ಬಹಿರಂಗವಾಗಿ ಕ್ಷಮೆ ಕೇಳಿ; ರ‍್ಯಾಲಿಯಲ್ಲಿ ‘ಮೋದಿ ಸಮಾಧಿ’ ಘೋಷಣೆ ಕೂಗಿದ ಕಾಂಗ್ರೆಸ್ ವಿರುದ್ಧ ಕಿರಣ್ ರಿಜಿಜು ಆಕ್ರೋಶ

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿವಾದಾತ್ಮಕ ಘೋಷಣೆಗಳನ್ನು ಕೂಗಲಾಗಿತ್ತು. ಮೋದಿ ಸಮಾಧಿ ಅಗೆಯಬೇಕು ಎಂಬೆಲ್ಲ ಘೋಷಣೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಕೂಗಿದ್ದರು. ಹೀಗಾಗಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.

ಬಹಿರಂಗವಾಗಿ ಕ್ಷಮೆ ಕೇಳಿ; ರ‍್ಯಾಲಿಯಲ್ಲಿ ಮೋದಿ ಸಮಾಧಿ ಘೋಷಣೆ ಕೂಗಿದ ಕಾಂಗ್ರೆಸ್ ವಿರುದ್ಧ ಕಿರಣ್ ರಿಜಿಜು ಆಕ್ರೋಶ
Kiren Rijiju

Updated on: Dec 15, 2025 | 4:45 PM

ನವದೆಹಲಿ, ಡಿಸೆಂಬರ್ 15: ಭಾನುವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮೆಗಾ ‘ವೋಟ್ ಚೋರಿ’ ರ‍್ಯಾಲಿಯಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಇದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್​​ನಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿ ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಕಿರಣ್ ರಿಜಿಜು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಹಿರಿಯ ನಾಯಕರು ಇದ್ದಾಗಲೇ ಮೋದಿಯವರ ವಿರುದ್ಧ ಈ ರೀತಿಯ ಘೋಷಣೆಗಳನ್ನು ಕೂಗಿದ್ದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ಕಾಂಗ್ರೆಸ್​​ ಹೋರಾಟ: ದೆಹಲಿಯಲ್ಲಿ ಪ್ರತಿಧ್ವನಿಸಿದ ಆಳಂದ ಕ್ಷೇತ್ರದ ಮತಗಳ್ಳತನ

“ನಾವು ಶತ್ರುಗಳಲ್ಲ, ಕೇವಲ ಪ್ರತಿಸ್ಪರ್ಧಿಗಳು ಎಂಬುದನ್ನು ಯಾರೂ ಮರೆಯಬಾರದು. 2014ರಲ್ಲಿ ಬಿಜೆಪಿ ಸಂಸದರೊಬ್ಬರು ಪ್ರತಿಪಕ್ಷಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಚುನಾಯಿತ ಪ್ರತಿನಿಧಿಗಳಾದ ನಾವು ಆ ರೀತಿಯ ಹೇಳಿಕೆ ನೀಡಬಾರದು ಎಂದು ಪ್ರಧಾನಿ ಮೋದಿ ತಕ್ಷಣವೇ ಕ್ಷಮೆ ಯಾಚಿಸಲು ಆ ಸಂಸದರಿಗೆ ಸೂಚಿಸಿದ್ದರು. ಆದರೆ, ನಿನ್ನೆ ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಮೋದಿಯ ಸಮಾಧಿಯನ್ನು ಅಗೆಯಬೇಕೆಂದು ಘೋಷಣೆ ಕೂಗಲಾಯಿತು. ಇದು ಆತಂಕಕಾರಿ ಮತ್ತು ಕಳವಳಕಾರಿ ಸಂಗತಿ” ಎಂದು ಕಿರಣ್ ರಿಜಿಜು ಆಕ್ಷೇಪಿಸಿದ್ದಾರೆ.


ಇದನ್ನೂ ಓದಿ: ದೆಹಲಿಯಲ್ಲಿ ದಟ್ಟ ಮಂಜು, ಸರಿಯಾದ ಸಮಯಕ್ಕೆ ತಲುಪದ ವಿಮಾನ, ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಳಂಬ

“ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಪ್ರಧಾನಿ ಮೋದಿ ವಿಶ್ವದ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಾರೆ. ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕ. ಕಾಂಗ್ರೆಸ್ ನಾಯಕರು ಈ ವರ್ತನೆಗೆ ತಕ್ಷಣ ಕ್ಷಮೆಯಾಚಿಸಬೇಕು” ಎಂದು ಅವರು ಹೇಳಿದರು. ರಾಜಕೀಯ ಭಿನ್ನಾಭಿಪ್ರಾಯಗಳು ಎಂದಿಗೂ ವೈಯಕ್ತಿಕ ಬೆದರಿಕೆಗಳು ಅಥವಾ ಹಿಂಸಾಚಾರಕ್ಕೆ ತಿರುಗಬಾರದು ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ