ಮಲಗಿದ್ದ ಒಂದೂವರೆ ತಿಂಗಳ ಮಗು ಮೇಲೆ ಬಾಲಕ ಬಿದ್ದು ಹಸುಗೂಸು ಸಾವು
ತಮಿಳುನಾಡಿನ ಥೇಣಿಯಲ್ಲಿ ನೆಲದ ಮೇಲೆ ಮಲಗಿದ್ದ ಒಂದೂವರೆ ತಿಂಗಳ ಮಗುವಿನ ಮೇಲೆ ಎರಡೂವರೆ ವರ್ಷದ ಬಾಲಕ ಎಡವಿ ಬಿದ್ದು, ಆ ಮಗುವಿನ ಮೂಗಿನಲ್ಲಿ ರಕ್ತಸ್ರಾವವಾಗಿ ಶಿಶು ದುರಂತವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಆ ಇಬ್ಬರು ಮಕ್ಕಳೂ ಒಂದೇ ತಾಯಿಯದಾಗಿದ್ದು, ಮಗುವಿನ ಅಣ್ಣ ಮನೆಯಲ್ಲಿ ಆಡುತ್ತಿದ್ದಾಗ ಆಯತಪ್ಪಿ ಶಿಶುವಿನ ಮೇಲೆ ಬಿದ್ದ ಕಾರಣದಿಂದ ಮಗು ಸಾವನ್ನಪ್ಪಿದೆ.

ಥೇಣಿ, ನವೆಂಬರ್ 27: ತಮಿಳುನಾಡಿನಲ್ಲಿ (Tamil Nadu) ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಒಂದೂವರೆ ತಿಂಗಳ ಮಗುವಿನ ಮೇಲೆ ಎರಡೂವರೆ ವರ್ಷದ ಬಾಲಕ ಬಿದ್ದು ಆ ಮಗು ಸಾವನ್ನಪ್ಪಿದೆ. ಥೇಣಿ ಜಿಲ್ಲೆಯ ಕಂಬಂ ಬಳಿಯ ಕಕ್ಕಿಲ್ ಚಿಕ್ಕಾಯಗೌನ್‌ಪಟ್ಟಿ ಪ್ರದೇಶದ ನಿವಾಸಿಯಾದ ರಂಜಿತ್ ಕುಮಾರ್ ಕೂಲಿ ಕಾರ್ಮಿಕರಾಗಿದ್ದರು. ಅವರಿಗೆ 22 ವರ್ಷದ ಅಭಿಷಾ ಎಂಬ ಪತ್ನಿ ಇದ್ದರು. ಈ ದಂಪತಿಗೆ ಎರಡೂವರೆ ವರ್ಷದ ಮಗ ಹಾಗೂ ಒಂದೂವರೆ ತಿಂಗಳ ಗಂಡು ಮಗುವಿತ್ತು.
2ನೇ ಹೆರಿಗೆಗೆ ಅವರು 2 ತಿಂಗಳ ಹಿಂದೆ ಗುಡಲೂರಿನ ಪಸುಂಪೋನ್ ನಗರದಲ್ಲಿರುವ ತಮ್ಮ ತಾಯಿಯ ಮನೆಗೆ ಹೋಗಿದ್ದರು. ಕಂಬಂ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಸುಂದರವಾದ ಗಂಡು ಮಗು ಜನಿಸಿತ್ತು. ಆ ಮಗುವಿಗೆ ಒಂದೂವರೆ ತಿಂಗಳಾಗಿತ್ತು. ಹೆರಿಗೆಯ ನಂತರ ಅಭಿಷಾ ತನ್ನ ತಾಯಿಯ ಮನೆಯಲ್ಲಿಯೇ ಇದ್ದರು. ಆಕೆ ಮಗುವನ್ನು ನೆಲದ ಮೇಲೆ ಮಲಗಿಸಿ ಮನೆಕೆಲಸ ಮಾಡುತ್ತಿದ್ದರು.
ಇದನ್ನು ಓದಿ: ಕೊಪ್ಪಳ: ಮಗುವಿಗೆ ಜನ್ಮ ನೀಡಿದ 10 ನೇ ತರಗತಿ ವಿದ್ಯಾರ್ಥಿನಿ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಆ ಸಮಯದಲ್ಲಿ ಅವರ ಹಿರಿಯ ಮಗ ಎರಡೂವರೆ ವರ್ಷದ ಬಾಲಕ ಕಾಲು ಜಾರಿ ನವಜಾತ ಶಿಶುವಿನ ಮೇಲೆ ಬಿದ್ದಿದ್ದಾನೆ. ಇದರಿಂದಾಗಿ, ಮಗುವಿನ ಮೂಗಿನಿಂದ ರಕ್ತಸ್ರಾವವಾಗಲು ಪ್ರಾರಂಭಿಸಿತು. ಮಗು ಕಿರುಚುತ್ತಾ ನೋವಿನಿಂದ ಅಳತೊಡಗಿತು. ಮಗುವಿನ ಅಳು ಕೇಳಿ ಅಭಿಷಾ ಓಡಿ ಬಂದು ಮಗುವಿನ ಮೂಗಿನಿಂದ ರಕ್ತ ಬರುತ್ತಿರುವುದನ್ನು ನೋಡಿ ಆಘಾತಕ್ಕೊಳಗಾದರು. ತಕ್ಷಣ ತನ್ನ ನೆರೆಹೊರೆಯವರ ಸಹಾಯದಿಂದ ಮಗುವನ್ನು ಎತ್ತಿಕೊಂಡು ಕಂಬಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದರು.
ಇದನ್ನು ಓದಿ: ಪ್ರಿಯಕರನಿಗಾಗಿ ಗಂಡನನ್ನು ಕೊಂದು ಡ್ರಮ್ನಲ್ಲಿರಿಸಿದ್ದ ಮುಸ್ಕಾನ್ಗೆ ಹೆಣ್ಣು ಮಗು ಜನನ
ಈ ವಿಷಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ನೀಡಿದ ಮಾಹಿತಿಯ ಆಧಾರದ ಮೇಲೆ, ಸ್ಥಳಕ್ಕೆ ತೆರಳಿದ ಪೊಲೀಸರು ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




