Delta Plus Variant: ಮುಂಬೈನಲ್ಲಿ ಡೆಲ್ಟಾ ಪ್ಲಸ್​ ಸೋಂಕಿಗೆ ಮೊದಲ ಬಲಿ; ಎರಡು ಡೋಸ್​ ಕೊರೊನಾ ಲಸಿಕೆ ಪಡೆದ ವೃದ್ಧೆ ಸಾವು

| Updated By: Skanda

Updated on: Aug 13, 2021 | 11:20 AM

ಮಹಾರಾಷ್ಟ್ರ ರಾಜ್ಯದಲ್ಲಿ ಡೆಲ್ಟಾ ಪ್ಲಸ್​ ಸೋಂಕಿತರ ಸಂಖ್ಯೆ 65 ಆಗಿದೆ ಎಂದು ಬುಧವಾರವಷ್ಟೇ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. ಇದೀಗ ಅದರ ಬೆನ್ನಲ್ಲೇ ರಾಜ್ಯದಲ್ಲಿ ಡೆಲ್ಟಾ ಪ್ಲಸ್​ ಸೋಂಕಿಗೆ ಮೊದಲ ಸಾವು ಸಂಭವಿಸಿರುವ ಸುದ್ದಿಯೂ ಹೊರಬಿದ್ದಿದೆ.

Delta Plus Variant: ಮುಂಬೈನಲ್ಲಿ ಡೆಲ್ಟಾ ಪ್ಲಸ್​ ಸೋಂಕಿಗೆ ಮೊದಲ ಬಲಿ; ಎರಡು ಡೋಸ್​ ಕೊರೊನಾ ಲಸಿಕೆ ಪಡೆದ ವೃದ್ಧೆ ಸಾವು
ಡೆಲ್ಟಾ ಪ್ಲಸ್ ರೂಪಾಂತರಿ
Follow us on

ದೆಹಲಿ: ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು, ಮುಂಬೈನಲ್ಲಿ ಡೆಲ್ಟಾ ಪ್ಲಸ್ ತಳಿ ಸೋಂಕಿಗೆ ಮೊದಲ ಸಾವು ಸಂಭವಿಸಿದೆ. 63 ವರ್ಷದ ವೃದ್ಧೆ ಡೆಲ್ಟಾ ಪ್ಲಸ್ ಕೊವಿಡ್ ಸೋಂಕಿನಿಂದ ಸಾವಿಗೀಡಾಗಿದ್ದು, ಅವರು 2 ಡೋಸ್​ ಕೊರೊನಾ ಲಸಿಕೆಯನ್ನು ತೆಗೆದುಕೊಂಡಿದ್ದರಾದರೂ ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಡೆಲ್ಟಾ ಪ್ಲಸ್​ ಸೋಂಕಿತರ ಸಂಖ್ಯೆ 65 ಆಗಿದೆ ಎಂದು ಬುಧವಾರವಷ್ಟೇ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. ಇದೀಗ ಅದರ ಬೆನ್ನಲ್ಲೇ ರಾಜ್ಯದಲ್ಲಿ ಡೆಲ್ಟಾ ಪ್ಲಸ್​ ಸೋಂಕಿಗೆ ಮೊದಲ ಸಾವು ಸಂಭವಿಸಿರುವ ಸುದ್ದಿಯೂ ಹೊರಬಿದ್ದಿದೆ. ಡೆಲ್ಟಾ ಪ್ಲಸ್​ ಸೋಂಕಿತರ ಪೈಕಿ ಹೊಸದಾಗಿ ಪತ್ತೆಯಾದ 20 ಮಂದಿಯಲ್ಲಿ 7 ಜನ ಮುಂಬೈ, 3 ಜನ ಪುಣೆ, ಹಾಗೂ ನಾಂದೇಡ್​, ಗೋಂದಿಯಾ, ರಾಯ್​ಗಡ, ಪಲ್​ಘರ್​ನಲ್ಲಿ ತಲಾ ಇಬ್ಬರು, ಚಂದ್ರಾಪುರ ಹಾಗೂ ಅಕೋಲಾದಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನೊಂದು ಗಮನಾರ್ಹ ಅಂಶವೆಂದರೆ ಮಹಾರಾಷ್ಟ್ರದಲ್ಲಿ ಜೆನೆಟಿಕ್​ ಸೀಕ್ವೆನ್ಸಿಂಗ್​ ಟೆಸ್ಟ್​ ಮೂಲಕ ಪರೀಕ್ಷೆಗೆ ಒಳಪಟ್ಟ ಶೇ.80ಕ್ಕೂ ಹೆಚ್ಚು ಮಾದರಿಗಳಲ್ಲಿ ಡೆಲ್ಟಾ ಪ್ಲಸ್​ ತಳಿ ಸೋಂಕು ಕಂಡುಬಂದಿದೆ. 19ರಿಂದ45 ವರ್ಷ ವಯೋಮಾನದವರಲ್ಲಿ 33 ಜನರಿಗೆ, 46 ರಿಂದ 60 ವಯೋಮಾನದವರಲ್ಲಿ 17 ಜನರಿಗೆ, 18 ವರ್ಷದೊಳಗಿನ 7 ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟ 8 ಮಂದಿಗೆ ಡೆಲ್ಟಾ ಪ್ಲಸ್ ಸೋಂಕು ತಗುಲಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ನಿಯಮಾವಳಿಗೆ ಸಂಬಂಧಿಸಿದಂತೆ ಪ್ರಸ್ತುತ ಹೊಸ ಅಧಿಸೂಚನೆಯೊಂದನ್ನು ಹೊರಡಿಸಲಾಗಿದ್ದು, ಅದರ ಪ್ರಕಾರ ಜಿಮ್​, ಪಾರ್ಲರ್​, ಸಲೂನ್​ಗಳಿಗೆ ಶೇ.50ರಷ್ಟು ಜನರೊಂದಿಗೆ ತೆರೆಯಲು ಅನುಮತಿ ನೀಡಲಾಗಿದೆ. ಜತೆಗೆ, ಎಲ್ಲಾ ಅಂಗಡಿಗಳಿಗೆ ರಾತ್ರಿ 10 ರ ತನಕ ತೆರೆಯಲು ಅವಕಾಶ ಕೊಡಲಾಗಿದ್ದು, ಮದುವೆ ಸಮಾರಂಭಗಳಿಗೆ ಗರಿಷ್ಠ 200 ಜನ ಸೇರಲು ಮಾತ್ರ ಅನುಮತಿ ಇದೆ. ಸರ್ಕಾರಿ ಕಚೇರಿಗಳಲ್ಲಿ ಎರಡು ಡೋಸ್​ ಕೊರೊನಾ ಲಸಿಕೆ ಪಡೆದ ನೌಕರರಿಗೆ ಅವಕಾಶವಿದ್ದು, ಖಾಸಗಿ ಸಂಸ್ಥೆಗಳು ಕೂಡಾ 2 ಡೋಸ್​ ಲಸಿಕೆ ಪಡೆದ ಉದ್ಯೋಗಿಗಳೊಂದಿಗೆ 24 ತಾಸು ಕೆಲಸ ಮಾಡಬಹುದಾಗಿದೆ.

ಆದರೆ, ಧಾರ್ಮಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರೆದಿದ್ದು ಜನ ಗುಂಪುಗೂಡುವುದಕ್ಕೆ ಅವಕಾಶ ಇಲ್ಲ. ಅಂತೆಯೇ ಸಿನಿಮಾ ಹಾಲ್, ಮಲ್ಟಿಪ್ಲೆಕ್ಟ್, ದೇವಸ್ಥಾನಗಳನ್ನು ತೆರೆಯುವುದಕ್ಕೂ ಸದ್ಯ ಅವಕಾಶ ನೀಡಲಾಗಿಲ್ಲ.

ಇದನ್ನೂ ಓದಿ:
ಕೊವಿಡ್ -19 ಲಸಿಕೆಗಳಿಗೆ ಡೆಲ್ಟಾ ಪ್ರಸರಣವನ್ನು ನಿಲ್ಲಿಸಲು ಸಾಧ್ಯವಾಗದೇ ಇರಬಹುದು: ಎಚ್ಚರಿಕೆ ನೀಡಿದ ಬ್ರಿಟನ್

ಡೆಲ್ಟಾ ರೂಪಾಂತರಿ ವೈರಾಣು ವಿರುದ್ಧ ಸ್ಪುಟ್ನಿಕ್​ ವಿ ಲಸಿಕೆ ಶೇ.83ರಷ್ಟು ಪ್ರಭಾವಶಾಲಿ..

(Mumbai reports first Death from Covid 19 Delta Plus Variant Fully vaccinated woman died)

Published On - 11:19 am, Fri, 13 August 21