊಂದಿರುವ ಮಹಿಳೆಗೆ ತನ್ನ ನಿರುದ್ಯೋಗಿ ಪತಿಗೆ (Unemployed Husband) ತಿಂಗಳಿಗೆ 5,000 ರೂ.ಗಳನ್ನು ಜೀವನಾಂಶವಾಗಿ (maintenance) ನೀಡುವಂತೆ ಆದೇಶಿಸಿದೆ. ಪತಿಯ ವಕೀಲ ಮನೀಶ್ ಝರೋಲಾ ಅವರ ಪ್ರಕಾರ, ಅವರ ಕಕ್ಷಿದಾರನ ಪತ್ನಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಪತಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ತನ್ನ ಹೆಂಡತಿಯ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದಾಗಿ ಕಲಿಕೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಮಹಿಳೆಗೆ ಆತನ ಮೇಲೆ ಅಪಾರ ಪ್ರೀತಿ
ಮಹಿಳೆ ತನ್ನ ಕಕ್ಷಿದಾರನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾಳೆ. ಆಕೆಗೆ ಮಾತ್ರ ನನ್ನ ಕಕ್ಷಿದಾರನ ಮೇಲೆ ಪ್ರೀತಿ ಇದ್ದದ್ದು.ಆಕೆಯ ಕುಟುಂಬ ಸದಸ್ಯರು ಸೇರಿ 2022 ರಲ್ಲಿ ಆರ್ಯ ಸಮಾಜ ದೇವಸ್ಥಾನದಲ್ಲಿ ತನ್ನ ಕಕ್ಷಿದಾರನ ಇಚ್ಛೆಗೆ ವಿರುದ್ಧವಾಗಿ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸಿದರು. ಮದುವೆಯಾದ ಕೂಡಲೇ ಈ ಯುವ ದಂಪತಿಗಳು ದೂರವಾಗಿದ್ದರು ಎಂದು ಮನೀಶ್ ಝರೋಲಾ ಹೇಳಿದ್ದಾರೆ.
ಪತಿ ನಿರುದ್ಯೋಗಿ, ಆತ ಜೀವನ ನಡೆಸುವುದು ಹೇಗೆ?
ಆಕೆಯ ಪತಿ ನಿರುದ್ಯೋಗಿಯಾಗಿದ್ದು ಆತನಿಗೆ ಬದುಕು ಸಾಗಿಸಲು ಏನೇನೂ ಇಲ್ಲ ಎಂದು ತನ್ನ ಕಕ್ಷಿದಾರನು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ಝರೋಲಾ ಹೇಳಿದರು. ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಮನೀಶ್ ಝರೋಲಾ, ” ನಮ್ಮ ಮಧ್ಯಂತರ ಅರ್ಜಿಯೊಂದರಲ್ಲಿ, ಫೆಬ್ರುವರಿ 20 ರಂದು (ಮಂಗಳವಾರ) ಕೌಟುಂಬಿಕ ನ್ಯಾಯಾಲಯವು ನನ್ನ ಕಕ್ಷಿದಾರನ ಹೆಂಡತಿಗೆ ಮಾಸಿಕ 5,000 ರೂಗಳನ್ನು ನೀಡುವಂತೆ ಆದೇಶ ನೀಡಿತು, ಜೊತೆಗೆ ವ್ಯಾಜ್ಯದ ವೆಚ್ಚವನ್ನು ಭರಿಸಲು ಹೇಳಿದೆ ಎಂದಿದ್ದಾರೆ.
ಝರೋಲಾ ಪ್ರಕಾರ, ತನ್ನ ಕಕ್ಷಿದಾರ ತನ್ನ ಹೆಂಡತಿ ಮತ್ತು ಅವಳ ಕುಟುಂಬ ಸದಸ್ಯರಿಂದ ಪಡೆದ ಮಾನಸಿಕ ಮತ್ತು ದೈಹಿಕ ಹಿಂಸೆಯ ಬಗ್ಗೆ ಇಂದೋರ್ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ನಂತರ ಪ್ರತೀಕಾರವಾಗಿ ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. “ಪ್ರತಿಕಾರವಾಗಿ, ಮಹಿಳೆ ನನ್ನ ಕಕ್ಷಿದಾರನೊಂದಿಗಿನ ವೈವಾಹಿಕ ಸಂಬಂಧವನ್ನು ಮರುಸ್ಥಾಪಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರು ಜಿಲ್ಲಾ ನ್ಯಾಯಾಲಯದಲ್ಲಿ ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಝರೋಲಾ ಹೇಳಿದ್ದಾರೆ.
ಇದನ್ನೂ ಓದಿ: ಇಂದೋರ್ ಸಿಟಿ ಕೌನ್ಸಿಲ್ ಸಭೆ: ನಾಯಿ ಪದಬಳಕೆಗೆ ಆಕ್ಷೇಪ; ಆದರಣೀಯ ಶ್ವಾನ್ ಜೀ ಎಂದು ಸಂಬೋಧಿಸಿದ ಕೌನ್ಸಿಲರ್
ಯುವ ಜೋಡಿ ಮದುವೆಯಾದ ಸ್ವಲ್ಪ ಸಮಯದ ನಂತರ, ಪತಿ ತನ್ನ ಪೋಷಕರ ಬಳಿಗೆ ಓಡಿಹೋಗಿದ್ದಾನೆ. ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅವನನ್ನು ಪತ್ತೆ ಮಾಡಿದರು. ಆದರೆ, ಆತ ತನ್ನ ಹೆಂಡತಿಯೊಂದಿಗೆ ವಾಸಿಸಲು ನಿರಾಕರಿಸಿದ್ದರಿಂದ ವಿಷಯವು ಕೌಟುಂಬಿಕ ನ್ಯಾಯಾಲಯಕ್ಕೆ ತಲುಪಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ