51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿ, ತಾವು 5 ರಾಷ್ಟ್ರಗಳಿಗೆ ಪ್ರವಾಸ ಹೋಗಿದ್ದೇಕೆ ಎಂದು ವಿವರಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ 51,000 ಯುವಕರಿಗೆ ಉದ್ಯೋಗ ಪತ್ರ ವಿತರಿಸಿದರು. ವಿದೇಶ ಪ್ರವಾಸಗಳ ಬಗ್ಗೆ ಟೀಕಿಸಿದವರಿಗೆ ತಿರುಗೇಟು ನೀಡಿದ ಅವರು, ತಮ್ಮ ಭೇಟಿಗಳು ಜಾಗತಿಕ ಕಂಪನಿಗಳೊಂದಿಗೆ ಒಪ್ಪಂದಗಳನ್ನು ತಂದು, ಭಾರತೀಯ ಯುವಕರಿಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿವೆ ಎಂದರು. ವಿಕಸಿತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮುಖ್ಯವೆಂದು ಒತ್ತಿಹೇಳಿದ ಮೋದಿ, ಭವಿಷ್ಯದಲ್ಲಿ ಸ್ವಚ್ಛ ಇಂಧನ, AI ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಗಳು ಲಭ್ಯ ಎಂದರು.

51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿ, ತಾವು 5 ರಾಷ್ಟ್ರಗಳಿಗೆ ಪ್ರವಾಸ ಹೋಗಿದ್ದೇಕೆ ಎಂದು ವಿವರಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Image Credit source: PTI

Updated on: May 23, 2026 | 12:20 PM

ನವದೆಹಲಿ, ಮೇ 23: ಪ್ರಧಾನಿ ನರೇಂದ್ರ ಮೋದಿ(Narendra Modi)ಅವರು ದೇಶದ 51,000 ಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಇತ್ತೀಚಿನ ಐದು ದೇಶಗಳ ಪ್ರವಾಸದ ಮಹತ್ವವನ್ನು ವಿವರಿಸುವ ಮೂಲಕ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

5 ದೇಶಗಳ ಪ್ರವಾಸದ ಅಸಲಿ ಉದ್ದೇಶವೇನು?
ನಾನು ಕೇವಲ ಐದು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡು ಬಂದಿಲ್ಲ, ಬದಲಿಗೆ ಈ ಅವಧಿಯಲ್ಲಿ ಡಜನ್‌ಗಟ್ಟಲೆ ದೇಶಗಳ ಪ್ರಮುಖ ಜಾಗತಿಕ ಕಂಪನಿಗಳ ನಾಯಕರನ್ನು ಭೇಟಿ ಮಾಡಿ ವಿವರವಾದ ಚರ್ಚೆ ನಡೆಸಿದ್ದೇನೆ ಎಂದು ಪ್ರಧಾನಿ ಹೇಳಿದರು. ಇಂದು ಇಡೀ ಜಗತ್ತು ಭಾರತದ ತಾಂತ್ರಿಕ ಪ್ರಗತಿ ಮತ್ತು ಇಲ್ಲಿನ ಯುವಶಕ್ತಿಯ ಬಗ್ಗೆ ಅಪಾರ ಉತ್ಸಾಹ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಯುವಕರಿಗೆ ದೊಡ್ಡ ಮನ್ನಣೆ ಮತ್ತು ಅವಕಾಶಗಳು ಸಿಗಬೇಕೆಂಬುದೇ ನನ್ನ ವಿದೇಶಿ ಪ್ರವಾಸಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯಾವ ದೇಶದೊಂದಿಗೆ ಎಂತಹ ಒಪ್ಪಂದಗಳು?
ಭಾರತವು ವಿಶ್ವದಲ್ಲೇ ಅತ್ಯಂತ ನಂಬಿಕಸ್ಥ ‘ಸಪ್ಲೈ ಚೈನ್’ ದೇಶವಾಗಿ ಹೊರಹೊಮ್ಮುತ್ತಿದೆ ಎಂದ ಮೋದಿ, ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಪ್ರಮುಖ ಒಪ್ಪಂದಗಳನ್ನು ಪಟ್ಟಿ ಮಾಡಿದರು.

ನೆದರ್‌ಲ್ಯಾಂಡ್ಸ್: ಜಗತ್ತಿನ ಹೆಸರಾಂತ ಸೆಮಿಕಂಡಕ್ಟರ್ ಕಂಪನಿ ‘ASML’ ಭಾರತದ ‘TATA’ ಕಂಪನಿಯೊಂದಿಗೆ ಅತ್ಯಂತ ಅಪರೂಪದ ಒಪ್ಪಂದ ಮಾಡಿಕೊಂಡಿದೆ. ಇದು ದೇಶದಲ್ಲಿ ಲೆಕ್ಕವಿಲ್ಲದಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ.

ಸ್ವೀಡನ್ ಮತ್ತು ಇಟಲಿ: ಹಸಿರು ಇಂಧನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ನಾವೀನ್ಯತೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ವದ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.

ಯುಎಇ ಮತ್ತು ನಾರ್ವೆ: ಹಡಗು ನಿರ್ಮಾಣ, ಸೂಪರ್‌ಕಂಪ್ಯೂಟಿಂಗ್ ಮತ್ತು ಹಸಿರು ತಂತ್ರಜ್ಞಾನದಲ್ಲಿ ಜಂಟಿಯಾಗಿ ಕೆಲಸ ಮಾಡಲು ಒಪ್ಪಂದಗಳಾಗಿವೆ.

ಮತ್ತಷ್ಟು ಓದಿ: ನರೇಂದ್ರ ಮೋದಿಗೆ ನಾರ್ವೆಯ ಅತ್ಯುನ್ನತ ಪ್ರಶಸ್ತಿ ಪ್ರದಾನ; ಭಾರತದ ಪ್ರಧಾನಿಗೆ 32ನೇ ಜಾಗತಿಕ ಗೌರವ

ಅಭಿವೃದ್ಧಿ ಹೊಂದಿದ ಭಾರತಕ್ಕೆ ಯುವಕರೇ ಪಾಲುದಾರರು
ನೇಮಕಾತಿ ಪತ್ರ ಪಡೆದ ಯುವಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಇಂದು ನೀವೆಲ್ಲರೂ ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಅತ್ಯಂತ ಜವಾಬ್ದಾರಿಯುತ ಪಾಲುದಾರರಾಗುತ್ತಿದ್ದೀರಿ. ಮುಂಬರುವ ವರ್ಷಗಳಲ್ಲಿ ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಿದೆ ಎಂದು ಕರೆ ನೀಡಿದರು. ಶುದ್ಧ ಇಂಧನ, ಹಸಿರು ಹೈಡ್ರೋಜನ್ ಮತ್ತು ಸುಸ್ಥಿರ ಉತ್ಪಾದನಾ ವಲಯಗಳು ವೇಗವಾಗಿ ಬೆಳೆಯುತ್ತಿದ್ದು, ಯುವಕರಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶಗಳ ಮಹಾಪೂರವೇ ಹರಿದುಬರಲಿದೆ ಎಂದು ಅವರು ಭರವಸೆ ನೀಡಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us