ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್​​ನ ಗ್ರೋಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಎಲಾನ್ ಮಸ್ಕ್ ನೇತೃತ್ವದ ಎಕ್ಸ್‌ಗೆ (ಹಿಂದಿನ ಟ್ವಿಟ್ಟರ್) ಕೇಂದ್ರ ಸರ್ಕಾರ ಕಠಿಣ ಎಚ್ಚರಿಕೆಯೊಂದನ್ನು ರವಾನಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆ 'ಗ್ರೋಕ್ ಎಐ'ನಲ್ಲಿ ಅಶ್ಲೀಲ, ನಗ್ನ ಮತ್ತು ಅಸಭ್ಯ ವಿಷಯವನ್ನು ವಿತರಿಸಲು ಎಐ ಆಧಾರಿತ ಸೇವೆಯನ್ನು ದುರುಪಯೋಗಪಡಿಸಿಕೊಂಡ ಘಟನೆಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ತನ್ನ ಕಾನೂನು ಬಾಧ್ಯತೆಗಳನ್ನು ಪಾಲಿಸಲು ವಿಫಲವಾದ ಕಾರಣದಿಂದಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಕ್ಸ್‌ಗೆ ನೋಟಿಸ್ ನೀಡಿದೆ.

ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್​​ನ ಗ್ರೋಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ
Elon Musk

Updated on: Jan 02, 2026 | 9:51 PM

ನವದೆಹಲಿ, ಜನವರಿ 2: ಎಲಾನ್ ಮಸ್ಕ್ (Elon Musk) ನೇತೃತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ಗೆ ಕೇಂದ್ರ ಸರ್ಕಾರ ಇಂದು ಖಡಕ್ ಎಚ್ಚರಿಕೆ ನೀಡಿದೆ. ಎಕ್ಸ್​ನ AI ಅಪ್ಲಿಕೇಶನ್ ಗ್ರೋಕ್‌ನಿಂದ (Grok AI) ಹಂಚಲ್ಪಡುತ್ತಿರುವ ಎಲ್ಲಾ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ಡಿಲೀಟ್ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಒಂದುವೇಳೆ ಆ ವಿಷಯಗಳನ್ನು 72 ಗಂಟೆಯೊಳಗೆ ತೆಗೆದುಹಾಕದಿದ್ದರೆ ಕಾನೂನಿನಡಿಯಲ್ಲಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ಶಾಸನಬದ್ಧವಾದ ಬಾಧ್ಯತೆಗಳನ್ನು ಪಾಲಿಸಲು ವಿಫಲವಾದ ಕಾರಣದಿಂದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಕ್ಸ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯ ಅಧಿಕಾರಿಗೆ ನೋಟಿಸ್ ನೀಡಿದೆ.

ಇದನ್ನೂ ಓದಿ: ಭಾರತದ ಕಾನೂನು ಅನುಸರಿಸಲೇಬೇಕು; ಎಲಾನ್ ಮಸ್ಕ್ ಒಡೆತನದ ಎಕ್ಸ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಮುಖಭಂಗ

‘ಗ್ರೋಕ್’ ನಂತಹ AI ಆಧಾರಿತ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕತೆಯುಳ್ಳ ವಿಷಯವನ್ನು ಹೋಸ್ಟ್ ಮಾಡುವುದು, ಸೃಷ್ಟಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಹಂಚಿಕೊಳ್ಳುವುದು ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸಬೇಕೆಂದು ಸಚಿವಾಲಯ ಕೋರಿದೆ.

“ನೀವು ಅಭಿವೃದ್ಧಿಪಡಿಸಿದ ಮತ್ತು ಸಂಯೋಜಿಸಲ್ಪಟ್ಟ ಮತ್ತು ಎಕ್ಸ್ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾದ “Grok AI” ಎಂಬ ಸೇವೆಯನ್ನು ಬಳಕೆದಾರರು ಮಹಿಳೆಯರ ಅಶ್ಲೀಲ ಚಿತ್ರಗಳು ಅಥವಾ ವೀಡಿಯೊಗಳನ್ನು ಅವಹೇಳನಕಾರಿ ಅಥವಾ ಅಸಭ್ಯ ರೀತಿಯಲ್ಲಿ ಹೋಸ್ಟ್ ಮಾಡಲು, ರಚಿಸಲು, ಪ್ರಕಟಿಸಲು ಅಥವಾ ಹಂಚಿಕೊಳ್ಳಲು ನಕಲಿ ಖಾತೆಗಳನ್ನು ರಚಿಸಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಶೇಷವಾಗಿ ಗಮನಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಿ” ಎಂದು ಪತ್ರದಲ್ಲಿ ಆದೇಶಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ