ಮುಂಬೈ: ಸಾಂಕ್ರಾಮಿಕವಾಗಿ ಹರಡುತ್ತಿರುವ ದಡಾರ ಕಾಯಿಲೆಯಿಂದಾಗಿ (Measles Mayhem) ಮುಂಬೈನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದಡಾರ ರುಬೆಲ್ಲಾ ಎಂದು ಗುರುತಿಸಲಾಗಿರುವ ಈ ರೋಗದಿಂದ ಕಳೆದ 48 ಗಂಟೆಗಳಲ್ಲಿ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ 84 ಜನರಿಗೆ ಈ ಸೋಂಕು ತಗುಲಿದೆ. ದಡಾರ ಕಾಯಿಲೆ ಇದೊಂದು ವೇಗವಾಗಿ ಹರಡುವ ಸೋಂಕು. ಇದು ಪ್ಯಾರಾಮಿಕ್ಸೊವೈರಸ್ ಕುಟುಂಬದ ವೈರಸ್ ನಿಂದ ಉಂಟಾಗುತ್ತದೆ. ಈ ವೈರಸ್ ಮೊದಲು ಉಸಿರಾಟದ ಪ್ರದೇಶಕ್ಕೆ ಧಕ್ಕೆ ಮಾಡುತ್ತದೆ. ಕೆಮ್ಮು, ಶೀತ ಅಥವಾ ನೇರ ಸ್ಪರ್ಶದಿಂದ ಆರೋಗ್ಯವಂತ ಜನರಿಗೆ ಈ ಸೋಂಕು ತಗುಲುತ್ತದೆ.
ಸುಮಾರು ಶೇ. 50ರಷ್ಟು ಮಕ್ಕಳಿಗೆ ದಡಾರ ಲಸಿಕೆ ನೀಡಲಾಗಿದೆ. ಅದರಲ್ಲಿ ಕೆಲವು ಮಕ್ಕಳು 9 ತಿಂಗಳಿಗಿಂತ ಕಡಿಮೆ ವಯಸ್ಸಿನಲ್ಲೇ ಮೊದಲ ದಡಾರ ಲಸಿಕೆ ಪಡೆದಿದ್ದಾರೆ. ಅಕ್ಟೋಬರ್ ವರೆಗೆ ಮುಂಬೈನ ಧಾರಾವಿ, ಗೋವಂಡಿ, ಕುರ್ಲಾ, ಮಾಹಿಮ್, ಬಾಂದ್ರಾ ಮತ್ತು ಮಾಟುಂಗಾದಲ್ಲಿನ ಕೊಳೆಗೇರಿ ಪಾಕೆಟ್‌ಗಳಿಂದ ಹಲವಾರು ದಡಾರ ಪ್ರಕರಣಗಳು ದಾಖಲಾಗಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದಡಾರದ ಲಕ್ಷಣಗಳೇನು?:
ದಡಾರ ಚಿಕ್ಕ ಮಕ್ಕಳಿಗೆ ತಗುಲುವ ತುಂಬಾ ಅಪಾಯಕಾರಿ ಸೋಂಕು ಆಗಿದೆ. ಈ ಸೋಂಕು ತಗುಲಿದ ನಂತರ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ 104 ಡಿಗ್ರಿಯವರೆಗೆ ಅಧಿಕ ಜ್ವರ, ಕೆಮ್ಮು, ಶೀತ, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳು ಮುಖ್ಯವಾದುವು. ದಡಾರದ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ಸೋಂಕಿತ ಮಗುವಿನಲ್ಲಿ 2ರಿಂದ 3 ದಿನಗಳ ನಂತರ ಬಾಯಿಯೊಳಗೆ ಸಣ್ಣ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕೆಂಪು-ಫ್ಲಾಟ್ ರಾಶ್ 3ರಿಂದ 5 ದಿನಗಳಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗದ ಮೇಲೆ ದಡಾರದ ಗುಳ್ಳೆಗಳು ಉಂಟಾಗುತ್ತದೆ.
ಇದನ್ನೂ ಓದಿ: ಮಕ್ಕಳ ಒಂದು ವರ್ಷ ವಯಸ್ಸಿನ ನಂತರ ಮಕ್ಕಳಿಗೆ ನೀಡಬೇಕಾದ ಲಸಿಕೆಗಳು ಇಲ್ಲಿವೆ: ಇದನ್ನು ಪೋಷಕರು ತಿಳಿದಿರಬೇಕು
ದಡಾರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ:
ದಡಾರ ಕಾಯಿಲೆ ತಡೆಗಟ್ಟುವ ಏಕೈಕ ಮಾರ್ಗವೆಂದರೆ ದಡಾರ ಲಸಿಕೆ ಹಾಕುವುದು. ದಡಾರದಿಂದ ಮಕ್ಕಳನ್ನು ರಕ್ಷಿಸಲು, ಅವರಿಗೆ 2 ಬಾರಿ ದಡಾರ ಲಸಿಕೆ ನೀಡಲಾಗುತ್ತದೆ. ಏಕೆಂದರೆ ದಡಾರಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಹಾಗಾಗಿ ದಡಾರ ಕಾಣಿಸಿಕೊಂಡ ನಂತರ ಅದರ ರೋಗಲಕ್ಷಣಗಳನ್ನು ನಿಯಂತ್ರಿಸಲು ಮಾತ್ರ ಸಾಧ್ಯವೇ ಹೊರತು ಸೂಕ್ತ ಚಿಕಿತ್ಸೆ ಇಲ್ಲ.
ಹೀಗಾಗಿ, ಮಗುವಿಗೆ ದಡಾರ ರೋಗ ಕಾಣಿಸಿಕೊಂಡ ನಂತರ ವಿಶ್ರಾಂತಿ ನೀಡುವುದು, ಮಗುವನ್ನು ಇತರೆ ಮಕ್ಕಳ ಜೊತೆ ಸೇರದಂತೆ ನೋಡಿಕೊಳ್ಳುವುದು, ಆಗಾಗ ನೀರು ಮತ್ತು ಜ್ಯೂಸ್ ಕುಡಿಸುವುದು, ಒದ್ದೆ ಬಟ್ಟೆಯಿಂದ ಮಗುವಿನ ದೇಹ ಸ್ವಚ್ಛಗೊಳಿಸುವುದು, ವೈದ್ಯರ ಸಲಹೆ ಮೇರೆಗೆ ಜ್ವರದ ಔಷಧ ನೀಡುವುದು, ಶುಚಿತ್ವ ಕಾಪಾಡುವುದು, ಆ ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು ಅತ್ಯಗತ್ಯ.
ಇಲ್ಲಿಯವರೆಗೆ, ದಡಾರಕ್ಕೆ ಸಂಬಂಧಿಸಿದ ನಾಲ್ಕು ಸಾವುಗಳು ವರದಿಯಾಗಿವೆ. ಅಕ್ಟೋಬರ್‌ನಲ್ಲಿ ಒಬ್ಬರು ಮೃತಪಟ್ಟರೆ, 2 ದಿನಗಳ ಅಂತರದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಈ ಮೃತ ಮಕ್ಕಳಾದ ಹಸ್ನೈನ್ (5), ನೂರೇನ್ (3.5) ಮತ್ತು ಫಾಜಲ್ ಖಾನ್ (13 ತಿಂಗಳು) ಗೋವಂಡಿಯ ರಫಿ ನಗರದ ಒಂದೇ ಕುಟುಂಬದವರಾಗಿದ್ದಾರೆ.
ಇದನ್ನೂ ಓದಿ: MonkeyPox: ಮಂಕಿಪಾಕ್ಸ್ ರೋಗಿಗಳಿಗೆ ಆಯುರ್ವೇದ ವೈದ್ಯರು ನೀಡಿದ ಸಲಹೆಗಳು ಇಲ್ಲಿವೆ
ಭಾರತವು 2017ರಲ್ಲಿ ದಡಾರ ಮತ್ತು ರುಬೆಲ್ಲಾವನ್ನು ತೊಡೆದುಹಾಕಲು 9 ತಿಂಗಳಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಒಂದು ಬಾರಿ ರೋಗನಿರೋಧಕ ಲಸಿಕೆಯ ಅಭಿಯಾನವನ್ನು ಪ್ರಾರಂಭಿಸಿತು. ಕಳೆದ ಮೇ ತಿಂಗಳಲ್ಲಿ ಸರ್ಕಾರವು 2023ರ ಅಂತ್ಯದ ವೇಳೆಗೆ ದಡಾರವನ್ನು ತೊಡೆದುಹಾಕಲು ರಾಷ್ಟ್ರೀಯ ಕಾರ್ಯತಂತ್ರದ ಯೋಜನೆಯನ್ನು ಅಳವಡಿಸಿಕೊಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪ್ರಕರಣಗಳ ಉಲ್ಬಣವನ್ನು ಪತ್ತೆಹಚ್ಚಲು ನಗರದಲ್ಲಿ ಉನ್ನತ ಮಟ್ಟದ ಬಹು-ಶಿಸ್ತಿನ ತಂಡವನ್ನು ನಿಯೋಜಿಸಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಾದೇಶಿಕ ಕಚೇರಿ, ಪುಣೆಯ ತಜ್ಞರನ್ನು ಒಳಗೊಂಡ ಮೂವರು ಸದಸ್ಯರ ತಂಡವು ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.