ರಕ್ತ, ನೀರು ಒಟ್ಟಿಗೆ ಹರಿಯಲ್ಲ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ
Narendra Modi speech highlights: ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂದೂರದ ಬಳಿಕ ಅವರು ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಹೆಣ್ಮಕ್ಕಳ ಸಿಂದೂರ ಅಳಿಸಿದ ಉಗ್ರರಿಗೆ ತಕ್ಕ ಪಾಠ ಕಲಿಸಲಾಗಿದೆ ಎಂದು ತಿಳಿಸಿದ್ದಾರೆ.

ನವದೆಹಲಿ, ಮೇ 12: ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದೇ ಆದಲ್ಲಿ ಅದು ಭಯೋತ್ಪಾದನೆ ವಿಚಾರವಾಗಿ ಆಗುತ್ತದೆ, ಅಥವಾ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ವಿಚಾರವಾಗಿ ಆಗುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂದೂರ (Operation Sindoor) ಶುರುವಾದ ಬಳಿಕ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಪಾಕಿಸ್ತಾನ ಹಾಗೂ ಅದರ ಉಗ್ರ ಕೃತ್ಯಗಳನ್ನು ಕಟುವಾಗಿ ಖಂಡಿಸಿದರು. ಮಾತುಕತೆಗೆ ಕೂರುವಂತೆ ಭಾರತವನ್ನು ಒತ್ತಾಯಿಸುತ್ತಿರುವ ಪಾಕಿಸ್ತಾನಕ್ಕೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಇರಲು ಸಾಧ್ಯ ಇಲ್ಲ. ವ್ಯಾಪಾರ ಮತ್ತು ಭಯೋತ್ಪಾದನೆ ಒಟ್ಟಿಗೆ ಆಗಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯ ಇಲ್ಲ ಎಂದು ನರೇಂದ್ರ ಮೋದಿ ಹೇಳಿದರು. ಈ ಮೂಲಕ, ಪಾಕಿಸ್ತಾನ ಭಾರತದ ಜೊತೆ ಮಾತುಕತೆಗೆ ಬರುವ ಆಸಕ್ತಿ ಇದ್ದರೆ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಲಿ ಎನ್ನುವ ಖಡಕ್ ಸಂದೇಶವನ್ನು ಪ್ರಧಾನಿಗಳು ರವಾನಿಸಿದರು.
ಇದನ್ನೂ ಓದಿ: ಭಾರತೀಯ ಹೆಣ್ಮಕ್ಕಳ ಸಿಂದೂರ ಅಳಿಸಿದರೆ ಪರಿಣಾಮ ಏನೆಂತ ಉಗ್ರರಿಗೆ ತೋರಿಸಿದ್ದೇವೆ: ಪ್ರಧಾನಿ ನರೇಂದ್ರ ಮೋದಿ
ಹಾಗೆಯೇ, ನೀರು ಮತ್ತು ರಕ್ತ ಒಟ್ಟಿಗೆ ಹರಿಯೋದಿಲ್ಲ ಎಂದು ಹೇಳುವ ಮೂಲಕ ಅವರು ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಬಿಡುವ ನಿರ್ಧಾರ ಸದ್ಯಕಂತೂ ಇಲ್ಲ ಎನ್ನುವ ಸಂದೇಶ ನೀಡಿದರು. ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನದೊಂದಿಗೆ ಮಾಡಿಕೊಳ್ಳಲಾದ ಸಿಂಧೂ ಜಲ ಒಪ್ಪಂದದಿಂದ ಭಾರತ ಹಿಂದಕ್ಕೆ ಸರಿಯಿತು. ತನ್ನ ಅಣೆಕಟ್ಟೆಯಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಿದೆ. ಈ ಸಿಂಧೂ ನದಿಯು ಪಾಕಿಸ್ತಾನದ ಶೇ. 40ರಷ್ಟು ಕೃಷಿಗೆ ಆಧಾರವಾಗಿದೆ. ಭಾರತದ ಈ ನಿರ್ಧಾರವು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಭಾರತೀಯ ಹೆಣ್ಮಕ್ಕಳ ಸಿಂದೂರ ಅಳಿಸಿದರೆ ಏನಾಗುತ್ತೆ ನೋಡಿ…
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಸೇನೆ ನಡೆಸಿದ ಆಪರೇಷನ್ ಸಿಂದೂ ಯಶಸ್ವಿಯಾಯಿತು ಎಂದು ಹೇಳಿದರು. ಸೇನೆಯ ಈ ಪರಾಕ್ರಮವನ್ನು ಎಲ್ಲಾ ದೇಶವಾಸಿಗಳು ಹಾಗೂ ಹೆಣ್ಮಕ್ಕಳಿಗೆ ಅರ್ಪಿಸುತ್ತೇವೆ ಎಂದರು.
ಇದನ್ನೂ ಓದಿ: ದೇಶದ ಹೆಣ್ಣುಮಕ್ಕಳಿಗೆ ‘ಆಪರೇಷನ್ ಸಿಂಧೂರ’ ಅರ್ಪಿಸಿದ ಪ್ರಧಾನಿ ಮೋದಿ
ಹೆಣ್ಮಕ್ಕಳ ಸಿಂದೂರ ಅಳಿಸಿದರೆ ಪರಿಣಾಮ ಏನು ಎಂಬುದು ಉಗ್ರರಿಗೆ ಗೊತ್ತಾಗಿದೆ. ಭಾರತದಿಂದ ಈ ದೊಡ್ಡ ನಡೆ ಎದುರಾಗುತ್ತದೆ ಎಂದು ಉಗ್ರರು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ