ಉತ್ತರ ಪ್ರದೇಶದ ಕಾನ್​ಪುರ, ಸಹರಾನ್​ಪುರಗಳಲ್ಲಿ ಬೀದಿಗಿಳಿದ ಬುಲ್​ಡೋಜರ್​ಗಳು: ಹಿಂಸಾಚಾರಕ್ಕಿಳಿದವರ ಆಸ್ತಿ ತೆರವಿಗೆ ಮುಂದಾದ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 12, 2022 | 8:14 AM

ಹಿಂಸಾಚಾರದ ಪ್ರಮುಖ ಆರೋಪಿಗಳ ಆಸ್ತಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಬುಲ್​ಡೋಜರ್​ಗಳನ್ನು ಉತ್ತರ ಪ್ರದೇಶ ಸರ್ಕಾರ ಬಳಸುತ್ತಿದೆ.

ಉತ್ತರ ಪ್ರದೇಶದ ಕಾನ್​ಪುರ, ಸಹರಾನ್​ಪುರಗಳಲ್ಲಿ ಬೀದಿಗಿಳಿದ ಬುಲ್​ಡೋಜರ್​ಗಳು: ಹಿಂಸಾಚಾರಕ್ಕಿಳಿದವರ ಆಸ್ತಿ ತೆರವಿಗೆ ಮುಂದಾದ ಸರ್ಕಾರ
ಕಾನ್​ಪುರದಲ್ಲಿ ಗಲಭೆಯಲ್ಲಿ ತೊಡಗಿದವರ ಕಟ್ಟಡ ತೆರವುಗೊಳಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
Image Credit source: ANI
Follow us on

ಲಖನೌ: ಉತ್ತರ ಪ್ರದೇಶದ ಕಾನ್​ಪುರ್ ಮತ್ತು ಸಹರಾನ್​ಪುರ ಜಿಲ್ಲೆಗಳಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ (Uttar Pradesh Violence) ಪಾಲ್ಗೊಂಡ ಶಂಕಿತರ ಆಸ್ತಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಬುಲ್​ಡೋಜರ್​ಗಳನ್ನು ಉತ್ತರ ಪ್ರದೇಶ ಸರ್ಕಾರ ಬಳಸುತ್ತಿದೆ. ಹಿಂಸಾಚಾರದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡವರಷ್ಟೇ ಅಲ್ಲ, ಅವರ ಸಂಬಂಧಿಕರನ್ನೂ ಗುರಿಯಾಗಿಸಿ ಕಾರ್ಯಾಚರಣೆ ನಡೆಸಲು ಸರ್ಕಾರ ಮುಂದಾಗಿದೆ. ಜೂನ್ 3ರ ಹಿಂಸಾಚಾರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದ ಆರೋಪಿ ಝಾಫರ್ ಹಯಾತ್ ಹಷ್ಮಿ ಎನ್ನುವವರ ಹತ್ತಿರದ ಸಂಬಂಧಿಗೆ ಸೇರಿದ್ದ ಎನ್ನಲಾದ ಕಾನ್​ಪುರದ ಬಹುಮಹಡಿ ಕಟ್ಟಡವೊಂದನ್ನು ಕೆಡವಲಾಗಿದೆ. ಕಾನ್​ಪುರದ  (Kanpur) ಸ್ವರೂಪ್ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ತೆರವು ಕಾರ್ಯಾಚರಣೆ ನಿರ್ವಹಿಸುತ್ತಿರುವ ಕಾನ್​ಪುರ್ ಅಭಿವೃದ್ಧಿ ಪ್ರಾಧಿಕಾರವು (Kanpur Development Authority – KDA) ಇದೊಂದು ಮಾಮೂಲಿ ಕಾರ್ಯಾಚರಣೆ. ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಕಟ್ಟಡದ ಮಾಲೀಕರಾದ ಹಾಜಿ ಇಶ್​ಖಿಯಾಖ್ ಅವರಿಗೆ ವರ್ಷದ ಹಿಂದೆಯೇ ನೊಟೀಸ್ ನೀಡಲಾಗಿತ್ತು. ಅವರು ಇತ್ತೀಚೆಗಷ್ಟೇ ನಿಧನರಾಗಿದ್ದರು. ಈ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಹೀಗಾಗಿಯೇ ತೆರವುಗೊಳಿಸಲು ಮುಂದಾಗಿದ್ದೇವೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಹೇಳಿದರು.

ಇಶ್​ಖಿಯಾಖ್ ಅವರ ಮಗ ಇಫ್ತಿಕಾರ್ ಅವರು ಕಟ್ಟಡದಲ್ಲಿ ದರ್ಜಿಯಾಗಿದ್ದಾರೆ. ತಮಗೆ ಯಾವುದೇ ನೊಟೀಸ್ ನಿಡಿಲ್ಲ ಎಂದು ಅವರು ವಾದಿಸಿದ್ದಾರೆ. ಈ ಕಟ್ಟಡವು ಅಕ್ರಮ ಎಂದು ಹೇಳುವುದಾದರೆ, ಯಾವ ಕಾರಣಕ್ಕೆ ಹೀಗೆ ಹೇಳಲಾಗುತ್ತಿದೆ ಎಂದು ವಿವರಿಸಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಈ ಕಟ್ಟಡವು ಇಫ್ತೆಖಾರ್ ಕುಟುಂಬಕ್ಕೆ ಸೇರಿದ್ದರು. ಭೂ ಮಾಫಿಯಾದಲ್ಲಿ ಸಕ್ರಿಯನಾಗಿರುವ ಹಾಜಿ ವಾಸಿ ಈ ಕಟ್ಟಡ ಕಟ್ಟಿದ್ದ. ಈ ಪ್ರದೇಶದ ಜನರಿಗೆ ಈ ಕುರಿತು ತಿಳಿದಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಎರಡು ಬುಲ್​ಡೋಜರ್​ಗಳು ಕಟ್ಟಡದ ಮುಂಭಾಗದ ನಿರ್ಮಾಣಗಳನ್ನು ತೆರವುಗೊಳಿಸಿದವು.

ನಿಯಮಗಳಿಗೆ ಅನುಗುಣವಾಗಿಯೇ ತೆರವು ಕಾರ್ಯಾಚರಣೆ ನಡೆದಿದೆ ಎಂದು ಜಂಟಿ ಪೊಲೀಸ್ ಆಯುಕ್ತರಾದ ಆನಂದ್ ಪ್ರಕಾಶ್ ತಿವಾರಿ ಹೇಳಿದರು. ಗಲಭೆಯ ಮುಖ್ಯ ಆರೋಪಿ ಈ ಕಟ್ಟಡ ನಿರ್ಮಿಸಿದ್ದಾನೆ. ಹೀಗಾಗಿಯೇ ಸರ್ಕಾರವು ತರಾತುರಿಯಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ ನಂತರ, ಜೂನ್ 3ರಂದು ಕಾನ್​ಪುರದಲ್ಲಿ ಹಿಂಸಾಚಾರ ಆರಂಭವಾಗಿತ್ತು.

ಈ ನಡುವೆ ನೂಪುರ್ ಶರ್ಮಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ ಓವೈಸಿ, ‘ದೇಶಾದ್ಯಂತ ಮುಸ್ಲಿಮರು ನಡೆಸುತ್ತಿರುವುದು ಹಿಂಸಾಚಾರವಲ್ಲ. ಅದು ಪ್ರತಿಭಟನೆ. ಹಿಂಸಾಚಾರವನ್ನು ತಡೆಯುವುದು ಸರ್ಕಾರದ ಕರ್ತವ್ಯ’ ಎಂದು ಓವೈಸಿ ಸರ್ಕಾರಕ್ಕೆ ಚಾಟಿ ಬೀಸಿದ್ದರು. ಇನ್ನು ರಾಂಚಿಯಲ್ಲಿ ಜನರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯನ್ನೂ ಓವೈಸಿ ಖಂಡಿಸಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:12 am, Sun, 12 June 22