ಮಧ್ಯ ಪ್ರದೇಶ: ರೈಲಿನಲ್ಲಿ ಹಿಂದೂ ಮಹಿಳೆಯ ಜತೆ ಪ್ರಯಾಣಿಸಿದ ಮುಸ್ಲಿಂ ವ್ಯಕ್ತಿಯನ್ನು ಬಲವಂತವಾಗಿ ಹೊರಗಿಳಿಸಿದ ಭಜರಂಗ ದಳ ಕಾರ್ಯಕರ್ತರು

ಮಧ್ಯ ಪ್ರದೇಶ: ರೈಲಿನಲ್ಲಿ ಹಿಂದೂ ಮಹಿಳೆಯ ಜತೆ ಪ್ರಯಾಣಿಸಿದ ಮುಸ್ಲಿಂ ವ್ಯಕ್ತಿಯನ್ನು ಬಲವಂತವಾಗಿ ಹೊರಗಿಳಿಸಿದ ಭಜರಂಗ ದಳ ಕಾರ್ಯಕರ್ತರು
ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ ಭಜರಂಗ ದಳ ಕಾರ್ಯಕರ್ತರು (ವಿಡಿಯೊ ಚಿತ್ರ)

ಇಂದೋರ್‌ ಮೂಲದ ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆ ಕುಟುಂಬ ಸ್ನೇಹಿತರಾಗಿದ್ದಾರೆ. ಇವರನ್ನು ಸರ್ಕಾರಿ ರೈಲ್ವೆ ಪೊಲೀಸರು (GRP) ವಿಚಾರಣೆಗೊಳಪಡಿಸಿದ್ದು ಅವರ ಪೋಷಕರು ಬರುವವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಹೇಳಲಾಗಿತ್ತು.

TV9kannada Web Team

| Edited By: Rashmi Kallakatta

Jan 19, 2022 | 11:27 AM

ಭೋಪಾಲ್: ರೈಲಿನಲ್ಲಿ ಜತೆಯಾಗಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿ ಮತ್ತು ವಿವಾಹಿತ ಹಿಂದೂ ಮಹಿಳೆಯನ್ನು ಭಜರಂಗದಳದ (Bajrang Dal)ಸದಸ್ಯರು ಅಜ್ಮೀರ್‌ಗೆ ಹೋಗುವ ರೈಲಿನಿಂದ ಬಲವಂತವಾಗಿ ಕೆಳಗಿಳಿಸಿ ಉಜ್ಜಯಿನಿಯ ( Ujjain) ರೈಲ್ವೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದು “ಲವ್ ಜಿಹಾದ್” ಎಂದು ಆರೋಪಿಸಿ ಭಜರಂಗದಳದ ಸದಸ್ಯರು ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.  “ಇಂದೋರ್‌ ಮೂಲದ ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆ ಕುಟುಂಬ ಸ್ನೇಹಿತರಾಗಿದ್ದಾರೆ. ಇವರನ್ನು ಸರ್ಕಾರಿ ರೈಲ್ವೆ ಪೊಲೀಸರು (GRP) ವಿಚಾರಣೆಗೊಳಪಡಿಸಿದ್ದು ಅವರ ಪೋಷಕರು ಬರುವವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಹೇಳಲಾಗಿತ್ತು. ಅವರ ಹೇಳಿಕೆಗಳನ್ನು ದಾಖಲಿಸಿದ ನಂತರ ಅವರನ್ನು ಠಾಣೆಯಿಂದ ಹೋಗುವಂತೆ ಹೇಳಿದ್ದಾರೆ. ಜಿಆರ್‌ಪಿ ಪ್ರಕಾರ ಯಾವುದೇ ದೂರು ಇಲ್ಲದ ಕಾರಣ ಭಜರಂಗದಳ ಸದಸ್ಯರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆ ಜನವರಿ 14 ರಂದು ನಡೆದಿದೆ. ವ್ಯಕ್ತಿಯನ್ನು ಸಣ್ಣ ಎಲೆಕ್ಟ್ರಾನಿಕ್ ಅಂಗಡಿಯ ಮಾಲೀಕ ಆಸಿಫ್ ಶೇಖ್ ಎಂದು ಗುರುತಿಸಲಾಗಿದ್ದು, ಮಹಿಳೆ ಖಾಸಗಿ ಶಾಲಾ ಶಿಕ್ಷಕಿಯಾಗಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೊವೊಂದರಲ್ಲಿ, ತಮ್ಮನ್ನು ಭಜರಂಗದಳದ ಕಾರ್ಯಕರ್ತರು ಎಂದು ಗುರುತಿಸಿಕೊಂಡ ಮೂವರು ಪುರುಷರು ಶೇಖ್‌ನನ್ನು ರೈಲು ಕೋಚ್‌ನಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅವರು ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ, ಮಹಿಳೆ ಅವರ ಹಿಂದೆ ನಡೆಯುತ್ತಿರುವುದು ವಿಡಿಯೊದಲ್ಲಿದೆ.

ಪೊಲೀಸ್ ಠಾಣೆಯೊಳಗೆ ದಾಖಲಾದ ಮತ್ತೊಂದು ವಿಡಿಯೊದಲ್ಲಿ, ಮಹಿಳೆ ಭಜರಂಗದಳದ  ಕಾರ್ಯಕರ್ತರ ಮೇಲೆ ರೇಗಾಡುತ್ತಿರುವುದು ಕಾಣಬಹುದು. “ನಿಮ್ಮ ಒಂದು ತಪ್ಪು ತಿಳುವಳಿಕೆ ನನ್ನ ಜೀವನವನ್ನು ಹಾಳುಮಾಡಬಹುದು. ನಾನು ವಯಸ್ಕ ಮಹಿಳೆ, ನಾನು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತೇನೆ, ನಾನು ಮಕ್ಕಳಿಗೆ ಕಲಿಸುತ್ತೇನೆ, ”ಎಂದು ಆಕೆ  ಹೇಳುತ್ತಾರೆ. ಭಜರಂಗದಳದ ಕಾರ್ಯಕರ್ತನಾದ ಪಿಂಟು ಕೌಶಲ್ ಎಂಬಾತ ನಾನು ನಿನ್ನ ಜತೆ ಮಾತನಾಡುತ್ತಿಲ್ಲ ಎಂದು ಮಹಿಳೆಯಲ್ಲಿ ಹೇಳುತ್ತಿರುವುದು ವಿಡಿಯೊದಲ್ಲಿದೆ.

ಜಿಆರ್‌ಪಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತಾ ಮಾತನಾಡಿ, ಶೇಖ್ ಮತ್ತು ಮಹಿಳೆ ಕುಟುಂಬದ ಸ್ನೇಹಿತರಾಗಿದ್ದು, ವರ್ಷಗಳಿಂದ ಪರಸ್ಪರ ಪರಿಚಿತರು. “ಲವ್ ಜಿಹಾದ್” ಎಂದು ಆರೋಪಿಸಿ ಭಜರಂಗದಳದ ವ್ಯಕ್ತಿಗಳು ಅವರನ್ನು ಪೊಲೀಸ್ ಠಾಣೆಗೆ ಕರೆತಂದ ನಂತರ, ನಾವು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ ಮತ್ತು ಅವರಿಬ್ಬರೂ ವಯಸ್ಕರಾಗಿದ್ದರಿಂದ ಮತ್ತು ಯಾವುದೇ ದೂರು ಇಲ್ಲದ ಕಾರಣ ಅವರನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಭಜರಂಗದಳದ ಕಾರ್ಯಕರ್ತರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. “ಪೊಲೀಸ್ ಠಾಣೆಗೆ ಕರೆತರುವಾಗ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆದಿದೆ ಎಂದು ನಮಗೆ ತಿಳಿದಿರಲಿಲ್ಲ ಮತ್ತು ಇಬ್ಬರೂ ನಮಗೆ ಹೇಳಲಿಲ್ಲ. ಭಜರಂಗದಳದವರ ವಿರುದ್ಧ ಯಾವುದೇ ದೂರು ಇಲ್ಲದ ಕಾರಣ, ನಾವು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಗುಪ್ತಾ ಹೇಳಿದ್ದಾರೆ.

ಭಜರಂಗ ದಳದ ವಿದ್ಯಾರ್ಥಿಗಳ ವಿಭಾಗವಾಗಿರುವ ವಿಎಚ್‌ಪಿಯ ಮಾಳವ ಪ್ರಾಂತದ ಪ್ರಚಾರ ಪ್ರಮುಖ್ ಕುಂದನ್ ಚಂದ್ರಾವತ್ ಅವರು, “ಹಿಂದೂ ಮಹಿಳೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬರು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅವನೊಂದಿಗೆ ಕರೆದೊಯ್ಯುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮೂಲಗಳ ಮೂಲಕ ಮಾಹಿತಿ ಇದೆ” ಎಂದು ಹೇಳಿದರು.

“ನಮ್ಮ ಹಿಂದೂ ಸಹೋದರಿಯರ ರಕ್ಷಣೆಗಾಗಿ ನಮ್ಮ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದಾರೆ.ಆಗ ಮನುಷ್ಯ ರೊಚ್ಚಿಗೆದ್ದ. ಅವರು ಆತನನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ಪ್ರಕ್ರಿಯೆಯಲ್ಲಿ ವ್ಯಕ್ತಿ ಮತ್ತು ಕಾರ್ಯಕರ್ತರ ನಡುವೆ ಸಣ್ಣ ಜಗಳ ನಡೆದಿದೆ.ಆದರೆ ಯಾರಿಗೂ ಥಳಿಸಲಾಗಿಲ್ಲ. ಕಾರ್ಯಕರ್ತರು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿ ಹೊರಟು ಹೋದರು” ಎಂದು ಚಂದ್ರಾವತ್ ಹೇಳಿದರು.

ಇದನ್ನೂ ಓದಿ: ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ

Follow us on

Related Stories

Most Read Stories

Click on your DTH Provider to Add TV9 Kannada