ಮಧ್ಯಪ್ರಾಚ್ಯದಿಂದ ಭಾರತೀಯರ ಕರೆತರಲು ಕೇಂದ್ರದಿಂದ ವಿಶೇಷ ಕಾರ್ಯಾಚರಣೆ, ತೆರಳಲಿವೆ 10 ಇಂಡಿಗೋ ವಿಮಾನ

Israel-Iran War: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ, ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಸೂಚನೆ ಮೇರೆಗೆ, 10 ಇಂಡಿಗೋ ವಿಮಾನಗಳು ಮಂಗಳವಾರ ಜೆದ್ದಾಗೆ ತೆರಳಿ ಭಾರತೀಯರನ್ನು ಕರೆತರಲಿವೆ. ಪರ್ಯಾಯ ವಾಯುಮಾರ್ಗಗಳ ಮೂಲಕ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಧ್ಯಪ್ರಾಚ್ಯದಿಂದ ಭಾರತೀಯರ ಕರೆತರಲು ಕೇಂದ್ರದಿಂದ ವಿಶೇಷ ಕಾರ್ಯಾಚರಣೆ, ತೆರಳಲಿವೆ 10 ಇಂಡಿಗೋ ವಿಮಾನ
ಇಂಡಿಗೋ ವಿಮಾನಗಳು (ಸಾಂದರ್ಭಿಕ ಚಿತ್ರ)
Image Credit source: TV9 Network

Updated on: Mar 03, 2026 | 7:46 AM

ನವದೆಹಲಿ, ಮಾರ್ಚ್ 3: ಇರಾನ್-ಇಸ್ರೇಲ್ ಯುದ್ಧದ (Israel-Iran War) ಕಾರಣ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿವಿಧೆಡೆ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಸಂಭಾವ್ಯ ವಾಯುಪ್ರದೇಶಗಳ ಮೂಲಕ ಭಾರತೀಯರನ್ನು ಕರೆತರಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂಡಿಗೋ (IndiGo) ಏರ್​ಲೈನ್ಸ್​ನ 10 ವಿಶೇಷ ವಿಮಾನಗಳು ಮಂಗಳವಾರ ಜೆದ್ದಾಗೆ ತೆರಳಿ ಭಾರತೀಯರನ್ನು ಕರೆತರಲು ಉದ್ದೇಶಿಸಿವೆ ಎಂದು ಸಚಿವಾಲಯ ತಿಳಿಸಿದೆ.

ಜೆದ್ದಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಇಂಡಿಗೋ ಸಂಪರ್ಕದಲ್ಲಿದೆ. ಯಾವ ವಾಯುಮಾರ್ಗದ ಮೂಲಕ ಕಾರ್ಯಾಚರಣೆ ನಡೆಸಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅಲ್ಲಿ ಸಿಲುಕಿರುವ ಪ್ರಯಾಣಿಕರ ಸುರಕ್ಷಿತ ವಾಪಸಾತಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ವಿಮಾನಗಳನ್ನು ಕಳುಹಿಸಲಾಗುವುದು. ವಿದೇಶಿ ವಿಮಾನಯಾನ ಸಂಸ್ಥೆಗಳು ಮತ್ತು ಭಾರತೀಯ ದೂತಾವಾಸ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪರ್ಯಾಯ ವಾಯುಮಾರ್ಗಗಳ ಮೂಲಕ ವಿಮಾನ ಸಂಚಾರ

ನಿರ್ಬಂಧಿತ ವಾಯುಪ್ರದೇಶದ ಬದಲಿಗೆ ಪರ್ಯಾಯ ಮಾರ್ಗಗಳ ಮೂಲಕ ದೀರ್ಘ ಹಾಗೂ ಅತಿ ದೀರ್ಘ ದೂರದ ವಿಮಾನ ಸೇವೆಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಮಾನಗಳು ಮತ್ತು ಸಿಬ್ಬಂದಿಯ ಮರುಸ್ಥಾಪನೆ ಕಾರ್ಯವೂ ಪ್ರಗತಿಯಲ್ಲಿ ಇದೆ ಎಂದು ಸಚಿವಾಲಯ ತಿಳಿಸಿದೆ.

ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ವಿದೇಶಿ ವಿಮಾನ ಸಂಸ್ಥೆಗಳೂ ಮಿತ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಪ್ರಯಾಣಿಕರೊಂದಿಗೆ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳುವಂತೆ ಸೂಚಿಸಲಾಗಿದೆ. ರೀಫಂಡ್, ಪ್ರಯಾಣದ ಸಮಯ ಮರುನಿಗದಿ ಸೇರಿದಂತೆ ನಿಯಮಾನುಸಾರ ಸೇವೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನಗಳ ಸ್ಥಿತಿಯನ್ನು ಸಂಬಂಧಿತ ವಿಮಾನಯಾನ ಸಂಸ್ಥೆಗಳ ಅಧಿಕೃತ ಮೂಲಗಳಿಂದ ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್​​: MLC ಭೋಜೇಗೌಡ, ಬ್ಯಾಡಿಂಟ್ಮನ್ ತಾರೆ​​​ ಪಿವಿ ಸಿಂಧು ಸೇರಿ ಹಲವರು ಬೆಂಗಳೂರಿಗೆ

ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಯಿತು. ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಚಿವಾಲಯ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us