ಕಿಡ್ನಾಪ್ ಆಗಿದ್ದ ಮಗುವಿಗೆ ಚಾಕೋಲೇಟ್ ಬಾಕ್ಸ್ ನೀಡಿ ಸಂತೈಸಿದ ಪೊಲೀಸರು!

ಮುಂಬೈನಲ್ಲಿ ಅಪಹರಣಕಾರರಿಂದ 5 ವರ್ಷದ ಬಾಲಕಿಯನ್ನು ರಕ್ಷಿಸಿದ ನಂತರ ಮುಂಬೈ ಪೊಲೀಸರು ಆ​ ಬಾಲಕಿಗೆ ಚಾಕೊಲೇಟ್ ಬಾಕ್ಸ್​ ನೀಡಿ ಅಚ್ಚರಿ ಮೂಡಿಸಿದ್ದಾರೆ. 5 ವರ್ಷದ ಬಾಲಕಿಯನ್ನು ಅಪಹರಣಕಾರರಿಂದ ರಕ್ಷಿಸಿದ ನಂತರ, ಪೊಲೀಸ್ ಠಾಣೆಯಲ್ಲಿ ಆಕೆಯನ್ನು ಅಮ್ಮನ ಕೈಗೆ ಒಪ್ಪಿಸಿದರು. ಬಳಿಕ ಕ್ಯಾಡ್ಬರಿ ಸೆಲೆಬ್ರೇಷನ್ಸ್ ಚಾಕೊಲೇಟ್ ಬಾಕ್ಸ್​ನೊಂದಿಗೆ ಆಕೆಯನ್ನು ಅಚ್ಚರಿಗೊಳಿಸಿದರು. ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಕಿಡ್ನಾಪ್ ಆಗಿದ್ದ ಮಗುವಿಗೆ ಚಾಕೋಲೇಟ್ ಬಾಕ್ಸ್ ನೀಡಿ ಸಂತೈಸಿದ ಪೊಲೀಸರು!
Mumbai Girl Rescued From Kidnappers

Updated on: Nov 27, 2025 | 9:45 PM

ಮುಂಬೈ, ನವೆಂಬರ್ 27: ಮಹಾರಾಷ್ಟ್ರದ ಮುಂಬೈನಲ್ಲಿ (Mumbai) 5 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಲಾಗಿತ್ತು. ಅಪಹರಣಕಾರರಿಂದ ಆಕೆಯನ್ನು ಕಾಪಾಡಿದ ಪೊಲೀಸರು ಆಕೆಯನ್ನು ತಾಯಿಯ ಕೈಗೆ ಒಪ್ಪಿಸಿದ್ದಾರೆ. ಆದರೆ, ತುಂಬ ಹೆದರಿದ್ದ ಆ ಬಾಲಕಿಯನ್ನು ಸಂತೈಸಲು ಆ ಪೊಲೀಸರು ಆಕೆಗೆ ದೊಡ್ಡದಾದ ಚಾಕೋಲೇಟ್ ಬಾಕ್ಸ್ ನೀಡಿ ಆಕೆಯ ಮುಖದಲ್ಲಿ ನಗು ಮೂಡಿಸಿದ್ದಾರೆ. ಮುಂಬೈ ಪೊಲೀಸ್ ಅಧಿಕಾರಿಯ ಈ ನಡೆ ಎಲ್ಲರ ಮನಸನ್ನು ಗೆದ್ದಿದೆ. ಅಧಿಕಾರಿ ಚಾಕಲೇಟ್‌ಗಳನ್ನು ನೀಡುವಾಗ ಆ ಪುಟ್ಟ ಹುಡುಗಿ ತನ್ನ ತಾಯಿಯನ್ನು ಬಿಗಿಯಾಗಿ ತಬ್ಬಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಪೊಲೀಸ್ ಠಾಣೆಯೊಳಗೆ ಕರೆತರುವುದನ್ನು ನೋಡಬಹುದು. ನಂತರ ಆ ಬಾಲಕಿಯನ್ನು ಆಕೆಯ ತಾಯಿಗೆ ಹಸ್ತಾಂತರಿಸಲಾಗುತ್ತದೆ. ಆಗ ಇಬ್ಬರೂ ಪರಸ್ಪರ ಬಿಗಿಯಾಗಿ ತಬ್ಬಿಕೊಳ್ಳುವುದನ್ನು ಕಾಣಬಹುದು. ಈ ವೇಳೆ ಪೊಲೀಸ್​ ಅಧಿಕಾರಿಯೊಬ್ಬರು ಆ 5 ವರ್ಷದ ಮಗುವಿಗೆ ಕ್ಯಾಡ್ಬರಿ ಸೆಲೆಬ್ರೇಷನ್ಸ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿ ಆಕೆಯ ತಲೆಯನ್ನು ನೇವರಿಸುತ್ತಾರೆ.

ಇದನ್ನು ಓದಿ: ಮಲಗಿದ್ದ ಒಂದೂವರೆ ತಿಂಗಳ ಮಗು ಮೇಲೆ ಬಾಲಕ ಬಿದ್ದು ಹಸುಗೂಸು ಸಾವು


“5 ವರ್ಷದ ಬಾಲಕಿಯ ಅಪಹರಣ ಮತ್ತು ಕಳ್ಳಸಾಗಣೆ ಪ್ರಕರಣದಲ್ಲಿ, ವಕೋಲಾ ಪೊಲೀಸ್ ಠಾಣೆ ಅಧಿಕಾರಿಗಳು ಮಗುವನ್ನು ಪನ್ವೇಲ್‌ನಲ್ಲಿ ಪತ್ತೆಹಚ್ಚಿ ಐದು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ತನಿಖೆಯಿಂದ ಬಾಲಕಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಮಧ್ಯರಾತ್ರಿ ಆಕೆಯನ್ನು ಅಪಹರಿಸಿ 90,000 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಖರೀದಿದಾರ ಆ ಮಗುವನ್ನು ಮತ್ತೊಬ್ಬ ವ್ಯಕ್ತಿಗೆ 1,80,000 ರೂ.ಗೆ ಮರುಮಾರಾಟ ಮಾಡಿದ್ದಾರೆ. ಪೊಲೀಸರು ಪನ್ವೇಲ್‌ನಿಂದ ಆ ಬಾಲಕಿಯನ್ನು ರಕ್ಷಿಸಿ ಸುರಕ್ಷಿತವಾಗಿ ಆಕೆಯ ತಾಯಿಯೊಂದಿಗೆ ಸೇರಿಸಿದ್ದಾರೆ. ಅಪಹರಣ ಮತ್ತು ನಂತರದ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಐದು ವ್ಯಕ್ತಿಗಳನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Thu, 27 November 25