Bangladesh Crisis: ಬಾಂಗ್ಲಾದೇಶದ ಗಡಿಯ ಪರಿಸ್ಥಿತಿ ಗಮನಿಸಲು ಭಾರತ ಸರ್ಕಾರದಿಂದ ಸಮಿತಿ ರಚನೆ; ಅಮಿತ್ ಶಾ ಘೋಷಣೆ

|

Updated on: Aug 09, 2024 | 4:39 PM

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಆ ದೇಶದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಬಾಂಗ್ಲಾದೇಶದಲ್ಲಿ ಇತರೆ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಿದೆ.

Bangladesh Crisis: ಬಾಂಗ್ಲಾದೇಶದ ಗಡಿಯ ಪರಿಸ್ಥಿತಿ ಗಮನಿಸಲು ಭಾರತ ಸರ್ಕಾರದಿಂದ ಸಮಿತಿ ರಚನೆ; ಅಮಿತ್ ಶಾ ಘೋಷಣೆ
ಅಮಿತ್ ಶಾ
Follow us on

ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರ ಸಮಿತಿಯನ್ನು ರಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇಂಡೋ-ಬಾಂಗ್ಲಾದೇಶದ ಗಡಿಯಲ್ಲಿ (ಐಬಿಬಿ) ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮೋದಿ ಸರ್ಕಾರವು ಸಮಿತಿಯನ್ನು ರಚಿಸಿದೆ. ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ಅಲ್ಲಿ ವಾಸಿಸುವ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಸಮಿತಿಯು ಬಾಂಗ್ಲಾದೇಶದ ತಮ್ಮ ಸಹವರ್ತಿ ಅಧಿಕಾರಿಗಳೊಂದಿಗೆ ಸಂವಹನ ಚಾನಲ್‌ಗಳನ್ನು ನಿರ್ವಹಿಸುತ್ತದೆ ಎಂದು ಅಮಿತ್ ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಟ್ಟೆಚ್ಚರ ವಹಿಸಿದೆ. ಭಯೋತ್ಪಾದಕರು ಸೇರಿದಂತೆ 1,200ಕ್ಕೂ ಹೆಚ್ಚು ಕೈದಿಗಳು ಬಾಂಗ್ಲಾದೇಶದ ಜೈಲುಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ನುಸುಳಲು ಪ್ರಯತ್ನಿಸಬಹುದು ಎಂದು ಭದ್ರತಾ ಏಜೆನ್ಸಿಗಳು ಬಿಎಸ್‌ಎಫ್‌ಗೆ ಎಚ್ಚರಿಕೆ ನೀಡಿವೆ.

ಇದನ್ನೂ ಓದಿ: Sheikh Hasina: ಆ ಒಂದು ಫೋನ್ ಕಾಲ್​ನಿಂದ ಬಾಂಗ್ಲಾದೇಶ ಬಿಟ್ಟು ಹೊರಟ ಶೇಖ್ ಹಸೀನಾ

4,096 ಕಿ.ಮೀ ಉದ್ದದ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಸ್ಥಳೀಯರಿಗೆ ಗಡಿ ಪ್ರದೇಶಗಳಲ್ಲಿ ವಿಶೇಷವಾಗಿ ರಾತ್ರಿಯಲ್ಲಿ ಅನಗತ್ಯ ಸಂಚಾರವನ್ನು ಕೈಗೊಳ್ಳದಂತೆ ಬಿಎಸ್ಎಫ್ ಮನವಿ ಮಾಡಿದೆ. ಗಡಿಯಲ್ಲಿರುವ ಅಂಗಡಿಗಳನ್ನು ರಾತ್ರಿ 9 ಗಂಟೆಯೊಳಗೆ ಮುಚ್ಚುವಂತೆ ತಿಳಿಸಲಾಗಿದೆ.


ಸಂಸತ್ತಿನಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸರ್ಕಾರ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ಬಿಎಸ್‌ಎಫ್ ಎಡಿಜಿಯ ಹೊರತಾಗಿ, ಸಮಿತಿಯ ಇತರ ನಾಲ್ವರು ಸದಸ್ಯರು ದಕ್ಷಿಣ ಬಂಗಾಳದ ಗಡಿಭಾಗದ ಬಿಎಸ್‌ಎಫ್‌ನ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ತ್ರಿಪುರಾ ಗಡಿಭಾಗದ ಐಜಿಪಿ, ಲ್ಯಾಂಡ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಸದಸ್ಯ (ಯೋಜನೆ ಮತ್ತು ಅಭಿವೃದ್ಧಿ) LPAI), ಮತ್ತು LPAI ನ ಕಾರ್ಯದರ್ಶಿಯಾಗಿರುತ್ತಾರೆ.

ಇದನ್ನೂ ಓದಿ: Bangladesh Crisis: ಬಾಂಗ್ಲಾದೇಶದಲ್ಲಿ ಗುರುವಾರ ಮುಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರ್ಕಾರ ಪ್ರಮಾಣ ವಚನ ಸ್ವೀಕಾರ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯ ವರದಿಗಳು ಹೊರಬರುತ್ತಿದ್ದಂತೆ ಈ ಬೆಳವಣಿಗೆಗಳು ಸಂಭವಿಸಿವೆ. ಹಲವಾರು ವರದಿಗಳ ಪ್ರಕಾರ, ಬಾಂಗ್ಲಾದ ಇಸ್ಕಾನ್ ದೇವಾಲಯದ ಮೇಲೆ ದಾಳಿ ನಡೆಸಲಾಗಿದೆ ಮತ್ತು ಹಲವಾರು ಇತರ ಹಿಂದೂ ದೇವಾಲಯಗಳನ್ನು ಸುಟ್ಟುಹಾಕಲಾಗಿದೆ. ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ದಾಸ್ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Fri, 9 August 24