ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಪುಟ್ಟಣ್ಣಗೆ ಜಯ, ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಖಭಂಗ
Bangalore Teachers Constituency By Election Result: ಕರ್ನಾಟಕ ವಿಧಾನಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ನ ಪುಟ್ಟಣ್ಣ ಗೆಲುವಿನ ನಗೆ ಬೀರಿದ್ದಾರೆ. ಇದರೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಸೋಲುಕಂಡಿದ್ದು, ಮೈತ್ರಿಗೆ ಮೊದಲ ಚುನಾವಣೆಯಲ್ಲೇ ಹಿನ್ನೆಡೆಯಾಗಿದೆ.
ಬೆಂಗಳೂರು, (ಫೆಬ್ರವರಿ 20): ವಿಧಾನಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಫಲಿತಾಂಶ(Bangalore teachers constituency By Election Result) ಪ್ರಕಟವಾಗಿದ್ದು, ಕಾಂಗ್ರೆಸ್ನ ಪುಟ್ಟಣ್ಣ(Congress Candidate P Puttanna) ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಪುಟ್ಟಣ್ಣ, ಅಂತಿಮವಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಅವರನ್ನು 1,507 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ಕೇಕೆ ಹಾಕಿದರು. ಈ ಮೂಲಕ ಮೈತ್ರಿಯೊಂದಿಗೆ ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಹಾಗೂ ಜೆಡಿಎಸ್‌ಗೆ ಮುಖಭಂಗವಾಗಿದೆ.
ಇಂದು (ಫೆಬ್ರವರಿ 20) ಬೆಂಗಳೂರಿನ ನೃಪತುಂಗ ರಸ್ತೆಯ ಸರ್ಕಾರಿ ಕಲಾ ಕಾಲೇಜಿನಲ್ಲಿ ಮತಎಣಿಕೆ ನಡೆದಿದ್ದು, ಕಾಂಗ್ರೆಸ್ನ ಪುಟ್ಟಣ್ಣ ಒಟ್ಟು 8,260 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಪಿ ರಂಗನಾಥ್ ಅವರಿಗೆ ಒಟ್ಟು 6753 ಮತಗಳು ಬಿದ್ದಿವೆ. ಇನ್ನು 1239 ಮತಗಳು ತಿರಸ್ಕೃತಗೊಂಡಿವೆ. ಇದರೊಂದಿಗೆ ಪುಟ್ಟಣ್ಣ, 1507 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪುಟ್ಟಣ್ಣ ಅವರ ಅಧಿಕಾರವಧಿ 2026, ನವೆಂಬರ್ 11ರ ವರೆಗೆ ಇರಲಿದೆ.
ಇದೇ ಪುಟ್ಟಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ಶಿಕ್ಷಕ ಕ್ಷೇತ್ರಕ್ಕೆ ಇದೇ ಫೆಬ್ರವರಿ 16ರಂದು ಉಪಚುನಾವಣೆ ನಡೆದಿತ್ತು. ವಿಧಾನ ಪರಿಷತ್ ಸದಸ್ಯರಾಗಿದ್ದ, ಬಿಜೆಪಿಯಲ್ಲಿದ್ದ ಪುಟ್ಟಣ್ಣ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಕಾರಣಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಈ ಉಪ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು. ಅದರಂತೆ ಜೆಡಿಎಸ್ನ ರಂಗನಾಥ್ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದ್ರೆ, ಮೊದಲ ಚುನಾವಣೆಯಲ್ಲೇ ಮೈತ್ರಿಗೆ ಸೋಲಾಗಿದೆ.
ಇನ್ನು ಕರ್ನಾಟಕದ ವಿಧಾನಸಭೆ ಚುನಾವಣೆ 2023ರಲ್ಲಿ ಕಣಕ್ಕಿಳಿಯಲು ಪುಟ್ಟಣ್ಣ ಬಿಜೆಪಿ ತೊರೆದಿದ್ದರು. ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಸೇರಿದ್ದ ಅವರು ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ರಾಜಾಜಿನಗರ ಕ್ಷೇತ್ರದಲ್ಲಿ ಪುಟ್ಟಣ್ಣ 50564 ಮತಗಳನ್ನು ಪಡೆದು, ಬಿಜೆಪಿಯ ಅಭ್ಯರ್ಥಿ ಎಸ್. ಸುರೇಶ್ ಕುಮಾರ್ (58624 ಮತಗಳು) ವಿರುದ್ಧ ಸೋಲು ಕಂಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾದ ಬಳಿಕ ಪುಟ್ಟಣ್ಣಗೆ ಟಿಕೆಟ್ ನೀಡಿತ್ತು. ಇದೀಗ ಪುಟ್ಟಣ್ಣ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.
ಇದು ಬಿಜೆಪಿ-ಜೆಡಿಎಸ್ ಸೋಲು ಅಲ್ಲ ಎಂದ ರಂಗನಾಥ್
ಇನ್ನು ಫಲಿತಾಂಶದ ಬಗ್ಗೆ ಪರಾಜಿತ ಮೈತ್ರಿ ಅಭ್ಯರ್ಥಿ ರಂಗನಾಥ್ ಮಾತನಾಡಿ, ಇದು ಭಾರತೀಯ ಜನತಾ ಪಾರ್ಟಿ, ಜೆಡಿಎಸ್ ಮೈತ್ರಿಗೆ ಆದ ಸೋಲಲ್ಲ. ಇದು ನನ್ನ ವೈಯಕ್ತಿಕ ಸೋಲು. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಡಿಡಿಪಿಐ, ಬಿಇಒಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತಮ್ಮ ಕೆಲಸ ಮಾಡಿಸಿಕೊಂಡಿದ್ದಾರೆ. ಹಣ ದುರುಪಯೋಗ ಮಾಡಿಕೊಂಡು ಗೆಲವು ಪಡೆದಿದ್ದಾರೆ ಎಂದು ಆರೋಪಿಸಿದರು.
ಗೆಲುವಿನ ಬಳಿಕ ಪುಟ್ಟಣ್ಣ ಹೇಳಿದ್ದೇನು?
ಇನ್ನು ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುಟ್ಟಣ್ಣ, ಕಳೆದ ಮೂರು ಬಾರಿಯಿಂದ ಮೊದಲ ರೌಂಡ್ ನಿಂದಲೇ ಗೆಲ್ಲುತ್ತಿದ್ದೇನೆ. ಸಮಸ್ತ ಶಿಕ್ಷಕ ಸಮುದಾಯಕ್ಕೆ ಗೆಲುವು ಅರ್ಪಿಸುತ್ತೇನೆ. ಶಿಕ್ಷಕ ಸಮುದಾಯದ ಹಿತ ಕಾಯುವಂತ ಕೆಲಸ ಮಾಡುತ್ತೇನೆ. ನಂಬಿಕೆ ಉಳಿಸಿಕೊಂಡು ಕೆಲಸ ಮಾಡಿದ್ದೇನೆ. ಕಾರ್ಯಕರ್ತರು ಓಟು ಇದಲ್ಲ, ಶಿಕ್ಷಕರ ಓಟು ಇದು. ಸೋತಿರುವವರು ಪಾಪ ಆರೋಪ ಮಾಡಲೇಬೇಕು. ಅವರ ಮನಸ್ಸಿಗೆ ಸಾಂತ್ವನ ಹೇಳಿಕೊಳ್ಳಬೇಕು ಅದಕ್ಕಾಗಿ ಹೇಳಿದ್ದಾರೆ. ಚುನಾವಣೆ ಸೋತೂ ಸೋತೂ ಸೋತು ಕೊನೆಗೆ ಅವರು ಒಮ್ಮೆ ಲಾಯರ್ ಚುನಾವಣೆ ಗೆದ್ದಿದ್ದರು. ನನ್ನನ್ನು ಸೋಲಿಸಲೇಬೇಕು ಅಂತ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ಆದರೂ ಶಿಕ್ಷಕರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮೈತ್ರಿ ಅಭ್ಯರ್ಥಿಯನ್ನು ಶಿಕ್ಷಕರೇ ರಿಜೆಕ್ಟ್ ಮಾಡಿದ್ದಾರೆ. ನಾವ್ಯಾರು ಇದು ಮುಂದಿನ ಚುನಾವಣೆಗೆ ದಿಕ್ಸೂಚಿ ಅಂತ ಹೇಳುತ್ತಿರಲಿಲ್ಲ. ಅವರೇ ಹೇಳುತ್ತಿದ್ದರು ಅಲ್ವಾ ದಿಕ್ಸೂಚಿ ಅಂತ. ಎಜುಕೇಟೆಡ್ ಆದ ಶಿಕ್ಷಕರೇ ಮೈತ್ರಿ ಅಭ್ಯರ್ಥಿಯನ್ನ ರಿಜೆಕ್ಟ್ ಮಾಡಿದ್ದಾರೆ ಎಂದು ಟಾಂಗ್ ಕೊಟ್ಟರು.
Published On - 5:20 pm, Tue, 20 February 24