AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hathras Tragedy: ಹತ್ರಾಸ್ ಕಾಲ್ತುಳಿತದ ಸಾವಿನ ಸಂಖ್ಯೆ 116ಕ್ಕೆ ಏರಿಕೆ; ಉನ್ನತ ಮಟ್ಟದ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ

Hathras Stampede Updates: ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಸತ್ಸಂಗ ಧಾರ್ಮಿಕ ಸಭೆಯ ವೇಳೆ ಕಾಲ್ತುಳಿತ ಉಂಟಾಗಿ 116 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಕರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ನಾಳೆ ಸಿಎಂ ಯೋಗಿ ಆದಿತ್ಯನಾಥ್ ಈ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸುವ ಸಾಧ್ಯತೆಯಿದೆ.

Hathras Tragedy: ಹತ್ರಾಸ್ ಕಾಲ್ತುಳಿತದ ಸಾವಿನ ಸಂಖ್ಯೆ 116ಕ್ಕೆ ಏರಿಕೆ; ಉನ್ನತ ಮಟ್ಟದ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ
ಹತ್ರಾಸ್ ಕಾಲ್ತುಳಿತ
ಸುಷ್ಮಾ ಚಕ್ರೆ
|

Updated on: Jul 02, 2024 | 10:34 PM

Share

ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್‌ನ ಪುಲ್ರೈ ಗ್ರಾಮದ ಸತ್ಸಂಗ ಧಾರ್ಮಿಕ ಸಭೆಯೊಂದರಲ್ಲಿ ಇಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 116 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ‘ಸತ್ಸಂಗ’ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಸಂಭವಿಸಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಹತ್ರಾಸ್​ ದುರಂತ ಸಂಭವಿಸಿದ ಸ್ಥಳಕ್ಕೆ ಧಾವಿಸುವ ಸಾಧ್ಯತೆಯಿದೆ. “ಹತ್ರಾಸ್​ನ ಘಟನೆಯು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಸ್ಥಳೀಯ ಸಂಘಟಕರು ‘ಭೋಲೆ ಬಾಬಾ’ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದ ನಂತರ, ಸತ್ಸಂಗದ ಪ್ರಚಾರಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರನ್ನು ಸ್ಪರ್ಶಿಸಲು ಭಕ್ತ ಸಮೂಹವು ಅವರ ಕಡೆಗೆ ನುಗ್ಗಿತು. ಸ್ವಯಂಸೇವಕರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಈ ಕಾಲ್ತುಳಿತ ಸಂಭವಿಸಿದೆ” ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇದನ್ನೂ ಓದಿ: Hathras stampede: ಹಾಥರಸ್ ಕಾಲ್ತುಳಿತ:107 ಮಂದಿ ಸಾವು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಮೋದಿ ಭರವಸೆ

“ಈ ಪ್ರಕರಣದ ತನಿಖೆಗಾಗಿ ನಾವು ಹೆಚ್ಚುವರಿ ಡಿಜಿ ಆಗ್ರಾ ಅವರ ಅಧ್ಯಕ್ಷತೆಯಲ್ಲಿ ತಂಡವನ್ನು ರಚಿಸಿದ್ದೇವೆ ಮತ್ತು ವಿವರವಾದ ವರದಿಯನ್ನು ನೀಡುವಂತೆ ಕೇಳಿದ್ದೇವೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮೂವರು ರಾಜ್ಯ ಸಚಿವರಾದ ಚೌಧರಿ ಲಕ್ಷ್ಮೀ ನಾರಾಯಣ್, ಸಂದೀಪ್ ಸಿಂಗ್ ಮತ್ತು ಅಸಿಮ್ ಅರುಣ್ ಕೂಡ ಸ್ಥಳದಲ್ಲಿದ್ದಾರೆ” ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇದನ್ನೂ ಓದಿ: Bhole Baba: ಹಾಥರಸ್ ಕಾಲ್ತುಳಿತ: ಸತ್ಸಂಗ ನಡೆಸುತ್ತಿದ್ದ ಭೋಲೆ ಬಾಬಾ ಯಾರು?

“ಉತ್ತರ ಪ್ರದೇಶ ಸರ್ಕಾರವು ಗಾಯಾಳುಗಳಿಗೆ ಸಾಧ್ಯವಾದಷ್ಟು ಬೇಗ ಉತ್ತಮ ಚಿಕಿತ್ಸೆ ನೀಡಲು ಕೆಲಸ ಮಾಡುತ್ತಿದೆ. ನಾವು ಸುತ್ತಮುತ್ತಲಿನ 34 ಜಿಲ್ಲೆಗಳ ಎಲ್ಲಾ ಆಡಳಿತ ಮತ್ತು ವೈದ್ಯರಿಗೆ ಎಚ್ಚರಿಕೆ ನೀಡಿದ್ದೇವೆ. ಮೃತರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತ್ಯೇಕವಾಗಿ 2 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುತ್ತಿದೆ. ಗಾಯಾಳುಗಳಿಗೆ 50,000 ರೂ.ಗಳನ್ನು ನೀಡಲಾಗುತ್ತದೆ. ನಾವು 24 ಗಂಟೆಗಳ ಒಳಗೆ ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ. ಯಾರೇ ತಪ್ಪಿತಸ್ಥರು ಇದ್ದರೂ ಶಿಕ್ಷೆ ನೀಡಲಾಗುವುದು. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಂಪರ್ಕದಲ್ಲಿರುತ್ತೇವೆ” ಎಂದು ಉತ್ತರ ಪ್ರದೇಶದ ಸಚಿವ ಸಂದೀಪ್ ಸಿಂಗ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ