ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ

ಮಿರ್ಜಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿಮೆಂಟ್ ಲಾರಿಯ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದೆ. ನಿದ್ರೆಯಲ್ಲಿದ್ದ ಒಂದೇ ಕುಟುಂಬದ ರಾಜಾರಾಮ್, ಸುಖಿಯಾ, ಚಂದತಾರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದುರಂತ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ
ಟ್ರಕ್

Updated on: Jul 16, 2026 | 9:31 AM

ಮಿರ್ಜಾಪುರ, ಜುಲೈ 16: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತ(Accident)ದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಿಮೆಂಟ್ ತುಂಬಿದ ಲಾರಿಯೊಂದು ಚಲಿಸುತ್ತಿರುವಾಗಲೇ ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ್ದರಿಂದ ಈ ಘೋರ ದುರಂತ ಸಂಭವಿಸಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಸಿಮೆಂಟ್ ಚೀಲಗಳನ್ನು ಹೊತ್ತ ಟ್ರಕ್ ವಾರಾಣಸಿಯಿಂದ ಸೋನಭದ್ರಕ್ಕೆ ವೇಗವಾಗಿ ಪ್ರಯಾಣಿಸುತ್ತಿತ್ತು. ಮಿರ್ಜಾಪುರ ಜಿಲ್ಲೆಯ ಹೆದ್ದಾರಿ ಬಳಿ ತಲುಪುತ್ತಿದ್ದಂತೆ ಲಾರಿಯ ಒಂದು ಟೈರ್ ಹಠಾತ್ತನೆ ಸ್ಫೋಟಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ದೈತ್ಯ ಟ್ರಕ್, ನೇರವಾಗಿ ರಸ್ತೆ ಪಕ್ಕದಲ್ಲಿದ್ದ ಮನೆಯೊಳಗೆ ನುಗ್ಗಿದೆ.

ಗಾಢ ನಿದ್ರೆಯಲ್ಲಿದ್ದಾಗಲೇ ನಜ್ಜುಗುಜ್ಜಾದ ಜೀವಗಳು
ಅಪಘಾತ ಸಂಭವಿಸಿದಾಗ ಮುಂಜಾನೆ ಸಮಯವಾಗಿದ್ದರಿಂದ ಮನೆಯ ಸದಸ್ಯರೆಲ್ಲರೂ ಗಾಢ ನಿದ್ರೆಯಲ್ಲಿದ್ದರು. ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ಮನೆಗೆ ಡಿಕ್ಕಿ ಹೊಡೆದ ರಭಸಕ್ಕೆ ಗೋಡೆಗಳು ಕುಸಿದು ಬಿದ್ದಿದ್ದು, ಮಲಗಿದ್ದವರ ಮೇಲೆಯೇ ಲಾರಿ ಹರಿದಿದೆ.

ಘಟನೆಯಲ್ಲಿ ರಾಜಾರಾಮ್ (47), ಸುಖಿಯಾ (70) ಮತ್ತು ಚಂದತಾರಾ (45) ಎಂಬುವವರು ಲಾರಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಎರಡು ಟ್ರಕ್​ಗಳ ನಡುವೆ ಸಿಲುಕಿ ಪಿಕಪ್ ವ್ಯಾನ್ ನಜ್ಜುಗುಜ್ಜು, ಮದುವೆ ಮನೆಯಿಂದ ಬರುತ್ತಿದ್ದ 13 ಮಂದಿ ಸಾವು

ಇಬ್ಬರಿಗೆ ಗಂಭೀರ ಗಾಯ: ಅಪಘಾತದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಟ್ರಾಮಾ ಸೆಂಟರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಡಿಯೋ

ಕ್ರೇನ್ ಮೂಲಕ ಟ್ರಕ್ ಹೊರಕ್ಕೆ
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಲಾರಿ ಸಂಪೂರ್ಣವಾಗಿ ಮನೆಯೊಳಗೆ ಸಿಲುಕಿಕೊಂಡಿತ್ತು. ನಂತರ ಪೊಲೀಸರು ಭಾರಿ ಗಾತ್ರದ ಕ್ರೇನ್ ಯಂತ್ರವನ್ನು ಸ್ಥಳಕ್ಕೆ ತರಿಸಿ, ಹಾನಿಗೊಳಗಾದ ಮನೆಯ ಅವಶೇಷಗಳ ಮಧ್ಯದಿಂದ ಟ್ರಕ್ ಅನ್ನು ಹೊರಕ್ಕೆ ತೆಗೆದಿದ್ದಾರೆ. ಸದ್ಯ ಲಾರಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಅಪಘಾತಕ್ಕೆ ಚಾಲಕನ ಬೇಜವಾಬ್ದಾರಿತನ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ನಿದ್ರೆಯಲ್ಲಿದ್ದಾಗಲೇ ಮೂವರನ್ನು ಬಲಿಪಡೆದ ಈ ದುರಂತ ಸ್ಥಳೀಯರಲ್ಲಿ ಭಾರಿ ಶೋಕ ಮೂಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us