ಹುಟ್ಟುಹಬ್ಬದ ಪಾರ್ಟಿಗೆ ಕರೆದಿದ್ದ ಗೆಳೆಯನನ್ನೇ 4ನೇ ಮಹಡಿಯಿಂದ ಎಸೆದು ಕೊಂದ ಸ್ನೇಹಿತರು!
Crime News: ಮಹಾರಾಷ್ಟ್ರದ ಕಲ್ಯಾಣ್ ಕೊಲೆ ಪ್ರಕರಣದಲ್ಲಿ ಹೊಸ ತಿರುವು ಉಂಟಾಗಿದೆ. ಬರ್ತಡೇ ಪಾರ್ಟಿ ವೇಳೆ ಮದ್ಯದ ಕೊರತೆಯ ಕಾರಣಕ್ಕೆ ಗೆಳೆಯರ ನಡುವೆ ಜಗಳ ಉಂಟಾಗಿದೆ. ಇದರಿಂದ ಸ್ನೇಹಿತರು ತನ್ನ 25ನೇ ಹುಟ್ಟುಹಬ್ಬದ ದಿನದಂದೇ ಯುವಕನನ್ನು 4ನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾರೆ.
ಮುಂಬೈ: ಬರ್ತಡೇ ಪಾರ್ಟಿ ವೇಳೆ ಗೆಳೆಯರೆಲ್ಲರೂ ಅಮಲಿನಲ್ಲಿದ್ದರು. ಆಗ ತಡರಾತ್ರಿ ಮದ್ಯ ಖಾಲಿಯಾದಾಗ ಅದೇ ವಿಷಯಕ್ಕೆ ವಾಗ್ವಾದಗಳು ಶುರುವಾಗಿದೆ. ಇನ್ನೂ ಆಲ್ಕೋಹಾಲ್ ಬೇಕೆಂದು ಪಾರ್ಟಿ ಆಯೋಜಿಸಿದ್ದ ಗೆಳೆಯನ ಬಳಿ ರೇಗಾಡಿದ ಗೆಳೆಯರು ಇದೇ ವಿಷಯಕ್ಕೆ ಜಗಳವಾಡಿದ್ದಾರೆ. ಆಗ ಅವರಲ್ಲೊಬ್ಬ ಆ ಸ್ನೇಹಿತನ ತಲೆಯ ಮೇಲೆ ಮದ್ಯದ ಬಾಟಲಿಯಿಂದ ಹೊಡೆದಿದ್ದಾನೆ. ಆಗ ಗೆಳೆಯನ ಮೇಲೆ ಹರಿಹಾಯ್ದ ಮೂವರು ಗೆಳೆಯರು ಅವನನ್ನು ಮನೆಯಿಂದ ಹೊರಹೋಗುವಂತೆ ಒತ್ತಾಯಿಸಿದ್ದಾರೆ. ಬಳಿಕ ಜಗಳ ಅತಿರೇಕಕ್ಕೆ ಹೋದ ಪರಿಣಾಮ ತನ್ನ ಹುಟ್ಟುಹಬ್ಬದ ದಿನವೇ ಯುವಕ ಕೊಲೆಯಾಗಿದ್ದಾನೆ.
ಕಲ್ಯಾಣ್‌ನ ಚಿಂಚಪಾದ ಗಾಂವ್‌ನಲ್ಲಿ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿಯೋರ್ವ ತನ್ನ ಸ್ನೇಹಿತರಿಂದಲೇ ಕೊಲೆಯಾದ ದಾರುಣ ಘಟನೆ ನಡೆದಿದೆ. ತನ್ನ ಮನೆಯಲ್ಲಿ ಬರ್ತಡೇ ಪಾರ್ಟಿಗೆ ಗೆಳೆಯರನ್ನು ಕರೆದಿದ್ದ ಯುವಕನ ಆಹ್ವಾನದ ಮೇರೆಗೆ ಮೂವರು ಗೆಳೆಯರು ಎಣ್ಣೆ ಪಾರ್ಟಿ ಮಾಡಲು ಬಂದಿದ್ದರು. ಆಗ ರಾತ್ರಿ ಆಲ್ಕೋಹಾಲ್ ಖಾಲಿಯಾಗಿದ್ದರಿಂದ ಸಣ್ಣ ಜಗಳ ಶುರುವಾಗಿತ್ತು.
ಇದನ್ನೂ ಓದಿ: Crime News: 10 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಪ್ಪನಿಗೆ 101 ವರ್ಷ ಜೈಲು ಶಿಕ್ಷೆ
ಸಾವನ್ನಪ್ಪಿದ ಕಾರ್ತಿಕ್ ವಯಲ್ ತನ್ನ ಬರ್ತಡೇ ಪಾರ್ಟಿಗೆ ಅವನ ಮೂವರು ಸ್ನೇಹಿತರಾದ ನೀಲೇಶ್ ಕ್ಷೀರಸಾಗರ್, ಸಾಗರ್ ಕಾಳೆ ಮತ್ತು ಧೀರಜ್ ಯಾದವ್ನನ್ನು ಕರೆದಿದ್ದ. ತಡರಾತ್ರಿ ಆಲ್ಕೋಹಾಲ್ ಖಾಲಿಯಾದಾಗ ಅವರಲ್ಲಿ ವಾದ ಶುರುವಾಯಿತು. ಜಾಸ್ತಿ ಬಾಟಲಿ ತರಿಸಲು ಆಗಲಿಲ್ಲವಾ? ಎಂದು ಅಮಲಿನಲ್ಲಿ ಗೆಳೆಯರು ಜಗಳ ಶುರು ಮಾಡಿದ್ದರು. ಇದನ್ನು ಅವಮಾನವೆಂದು ಭಾವಿಸಿ ಕಾರ್ತಿಕ್ ನೀಲೇಶ್ನ ತಲೆಯ ಮೇಲೆ ಆಲ್ಕೋಹಾಲ್ ಬಾಟಲಿಯಿಂದ ಹೊಡೆದಿದ್ದ. ಇದರಿಂದ ಉದ್ವಿಗ್ನತೆ ಉಲ್ಬಣಗೊಂಡಿತು. ಮೂವರನ್ನೂ ತನ್ನ ಮನೆಯಿಂದ ಹೊರಹೋಗುವಂತೆ ಒತ್ತಾಯಿಸಿದ್ದನು. ಈ ಘರ್ಷಣೆಯ ನಂತರ, ಕಾರ್ತಿಕ್ ತನ್ನ ಮಲಗುವ ಕೋಣೆಗೆ ಹೋಗಿ ಮಲಗಿದ್ದ.
ಆದರೆ, ಕಾರ್ತಿಕ್ ತಮ್ಮನ್ನು ಪಾರ್ಟಿಗೆ ಕರೆಸಿ ಅವಮಾನ ಮಾಡಿದ್ದಾನೆ ಎಂದು ಕೋಪಗೊಂಡ ಸ್ನೇಹಿತರು ಕಾರ್ತಿಕ್ ನನ್ನು ಆತನ ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾರೆ. ಈ ಘಟನೆಯು ಜೂನ್ 27ರಂದು ಸಂಭವಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ
ಕಾರ್ತಿಕ್ ತನ್ನ ಮನೆಯಿಂದ ಹೊರಹೋಗಲು ಹೇಳಿದ್ದಕ್ಕೆ ಸಿಟ್ಟಿಗೆದ್ದ ನೀಲೇಶ್, ಸಾಗರ್ ಮತ್ತು ಧೀರಜ್ ಕಾರ್ತಿಕ್‌ನ ಕೋಣೆಗೆ ಪ್ರವೇಶಿಸಿ, ಅವನನ್ನು ಬಾಲ್ಕನಿಗೆ ಎಳೆದು ಕೆಳಗೆ ಎಸೆದಿದ್ದಾರೆ. 4ನೇ ಮಹಡಿಯಿಂದ ಬಿದ್ದ ರಭಸಕ್ಕೆ ಕಾರ್ತಿಕ್ ತೀವ್ರವಾಗಿ ಗಾಯಗೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕಾರ್ತಿಕ್‌ನ ಸ್ಥಿತಿ ಕಂಡು ಆತನ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಕಾರ್ತಿಕ್ ಮೃತಪಟ್ಟಿದ್ದಾನೆ.
ತಮ್ಮ ಕೃತ್ಯಗಳನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಆ ಮೂವರು ಸ್ನೇಹಿತರು ಕಾರ್ತಿಕ್ ಬಾಟಲಿಯಲ್ಲಿ ಹೊಡೆದಿದ್ದರಿಂದ ನೀಲೇಶ್ ಗಾಯಗೊಂಡಿದ್ದಾನೆ ಮತ್ತು ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಕಥೆಯನ್ನು ರೂಪಿಸಿದ್ದಾರೆ. ಕಾರ್ತಿಕ್ ಬಾಲ್ಕನಿಯಿಂದ ಹೇಗೆ ಬಿದ್ದ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಆದರೂ ಕಾರ್ತಿಕ್ ಅವರ ಕುಟುಂಬವು ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು, ವರದಿಯ ಪ್ರಕಾರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಭವಿಸಿದ ಘಟನೆಗಳ ನೈಜ ಅನುಕ್ರಮವನ್ನು ಬಹಿರಂಗಪಡಿಸಲು ಕಾರಣವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 pm, Tue, 2 July 24