ಚೆನ್ನೈ: ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಕರ್ನಾಟಕ ಸರ್ಕಾರ ರಾಮನಗರದ ಮೇಕೆದಾಟು (Mekedatu Project) ಎಂಬಲ್ಲಿ ಕಾವೇರಿ ನದಿಗೆ ಸಣ್ಣ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಘೋಷಿಸಿದೆ. ಇದಕ್ಕೆ ನೆರೆಯ ರಾಜ್ಯವಾದ ತಮಿಳುನಾಡಿನಿಂದ (Tamil Nadu) ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮೇಕೆದಾಟು ಯೋಜನೆಯ ಬಗ್ಗೆ ಚರ್ಚಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಇಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಒಂದುವೇಳೆ ಕರ್ನಾಟಕದ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣವಾದರೆ ತಮಿಳುನಾಡಿಗೆ ಅದರಿಂದ ಯಾವೆಲ್ಲ ಸಮಸ್ಯೆಗಳು ಎದುರಾಗಲಿವೆ, ಇದರ ವಿರುದ್ಧ ಯಾವ ರೀತಿಯಾಗಿ ಕಾನೂನು ಹೋರಾಟ ಮಾಡಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ತಮಿಳುನಾಡಿನ ಎಲ್ಲ ಪಕ್ಷಗಳ ನಾಯಕರ ಜೊತೆ ಸಿಎಂ ಸ್ಟಾಲಿನ್ ಇಂದು ಸಭೆ ನಡೆಸುತ್ತಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆ ಮಾಡಲು 2008ರಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಘೋಷಿಸಿತ್ತು. ಇದರಿಂದ ತಮಿಳುನಾಡಿಗೆ ಹರಿದುಹೋಗುವ ಕಾವೇರಿ ನದಿ ನೀರಿನ ಪ್ರಮಾಣ ಕಡಿಮೆಯಾಗಲಿದೆ. ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕೃಷಿಗೆ ಕಾವೇರಿ ನದಿ ನೀರನ್ನೇ ಅವಲಂಬಿಸಿರುವುದರಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕಿತ್ತು.
ಏನಿದು ಮೇಕೆದಾಟು ಯೋಜನೆ?:
ರಾಮನಗರದ ಬಳಿ ಇರುವ ಮೇಕೆದಾಟು ಎಂಬಲ್ಲಿ ಸಣ್ಣದಾದ ಅಣೆಕಟ್ಟನ್ನು ನಿರ್ಮಿಸಿ, ಸುಮಾರು 65ರಿಂದ 66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಉದ್ದೇಶ ಕರ್ನಾಟಕ ಸರ್ಕಾರದ್ದು. 2008ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ಮೇಕೆದಾಟುವಿನಲ್ಲಿ ಈ ಡ್ಯಾಂ ನಿರ್ಮಿಸಿದರೆ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾಧ್ಯವೆಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಹಾಗೇ, ಇದರಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಚೆನಯೂ ಇತ್ತು. ಕೆಆರ್ಎಸ್, ಕಬಿನಿ ಜಲಾಶಯಗಳಿಂದ ಹರಿಯುವ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಈ ಮೇಕೆದಆಟು ಯೋಜನೆಯಿಂದ ಅನುಕೂಲವಾಗಲಿದೆ ಎಂದು 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.
ಕರ್ನಾಟಕ ಮೇಕೆದಾಟು ಅಣೆಕಟ್ಟು ಕಟ್ಟಿದರೆ ಕಾವೇರಿ ನೀರಿನ 67 ಟಿಎಂಸಿ ನೀರು ಸಂಗ್ರಹಣೆಯಾಗಿ ತಮಿಳುನಾಡಿಗೆ ನೀರಿನ ಹರಿಯುವಿಕೆಗೆ ತಡೆಯಾಗುತ್ತದೆ. ತಮಿಳು ನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಭತ್ತ ಇಳುವರಿ ಬೆಳೆಯಲು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಕರ್ನಾಟಕ ಕಾವೇರಿ ನದಿಗೆ ಮೇಕೆದಾಟಿನಲ್ಲಿ ಅಣೆಕಟ್ಟು ಕಟ್ಟಿದರೆ ತಮಿಳು ನಾಡಿನ ಜನರಿಗೆ ವ್ಯವಸಾಯಕ್ಕೆ ನೀರಿಗೆ ಸಮಸ್ಯೆಯಾಗುತ್ತದೆ ಎಂಬುದು ತಮಿಳುನಾಡು ಸರ್ಕಾರದ ವಾದ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ತಡೆಯೊಡ್ಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ತಮಿಳು ನಾಡು ಸರ್ಕಾರ ಪ್ರಯತ್ನಿಸುತ್ತಿದೆ.
ಈ ವಿಚಾರವಾಗಿ ಜುಲೈ 7ರಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು. ಬೆಂಗಳೂರಿನ ಕುಡಿಯುವ ನೀರಿನ ಯೋಜನೆಗಾಗಿ ರೂಪಿಸಿದ್ದ ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆಗೆ ಪತ್ರ ಬರೆದು ಒಪ್ಪಿಗೆ ಪಡೆದಿದೆ. ರಾಷ್ಟ್ರೀಯ ಜಲ ನೀತಿಯಲ್ಲೂ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲು ಕೆಲವು ರಿಯಾಯಿತಿಗಳಿವೆ.
ಆದರೆ, ಹೇಗಾದರೂ ಮಾಡಿ ಮೇಕೆದಾಟು ಯೋಜನೆಗೆ ತಡೆಯೊಡ್ಡಬೇಕೆಂದು ತಮಿಳುನಾಡು ಸರ್ಕಾರ ಶತಾಯಗತಾಯ ಪ್ರಯತ್ನ ನಡೆಸಿದೆ. ಚುನಾವಣೆ ಪ್ರಚಾರದಲ್ಲೂ ತಮಿಳುನಾಡಿನ ರಾಜಕಾರಣಿಗಳು ಪ್ರತಿ ಬಾರಿ ಕಾವೇರಿ ವಿಚಾರವನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುವುದು ಹೊಸ ವಿಚಾರವೇನಲ್ಲ. ಕಾವೇರಿ ನದಿ ನೀರು ಹಂಚಿಕೆ ವಿಚಾರ ರಾಜಕೀಯವಾಗಿಯೂ ಬಹಳ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ, ತಮಿಳುನಾಡಿನ ಎಲ್ಲ ಶಾಸಕಾಂಗ ಪಕ್ಷಗಳ ನಾಯಕರ ಬೆಂಬಲ ಪಡೆದು ಮೇಕೆದಾಟು ಯೋಜನೆ ವಿರುದ್ಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸಿಎಂ ಎಂ.ಕೆ. ಸ್ಟಾಲಿನ್ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಸರ್ವಪಕ್ಷ ಸಭೆ ಭಾರೀ ಕುತೂಹಲ ಮೂಡಿಸಿದೆ.
Published On - 12:39 pm, Mon, 12 July 21