ಇಂದೋರ್ ಸಿಟಿ ಕೌನ್ಸಿಲ್ ಸಭೆ: ನಾಯಿ ಪದಬಳಕೆಗೆ ಆಕ್ಷೇಪ; ‘ಆದರಣೀಯ ಶ್ವಾನ್ ಜೀ’ಎಂದು ಸಂಬೋಧಿಸಿದ ಕೌನ್ಸಿಲರ್
ಇಂದೋರ್ನಲ್ಲಿ ಸಿಟಿ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ರುಬಿನಾ ಖಾನ್ ನಾಯಿ ದಾಳಿ ಪ್ರಕರಣ ಪ್ರಸ್ತಾಪಿಸಿದಾಗ ಕೆಲವು ಸದಸ್ಯರು ನಾಯಿ ಎಂಬ ಪದಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರುಬೀನಾ, ಸರಿ ನಾಯಿ ಎಂಬ ಪದ ಬಳಸುವುದಿಲ್ಲ. ಆದರಣೀಯ ಶ್ವಾನ್ ಜೀ ಎಂದೇ ನಾನು ಬಳಸುತ್ತೇನೆ ಎಂದು ತಮ್ಮ ಭಾಷಣದಲ್ಲಿ ಶ್ವಾನ್ ಜೀ ಎಂದು ಹೇಳಿದ್ದು ಸದನದಲ್ಲಿ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ
ಇಂದೋರ್ ಫೆಬ್ರುವರಿ20: ಇಂದೋರ್ನಲ್ಲಿ (Indore) ಸಿಟಿ ಕೌನ್ಸಿಲ್ ಸಭೆ ನಡೆಯುತ್ತಿತ್ತು. ಮೇಯರ್, ಕೌನ್ಸಿಲರ್ ಸೇರಿದಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ (Congress) ಕೌನ್ಸಿಲರ್ ರುಬಿನಾ ಖಾನ್ ನಾಯಿ ದಾಳಿ (Dog) ಪ್ರಕರಣ ಪ್ರಸ್ತಾಪಿಸಿದರು. ಸದ್ಯ ಈ ವಿಚಾರ ಮಧ್ಯಪ್ರದೇಶದ ಅತ್ಯಂತ ಗಂಭೀರ ಸಮಸ್ಯೆಯಾಗಿದ್ದರೂ ನಗರಸಭೆಯಲ್ಲಿ ರುಬಿನಾ ಖಾನ್ ಪದ ಬಳಕೆ ಕೇಳಿ ಸದಸ್ಯರೆಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ರುಬಿನಾ ತಮ್ಮ ಭಾಷಣದಲ್ಲಿ ನಾಯಿ ಎಂಬ ಪದ ಬಳಸಿದಾಗ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆ ನಂತರ ರುಬೀನಾ ನಾಯಿಗಳನ್ನು ಆದರಣೀಯ ಶ್ವಾನ್ ಜೀ (ಗೌರವಾನ್ವಿತ ನಾಯಿಯವರೇ) ಎಂದು ಹೇಳಿದ್ದಾರೆ. ರುಬೀನಾ ಭಾಷಣ ಮಾಡುತ್ತಿದ್ದಂತೆ ಸದನಕ್ಕೆ ಸದನವೇ ನಗೆಗಡಲಲ್ಲಿ ಮುಳುಗಿತ್ತು.
ನಾಯಿ ಪದಬಳಕೆ ಮಾಡಿದ ನಂತರ, ರುಬಿನಾ ಖಾನ್, ಸರಿ, ನಾನು ನಾಯಿಗಳಿಗೆ ಗೌರವವನ್ನು ನೀಡಬೇಕೆಂದು ನೀವು ಬಯಸುತ್ತೀರಿ. ಆದ್ದರಿಂದ ಕೇಳು, ಗೌರವಾನ್ವಿತ ನಾಯಿಯೇ, ನಮ್ಮ ವಾರ್ಡ್‌ನಲ್ಲಿ ಹಲವಾರು ಶ್ವಾನ್ ಜೀ ಇವೆ. ಇವುಗಳು ನಮಗೆ ತುಂಬಾ ತೊಂದರೆ ಕೊಡುತ್ತಿವೆ ಮೇಡಂ. ಇದರಿಂದ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗಿದೆ. ಅವರು ಲೇಡಿ ಶ್ವಾನ್ ಜೊತೆಗೂ ಸಂಬಂಧ ಹೊಂದಿದ್ದಾರೆ. ನಾಯಿಯ ಸಂತಾನಹರಣ ಮಾಡಿ ಅದೇ ವಾರ್ಡ್‌ನಲ್ಲಿ ಬಿಟ್ಟರೆ ಆಗದು ಎಂದು ಅವರು ಹೇಳಿದ್ದಾರೆ .
ನಾಯಿಗಾಗಿ ನಗರದ ಹೊರಗೆ ದೊಡ್ಡ ಭೂಮಿಯನ್ನು ಹುಡುಕುವುದು ಪರಿಹಾರವಾಗಿದೆ. ಅವರಿಗಾಗಿ ಅಲ್ಲಿ ಮನೆ ನಿರ್ಮಿಸಬೇಕು. ಇದರೊಂದಿಗೆ ಪ್ರಾಣಿ ಪ್ರಿಯರೂ ಅವುಗಳ ಆರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಪುಟ್ಟಣ್ಣಗೆ ಜಯ, ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಖಭಂಗ
ಮಧ್ಯಪ್ರದೇಶದ ಅನೇಕ ನಗರಗಳಿಂದ ಬೀದಿ ನಾಯಿ ದಾಳಿ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಅದರಲ್ಲೂ ಇಂದೋರ್, ಗ್ವಾಲಿಯರ್, ಜಬಲ್‌ಪುರ್ ಮತ್ತು ಭೋಪಾಲ್ ನಾಯಿಗಳ ಸಂತಾನಹರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ಆದರೆ, ಅಲ್ಲಿನ ವಾಸ್ತವವೇ ಬೇರೆ. ಮಹಾನಗರ ಪಾಲಿಕೆಯ ಕೌನ್ಸಿಲ್ ಸಮ್ಮೇಳನದಲ್ಲಿ ನಗರದ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಸಂತಾನಹರಣ ಮತ್ತು ನಾಯಿ ದಾಳಿ ತಡೆಯಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಪ್ರತಿಪಕ್ಷಗಳು ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದವು. ಆದರೆ, ಕಾಂಗ್ರೆಸ್ ಕೌನ್ಸಿಲರ್ ರುಬಿನಾ ಖಾನ್ ಭಾಷಣದಿಂದ ಸದನ ಗಂಭೀರ ವಿಷಯವನ್ನೂ ಕಾಮಿಡಿಯಾಗಿ ಸ್ವೀಕರಿಸುವಂತಾಯಿತು. ರುಬಿನಾ ಖಾನ್ ಅವರ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಂದಹಾಗೆ ಗೌರವ ಕೊಟ್ಟು ಶ್ವಾನ ಜೀ ಎಂದು ಕರೆದರೆ ನಾಯಿ ಕಚ್ಚಲ್ವಾ? ಎಂದು ನೆಟ್ಟಿಗರು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ